ಲಾಕ್‍ಡೌನ್ ನಿಂದಾಗಿ ಶೇ. 40 ರಷ್ಟು ಕೈಗಾರಿಕೆಗಳು ಮುಚ್ಚುವ ಹಂತದಲ್ಲಿವೆ.!

ಬೆಂಗಳೂರು

   ರಾಜ್ಯದಲ್ಲಿ ಕೊರೋನಾ ವೈರಸ್ ಹೊಡೆತ ಮತ್ತು ಲಾಕ್‍ಡೌನ್ ನಿಂದಾಗಿ ಶೇ. 40 ರಷ್ಟು ಕೈಗಾರಿಕೆಗಳು ಮುಚ್ಚುವ ಹಂತದಲ್ಲಿದ್ದು, ಕೈಗಾರಿಕೆಗಳನ್ನೆ ನಂಬಿರುವ ಲಕ್ಷಾಂತರ ನೌಕರರು ಬೀದಿ ಪಾಲಾಗುವ ಆತಂಕ ಎದುರಾಗಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕಾ ಸಂಘ ಕಾಸಿಯಾ ಅಧ್ಯಕ್ಷ ಆರ್.ರಾಜು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

   ರಾಜ್ಯದ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುತ್ತಿರುವ ಸೂಕ್ಷ್ಮ ಹಾಗೂ ಸಣ್ಣ ಕೈಗಾರಿಕೆಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಸೂಕ್ತ ನಿರ್ದೇಶನಗಳನ್ನು ಕೊಡಬೇಕು ಎಂದಿದ್ದಾರೆ.

   ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಲಾಕ್‍ಡೌನ್‍ನಿಂದಾಗಿ ಕೈಗಾರಿಕೆಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿವೆ. ವಿಶೇಷವಾಗಿ ಹಣಕಾಸು ಸಮಸ್ಯೆಗಳಿಂದ ಕಾರ್ಮಿಕರ ಸಂಕಷ್ಟಗಳು ಹೆಚ್ಚಾಗಿವೆ. ಬಾಡಿಗೆ ಪಾವತಿ, ಬ್ಯಾಂಕುಗಳ ಬಡ್ಡಿ ಸಮಸ್ಯೆಗಳಿಗೆ ಯಾವುದೇ ನಿರ್ದಿಷ್ಟ ಪರಿಹಾರ ಲಭಿಸಿಲ್ಲ. ದೊರೆತಿರುವ ಅಲ್ಪ ಮಟ್ಟಿನ ಪರಿಹಾರಗಳನ್ನು ಸಂಬಂಧಪಟ್ಟ ಇಲಾಖೆಗಳು ಅನುಷ್ಠಾನಗೊಳಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

   ಪ್ರಮುಖವಾಗಿ ಎಫ್‍ಐಆರ್‍ಸಿ ಬಿಲ್ಲುಗಳನ್ನು ಕ್ಲಿಯರ್ ಮಾಡಿಸಲು ಕಾಲಾವಕಾಶ ವಿಸ್ತರಣೆ ಮಾಡಬೇಕು. ಅವಧಿ ಸಾಲ, ಓಡಿ, ಓಸಿಸಿ ಗಳಿಗೆ ಸಂಬಂಧಿಸಿದಂತೆ ಪ್ರೊಸೆಸಿಂಗ್, ಡಾಕ್ಯುಮೆಂಟೇಶನ್ ಶುಲ್ಕಗಳನ್ನು ಮನ್ನಾ ಅಥವಾ ಕಡಿಮೆ ಮಾಡಬೇಕು. ಈಗಾಗಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಘೋಷಿಸಲಾದ ರಿಯಾಯಿತಿ ಮತ್ತು ಯೋಜನೆಗಳನ್ನು ಬ್ಯಾಂಕುಗಳು ಅನುಷ್ಠಾನಗೊಳಿಸುವಂತೆ ನಿರ್ದೇಶನ ನೀಡಬೇಕು. ವಿವಿಧ ಸಾಲದ ಮೇಲಿನ ಬಡ್ಡಿಯನ್ನು 3 ತಿಂಗಳುಗಳ ಕಾಲ ಮನ್ನಾ ಮಾಡಬೇಕು. ಎಸ್‍ಎಂಇಗಳ ಹಣಕಾಸು ಸಮಸ್ಯೆಗಳನ್ನು ಪರಿಹರಿಸಲು ಎಲ್ಲಾ ಬ್ಯಾಂಕುಗಳಲ್ಲಿ ಹೆಲ್ಪ್‍ಡೆಸ್ಕ್ ತೆರೆಯಲು ನಿರ್ದೇಶನ ನೀಡಬೇಕು. ಎಲ್ಲಾ ಬಗೆಯ ವಿದ್ಯುತ್ ಹಾಗೂ ಜಿಎಸ್‍ಟಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಹೇಳಿದ್ದಾರೆ.

    6 ತಿಂಗಳುಗಳ ಇ.ಎಸ್.ಐ. ಮತ್ತು ಪಿ.ಎಫ್. ವಂತಿಗೆ ಪಾವತಿಯನ್ನು ಮನ್ನಾ ಮಾಡಬೇಕು. ವೇತನ ಪಾವತಿಗಾಗಿ ಲಾಕ್‍ಡೌನ್ ಸಮಯದಲ್ಲಿ ಕೆಲಸದ ದಿನಗಳ ಸಂಖ್ಯೆಯನ್ನು 25 ದಿನಗಳು ಎಂದು ಪರಿಗಣಿಸಿ, ಶೇ 70 ರಷ್ಟು ವೇತನವನ್ನು ಇ.ಎಸ್.ಐ.ಸಿ. ಅಥವಾ ಕಲ್ಯಾಣ ನಿಧಿಯ ಮೂಲಕ ನೀಡಲು ಶಿಫಾರಸ್ಸು ಮಾಡಬೇಕು. ಮುಂದಿನ 3 ವರ್ಷಗಳ ವರೆಗೆ ವೇತನ ಹೆಚ್ಚಳ, ಪರಿಷ್ಕರಣೆಗೆ ಅವಕಾಶ ಕೊಡಬಾರದು. ಲಾಕ್‍ಡೌನ್ ಸಮಯದ ನಷ್ಟ ಸರಿದೂಗಿಸಲು ಕೆಲಸದ ಸಮಯವನ್ನು 10 ಗಂಟೆಗಳಿಗೆ ಹೆಚ್ಚಿಸಬೇಕು ಎಂದು ಆರ್ ರಾಜು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link