ನವದೆಹಲಿ:

ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಆರೋಪದ ಹಿನ್ನಲೆಯಲ್ಲಿ ಸಂಸದ ಶತೃಘ್ನ ಸಿನ್ಹಾ ಅವರಿಗೆ ಬಿಜೆಪಿ ಶಾಕ್ ನೀಡಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡದಿರಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ತಮ್ಮ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದ ಸಂಸದ ಶತೃಘ್ನ ಸಿನ್ಹಾ ವಿರುದ್ಧ ಕೆಂಗಣ್ಣು ಬೀರಿರುವ ಬಿಜೆಪಿ ಹೈಕಮಾಂಡ್ ಸಿನ್ಹಾಗೆ ಟಿಕೆಟ್ ನಿರಾಕರಿಸಲು ಮುಂದಾಗಿದೆ ಎನ್ನಲಾಗಿದೆ. ಅವರ ಬದಲಿಗೆ ಸುಶೀಲ್ ಮೋದಿ ಅವರಿಗೆ ಟಿಕೆಟ್ ನೀಡಲು ಒಲವು ತೋರಿದೆ ಎನ್ನಲಾಗಿದೆ. ಬಿಹಾರದ ಪಾಟ್ನಾಸಾಹಿಬ್ ಕ್ಷೇತ್ರವನ್ನು ಶತೃಘ್ನ ಸಿನ್ಹಾ ಪ್ರತಿನಿಧಿಸುತ್ತಿದ್ದರು. ಇದೀಗ ಅದೇ ಕ್ಷೇತ್ರದಿಂದ ಬಿಜೆಪಿ ಸುಶೀಲ್ ಮೋದಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎನ್ನಲಾಗಿದೆ.
ಪ್ರಧಾನಿ ಮೋದಿ ಮತ್ತು ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಾಯಕತ್ವವನ್ನು ಸಿನ್ಹಾ ಬಹಿರಂಗವಾಗಿಯೇ ಪ್ರಶ್ನಿಸುತ್ತಿದ್ದರು. ಇದು ಬಿಜೆಪಿಗೆ ತೀವ್ರ ಮುಜುಗರವನ್ನುಂಟು ಮಾಡಿತ್ತು . 2014ರ ಲೋಕಸಭಾ ಚುನಾವಣೆ ಬಳಿಕ ಸಿನ್ಹಾ ಕೇಂದ್ರ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು . ಆದರೆ ಮೋದಿ ಸರ್ಕಾರ ಇದನ್ನು ನಿರ್ಲಕ್ಷಿಸಿತ್ತು. ಇದಾದ ಬಳಿಕ ಸಿನ್ಹಾ ಮೋದಿ ನಾಯಕತ್ವದ ವಿರುದ್ಧ ತಿರುಗಿಬಿದ್ದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅವಕಾಶ ಸಿಕ್ಕಾಗ ಬಹಿರಂಗ ಸಮಾವೇಶಗಳಲ್ಲಿಯೇ ಮೋದಿ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಿದ್ದರು. ಇದೇ ಕಾರಣಕ್ಕೆ ಅವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡದಿರಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಸಿನ್ಹಾ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರಲ್ಲಿ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅಂತೆಯೇ ಎರಡು ಬಾರಿ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
