ಬೆಂಗಳೂರು
ರೈಲ್ವೆ ಸ್ಟೇಷನ್ ಅಂದರೆ ಮೊದಲಿಗೆ ನೆನಪಾಗುವುದೇ ಟಿಕೆಟ್ ಕೌಂಟರ್ ಮುಂದಿನ ಸರದಿ ಸಾಲು. ಅದರಲ್ಲೂ ಹಬ್ಬಗಳ ಸೀಸನ್ ಬಂದರೆ ಸಾಕು, ಹೆಜ್ಜೆ ಹೆಜ್ಜೆಗೂ ಪ್ರಯಾಣಿಕರಿರುತ್ತಾರೆ. ಕ್ಯೂ ಉದ್ದ ಇರುತ್ತದೆ. ಕೆಲವರು ಟಿಕೆಟ್ ಸಿಗದೆ ವಾಪಸ್ ಆಗುವ ಘಟನೆಯೂ ಕೂಡ ನಡೆಯುತ್ತವೆ. ಆದರೆ, ಇದೀಗ ಪ್ರಯಾಣಿಕರ ಸಂಕಷ್ಟ ತಪ್ಪಿಸಲು ನೈರುತ್ಯ ರೈಲ್ವೆ ಹೊಸ ಯೋಜನೆ ಶುರು ಮಾಡುತ್ತಿದೆ.
ಇನ್ಮುಂದೆ ರೈಲ್ವೆ ಪ್ರಯಾಣಿಕರು ಟಿಕೆಟ್ಗಾಗಿ ಕೌಂಟರ್ ಮುಂದೆ ಸರದಿಯಲ್ಲಿ ನಿಂತು ಕಾಯಬೇಕಲ್ಲ. ಪ್ರಯಾಣಿಕರ ದಟ್ಟಣೆಯ ಸಮಯದಲ್ಲಿ, ಪ್ರಯಾಣಿಕರಿದ್ದ ಜಾಗಕ್ಕೆ ಹೋಗಿ ಟಿಕೆಟ್ ಕೊಡಲು ನೈರುತ್ಯ ರೈಲ್ವೆ ಎಂ-ಯುಟಿಎಸ್ ವ್ಯವಸ್ಥೆ ಪರಿಚಯಿಸಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಸರ್.ಎಂ.ವಿಶ್ವೇಶರಯ್ಯ ನಿಲ್ದಾಣ, ಯಶವಂತಪುರ ರೈಲು ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಹೊಸ ವ್ಯವಸ್ಥೆ ಜಾರಿಗೆ ಬಂದಿದೆ.
ಎಂ-ಯುಟಿಎಸ್ ಯಂತ್ರಗಳ ಮೂಲಕ ಕಾಯ್ದಿರಿಸದ ಟಿಕೆಟ್, ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಪ್ರಯಾಣಿಕರು ನಿಂತಿರುವ ಜಾಗಕ್ಕೆ ಹೋಗಿ ಸಿಬ್ಬಂದಿ ಕೊಡಲಿದ್ದಾರೆ. ನಿಲ್ದಾಣದಿಂದ 500-ಮೀಟರ್ ಅಂತರದಲ್ಲಿ ಎಂ-ಯುಟಿಎಸ್ ಟಿಕೆಟ್ ವಿತರಿಸಲು ಅವಕಾಶವಿದೆ ಎಂದು ನೈರುತ್ಯ ರೈಲ್ವೇ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾದ ತ್ರಿನೇತ್ರ ಕೆಆರ್ ತಿಳಿಸಿದ್ದಾರೆ.
ಎಂ-ಯುಟಿಎಸ್ ಎಂಬುದು ಯುಟಿಎಸ್ ಆ್ಯಪ್ ಸೇವೆಗಿಂತ ತುಸು ವಿಭಿನ್ನವಾಗಿದೆ. ಯುಟಿಎಸ್ ಆ್ಯಪ್ ಮೂಲಕ ನಾವೇ ಟಿಕೆಟ್ ಪಡೆಯಬೇಕು. ಆದರೆ, ಎಂ-ಯುಟಿಎಸ್‌ನಲ್ಲಿ ರೈಲ್ವೆ ಸಿಬ್ಬಂದಿ ಟಿಕೆಟ್ ನೀಡುತ್ತಾರೆ. ನೈರುತ್ಯ ರೈಲ್ವೆಯ ಈ ಹೊಸ ಸೇವೆಗೆ ಪ್ರಯಾಣಿಕರು ಖುಷಿಯಾಗಿದ್ದು, ತುಂಬಾ ಸಮಯ ಉಳಿಯುತ್ತೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಯಾಣಿಕರಿಗೆ ನಿಂತಲ್ಲಿಯೇ ಟಿಕೆಟ್ ಸಿಗುವುದರಿಂದ ದಟ್ಟಣೆ ತಗ್ಗಲಿದೆ. ಇಷ್ಟು ದಿನ ಹಬ್ಬಗಳ ಸಂದರ್ಭದಲ್ಲಿ ಕೆಲವರು ಸರದಿಯಲ್ಲಿ ನಿಂತು ಟಿಕೆಟ್ ಸಿಗದೆ ವಾಪಾಸಾಗುತ್ತಿದ್ದರು. ಇನ್ನು ಕೆಲವರು ಟಿಕೆಟ್ ಸಿಗದ ಕಾರಣ ಟಿಕೆಟ್ ರಹಿತ ಪ್ರಯಾಣಿಸಿ ಸಿಕ್ಕಿ ಬೀಳುತ್ತಿದ್ದರು. ಆದರೆ, ಈ ಎಲ್ಲಾ ಸಮಸ್ಯೆಗಳಿಗೆ ಎಂ-ಯುಟಿಎಸ್ ಆ್ಯಪ್ ಮುಕ್ತಿಕೊಟ್ಟಿದ್ದು, ಆದಷ್ಟು ಬೇಗ ಈ ವ್ಯವಸ್ಥೆ ಎಲ್ಲಾ ರೈಲು ನಿಲ್ದಾಣಗಳಲ್ಲಿ ಬರಲಿ ಎಂದು ಪ್ರಯಾಣಿಕರು ಆಶಯ ವ್ಯಕ್ತಪಡಿಸಿದ್ದಾರೆ. ಸದ್ಯ ಬೆಂಗಳೂರಿನ ರೈಲು ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಿರುವ ಈ ವ್ಯವಸ್ಥೆ ಯಶಸ್ವಿಯಾದರೆ ಇತರ ರೈಲು ನಿಲ್ದಾಣಗಳಿಗೂ ಬರುವ ದಿನ ದೂರವಿಲ್ಲ.








