ದಾವಣಗೆರೆ:
ಹಣ ಬಯಸದೇ ರೋಗಿಗಳ ಸೇವೆಯಲ್ಲಿಯೇ ಭಗವಂತನನ್ನು ಕಾಣಬೇಕೆಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ಶುಶ್ರೂಷಕರಿಗೆ ಕರೆ ನೀಡಿದರು.
ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಬುಧವಾರ ಕರ್ನಾಟಕ ರಾಜ್ಯ ಇಎಸ್‍ಐಎಸ್ ಶುಶ್ರೂಷಕರ ಸಂಘದ ದಾವಣಗೆರೆ ಜಿಲ್ಲಾ ಶಾಖೆಯಿಂದ ಏರ್ಪಡಿಸಿದ್ದ 3ನೇ ರಾಜ್ಯ ಮಟ್ಟದ ಇಎಸ್‍ಐಎಸ್ ಶುಶ್ರೂಷಕರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಮಾಡುವವರ ಕೈ ಶುದ್ಧವಾಗಿರಬೇಕು. ಶುಶ್ರೂಷಕರು ಜನರಿಂದ ಹಣ ಬಯಸದೇ, ರೋಗಿಗಳ ಸೇವೆಯಲ್ಲಿಯೆ ಭಗವಂತನನ್ನು ಕಾಣುವ ಕಾಯಕ ಮಾಡಿದರೆ ಮಾತ್ರ ಫ್ಲಾರೆನ್ಸ್ ನೈಟಿಂಗೇಲ್ ಅವರ ಹೆಸರಿನಲ್ಲಿ ನಡೆಸುತ್ತಿರುವ ಸಮ್ಮೇಳನಕ್ಕೆ ಅರ್ಥ ಬರಲಿದೆ ಎಂದರು.
ಆಸ್ಪತ್ರೆಗೆ ಬರುವ ರೋಗಿ ತನ್ನ ಜೀವವನ್ನೇ ವೈದ್ಯರ ಕೈಗೆ ನೀಡುತ್ತಾನೆ. ಇಂಥಹ ಸಂದರ್ಭದಲ್ಲಿ ರೋಗಿಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದಿದ್ದರೆ, ವೈದ್ಯರು ತಮ್ಮ ವೃತ್ತಿಗೆ ವಂಚನೆ ಮಾಡಿದಂತಾಗಲಿದೆ. ವೈದ್ಯರು ರೋಗಿಯ ಪ್ರಾಥಮಿಕ ತಪಾಸಣೆ ನಡೆಸಿ, ರೋಗ ಪತ್ತೆ ಮಾಡಿ ಚಿಕಿತ್ಸೆ ನೀಡಬಹುದು. ಆದರೆ, ನಂತರ ರೋಗಿ ಗುಣಮುಖನಾಗುವ ನಿಟ್ಟಿನಲ್ಲಿ ರೋಗಿಯಲ್ಲಿ ಆತ್ಮವಿಶ್ವಾಸ ಮೂಡಿಸುವುದರಲ್ಲಿ ದಾದಿಯರ ಸೇವೆ ಅತ್ಯವಶ್ಯವಾಗಿದೆ. ಆದ್ದರಿಂದ ವೈದ್ಯ ವೃತ್ತಿಗಿಂತ ದಾದಿಯರ ಸೇವೆ ಅನನ್ಯ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ದಾವಣಗೆರೆಯ ಇಎಸ್‍ಐ ಆಸ್ಪತ್ರೆಗೆ ಮಲ್ಲಿಕಾರ್ಜುನ್ ಖರ್ಗೆಯವರು ಕೇಂದ್ರ ಕಾರ್ಮಿಕ ಸಚಿವರಾಗಿದ್ದ ವೇಳೆಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ಇಎಸ್‍ಐ ಆಸ್ಪತ್ರೆ ನಿರ್ಮಿಸಲು ಸಹಕರಿಸಿದ್ದರು. ಬಂಡಾರು ದತ್ತಾತ್ರಿಯವರು ಸಚಿವರಾಗಿದ್ದ ಸಂದರ್ಭದಲ್ಲಿ ಇತರೆ ಸೌಲಭ್ಯಗಳಿಗಾಗಿ 6 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದರು. ಪ್ರಸ್ತುತ ಆಸ್ಪತ್ರೆ ಐವತ್ತು ಹಾಸಿಗೆಗಳನ್ನು ಹೊಂದಿದ್ದು. ನೂರು ಹಾಸಿಗೆಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಶೀಘ್ರದಲ್ಲಿಯೇ ಹುಬ್ಬಳ್ಳಿಗೆ ಭೇಟಿ ನೀಡಲಿರುವ ಕೇಂದ್ರ ಸಚಿವ ಸಂತೋಷ್ ಗಂಗಾವರ ಅವರೊಂದಿಗೆ ಚರ್ಚಿಸುತ್ತೇನೆಂದು ಭರವಸೆ ನೀಡಿದರು.
ಇಎಸ್‍ಐ ಆಸ್ಪತ್ರೆಗೆ ಇನ್ನೂ ಹಲವು ಪರಿಕರಗಳ ಅವಶ್ಯಕತೆ ಇದೆ. ಆದ್ದರಿಂದ ಆಸ್ಪತ್ರೆಯ ಮುಖ್ಯಸ್ಥರು ಸ್ಥಳೀಯ ರಾಜಕಾರಣಿಗಳನ್ನು ಬೆನ್ನು ಸೌಲಭ್ಯ ತರುವ ನಿಟ್ಟಿನಲ್ಲಿ ಕೆಲಸ ಮಾಡಿ, ಆಸ್ಪತ್ರೆಯ ಅಭಿವೃದ್ಧಿಗೆ ಶ್ರಮಿಸಬೇಕು. ಆದರೆ, ಇಲ್ಲಿಯ ಇಎಸ್‍ಐ ಆಸ್ಪತ್ರೆಯ ಮುಖ್ಯಸ್ಥರು ಕೆಲಸ ಮಾಡಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯ ಇಎಸ್‍ಐ ಶುಶ್ರೂಷಕರ ಸಂಘದ ಜಿಲ್ಲಾಧ್ಯಕ್ಷ ದಿವಾಕರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಾಧ್ಯಕ್ಷ ಎನ್.ಎಸ್.ದಿನೇಶ್ ಪ್ರಸ್ತಾವಿಕವಾಗಿ ಮಾತನಾಡಿದರು. ವೈದ್ಯಕೀಯ ಸೇವೆಗಳ ನಿರ್ದೇಶಕ ಡಾ.ಡಿ.ಎಸ್.ಕುಮಾರ್, ಉಪನಿರ್ದೇಶಕ ಡಾ.ರಾಮಕೃಷ್ಣ, ಅಧೀಕ್ಷಕಿ ಡಾ.ರೇಣುಕಾ ಮಾಡಲಗೇರಿ, ಉಪಾಧೀಕ್ಷಕ ಡಾ.ಪ್ರತಾಪ್, ನಿವಾಸಿ ವೈದ್ಯಾಧಿಕಾರಿ ಡಾ.ಉಮಾನಾಥ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಹಾಲೇಶಪ್ಪ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
