ಬೆಳಗಾವಿ:
ಬೆಳಗಾವಿಯ ಕೆ.ಎಲ್.ಎಸ್ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರಪತಿ ಅವರು ದೇಶದ ಜಿಡಿಪಿ 8.2ರಷ್ಟಿದೆ. ನಾಲ್ಕನೇ ಔದ್ಯೋಗಿಕ ಕ್ರಾಂತಿಯತ್ತ ನಾವು ದಾಪುಗಾಲು ಹಾಕುತ್ತಿದ್ದೇವೆ. ಯುವ ಜನರ ಮಹಾತ್ವಾಂಕ್ಷೆ ಬದಲಾಗುತ್ತಿದೆ. ನಾವು ಸಾಂಪ್ರದಾಯಿಕ ಶಿಕ್ಷಣ ಪದ್ಧತಿ ಬಿಟ್ಟು ಹೊಸ ಶತಮಾನದ ಸಂಶೋಧನೆ ಆಧರಿತ ಶಿಕ್ಷಣದತ್ತ ಹೆಜ್ಜೆ ಹಾಕಬೇಕು ಎಂದು ಕರೆ ನೀಡಿದರು.
ವಕೀಲರು ಸಮಾಜದ ಅತ್ಯಂತ ಬಡ ಮತ್ತು ಅವಕಾಶ ವಂಚಿತರಿಗೆ ಅನುಕೂಲವಾಗುವ ಕೆಲಸ ಮಾಡಬೇಕು. ವಕೀಲ ವೃತ್ತಿ ಕೇವಲ ನೌಕರಿಯಲ್ಲ, ಅದು ಆತ್ಮ ಸಂತೋಷದ ದಾರಿಯಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಕೀಲರಿಗೆ ಸಲಹೆ ನೀಡಿದ್ದಾರೆ.
ಜೀವ ನೈತಿಕ ಶಾಸ್ತ್ರ, ಕೃತಕ ಬುದ್ಧಿಮತ್ತೆ, ವಂಶವಾಹಿ ತಂತ್ರಜ್ಞಾನದಂಥ ವಿಷಯಗಳ ಬಗ್ಗೆ ಕಾನೂನು ಶಿಕ್ಷಣ ಸಂಸ್ಥೆಗಳು ಸಂಶೋಧನೆ ಮಾಡಿ ಅಭಿವೃದ್ಧಿಪಡಿಸಿಕೊಳ್ಳಬೇಕು. ತಮ್ಮ ಪಠ್ಯಕ್ರಮದಲ್ಲಿ ಇದನ್ನು ಅಳಡವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಉನ್ನತ ಶಿಕ್ಷಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಕೇಂದ್ರ ಸರ್ಕಾರದಿಂದ ಲಭ್ಯವಾಗುತ್ತಿರುವ ಪಠ್ಯ ಕ್ರಮದ ಸ್ವಾಯತ್ತತೆಯನ್ನು ಬಳಸಿಕೊಳ್ಳಿ. 20 ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಉತ್ಕೃಷ್ಟ ಶಿಕ್ಷಣ ಸಂಸ್ಥೆ ಎನ್ನುವ ಪ್ರಮಾಣ ಪತ್ರ ನೀಡಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.