ತುರುವೇಕೆರೆ :
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿದೆಡೆ ಲಕ್ಷ್ಮಿಯನ್ನು ವಿಶೇಷ ಅಲಂಕಾರದೊಂದಿಗೆ ಪೂಜಿಸುವ ಮೂಲಕ ಬಹಳ ಶ್ರದ್ದಾಭಕ್ತಿಯಿಂದ ಆಚರಿಸಿದರು.
ಪಟ್ಟಣದಲ್ಲಿ ಹೆಚ್ಚಾಗಿ ಆಚರಿಸುವ ವರಮಹಾಲಕ್ಷ್ಮಿ ಹಬ್ಬವು ಅವರವರ ಅಂತಸ್ತಿಗೆ ತಕ್ಕಂತೆ ಆಚರಿಸಲಿದ್ದು ಹೆಂಗಳೆಯರಿಗೆ ಇದೊಂದು ವಿಶಿಷ್ಟ ಹಬ್ಬವಾಗಿದೆ. ತಮ್ಮ ತಮ್ಮ ಮನೆಗಳಲ್ಲಿ ಕಳಸಕ್ಕೆ ಬೆಳ್ಳಿ ಲಕ್ಷ್ಮಿ ಮುಖವಾಡವಿಟ್ಟು ವಜ್ರಾಭರಣ ತೊಡಿಸಿ ವಿಶೇಷವಾಗಿ ಅಲಂಕರಿಸುತ್ತಾರೆ. ದೇವಿಯ ಮುಂದೆ ಹಣವನ್ನಿಟ್ಟು ಪೂಜಿಸಿ ಹೆಚ್ಚು ಐಶ್ವರ್ಯ ನೀಡುವಂತೆ ದೇವಿಯನ್ನು ಆರಾಧಿಸುತ್ತಾರೆ. ಬೆಳಗಿನಿಂದಲೇ ಮಹಿಳೆಯರು ದೇವಿಗೆ ಬಣ್ಣ ಬಣ್ಣದ ಹೂವುಗಳಿಂದ ಸಿಂಗರಿಸಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ಸಂಬಂಧಿಕರ ಹಾಗು ಸ್ನೇಹಿತರ ಮನೆಗಳಿಗೆ ತರಳಿ ಕುಂಕುಮಕ್ಕೆ ಆಹ್ವಾನಿಸುತ್ತಾರೆ. ಕುಟುಂಬದವರೆಲ್ಲರೂ ಒಗ್ಗೂಡಿ ಪೂಜೆ ಸಲ್ಲಿಸಿ ಬಗೆ ಬಗೆ ಹಬ್ಬದೂಟ ಸವಿದು ಸಂಭ್ರಮಿಸುತ್ತಾರೆ.
ಹೂವು ಹಣ್ಣುಗಳ ಬೆಲೆ ಗಗನಕ್ಕೇರಿದ್ದರೂ ಸಹಾ ವರಮಹಾಲಕ್ಷ್ಮಿ ಹಬ್ಬವನ್ನು ಸಂಪ್ರದಾಯದಂತೆ ಅವರವರ ಶಕ್ತಾನುಸಾರ ಈ ಬಾರಿಯೂ ಆಚರಿಸಲಾಯಿತು.