ಬೆಂಗಳೂರು
ವಖ್ಫ್ ಆಸ್ತಿ ಸಂರಕ್ಷಣೆ ಹಾಗೂ ಸಮುದಾಯದ ಕಲ್ಯಾಣ ವಿಚಾರದಲ್ಲಿ ಭ್ರಷ್ಟಾಚಾರ ಹಾಗೂ ರಾಜಕೀಯ ಸಹಿಸುವುದಿಲ್ಲ ಎಂದು ವಖ್ಫ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮದ್ ಎಚ್ಚರಿಕೆ ನೀಡಿದ್ದಾರೆ.
ವಖ್ಫ್ ಬೋರ್ಡ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಖ್ಫ್ ಬೋರ್ಡ್ ನಲ್ಲಿ ಕೆಲಸ ಮಾಡುವುದು ಎಂದರೆ ದೇವರ ಕೆಲಸ. ಇಲ್ಲಿ ಸಮುದಾಯದ ಹಿತ ಮುಖ್ಯವಾಗಬೇಕೆ ಹೊರತು ರಾಜಕೀಯ ಅಲ್ಲ. ಇಲ್ಲಿಯೂ ಹಣ ಮಾಡಲು ಹೊರಟರೆ ನಿರ್ನಾಮ ಆಗುತ್ತಾರೆ. ನಾವೆಲ್ಲರೂ ದೇವರಿಗೆ ಉತ್ತರಿಸಬೇಕಾಗುತ್ತದೆ ಎಂದು ಹೇಳಿದರು.
ಹಣ ಗಳಿಸಬೇಕು ಎಂಬ ಮನಸ್ಥಿತಿ ಇರುವವರು ಇಲ್ಲಿ ಬರುವುದು ಬೇಡ. ಬೇರೆ ಯಾವುದಾದರೂ ಕಡೆ ಹೋಗಲಿ. ಸಚಿವರು, ಅಧ್ಯಕ್ಷರಿಗಿಂತ ಇಲ್ಲಿ ಕೆಲಸ ಮಾಡುವ ಅಧಿಕಾರಿಗಳ ಜವಾಬ್ದಾರಿ ದೊಡ್ಡದು ಎಂದು ತಿಳಿಸಿದರು. ವಖ್ಫ್ ಆಸ್ತಿ ಸಂರಕ್ಷಣೆ ದೃಷ್ಟಿಯಿಂದ ಕಾರ್ಯಪಡೆ ರಚನೆ, ಕಾಂಪೌAಡ್ ನಿರ್ಮಾಣ ಸೇರಿ ಹಲವು ಕ್ರಮಗಳಿಗೆ ಮುಂದಾಗಿದ್ದೇವೆ. ನಮ್ಮ ಆಸ್ತಿ ಸಂರಕ್ಷಣೆ ಮಾಡಿಕೊಂಡರೆ ಸರ್ಕಾರದ ಮುಂದೆ ಅನುದಾನಕ್ಕೆ ಕೈ ಚಾಚುವ ಬದಲು ನಾವೇ ಸರ್ಕಾರಕ್ಕೆ ದೇಣಿಗೆ ಕೊಡುವ ಶಕ್ತಿ ಬರುತ್ತದೆ ಎಂದು ಹೇಳಿದರು.
ರಾಜ್ಯದ ಎಲ್ಲ ಕಡೆ ಹಲವಾರು ಮಹನೀಯರು ವಖ್ಫ್ ಬೋರ್ಡ್ ಗೆ ಆಸ್ತಿ ದಾನ ಕೊಟ್ಟಿದ್ದಾರೆ. ಇವು ಸಮುದಾಯದ ಒಳಿತಿಗೆ ಸದುಪಯೋಗ ಆಗುವಂತೆ ಮಾಡುವುದು ನಮ್ಮೆಲ್ಲರ ಹೊಣೆಗಾರಿಕೆ. ವಖ್ಫ್ ಬೋರ್ಡ್ ನಲ್ಲಿ ಕನ್ನಡದಲ್ಲೇ ಕಾರ್ಯಕ್ರಮ ಮಾಡುತ್ತಿರುವ ಬಗ್ಗೆ ಸಂತಸ ವ್ಯಕ್ತ ಪಡಿಸಿದ ಸಚಿವರು, ಇದು ನಿರಂತರವಾಗಿರಲಿ ಎಂದು ಸೂಚಿಸಿದರು.
ಮುಖ್ಯ ಕಾರ್ಯರ್ವಾಹಣಾ ಅಧಿಕಾರಿ ಖಾನ್ ಫರ್ವೆಜ್ ಮಾತಾನಾಡಿ, ವಖ್ಫ್ ಬೋರ್ಡ್ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಉರ್ದು ಶಾಲೆ ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ ಸೇರಿ ಹಲವು ಕಾರ್ಯಕ್ರಮ ನಿರಂತರ ವಾಗಿ ಹಮ್ಮಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು. ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್, ವಖ್ಫ್ ಬೋರ್ಡ್ ಅಧ್ಯಕ್ಷ ಮೌಲಾನಾ ಮುಹಮದ್ ಶಫಿ ಸ ಆದಿ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ವಖ್ಫ್ ಸಲಹಾ ಸಮಿತಿ ಅಧ್ಯಕ್ಷರ ಜತೆ ಸಮಾಲೋಚನೆ ನಡೆಸಿದ ಸಚಿವರು, ವಖ್ಫ್ ವಿಚಾರದಲ್ಲಿ ನೀವು ಆ ಪಕ್ಷ ಈ ಪಕ್ಷ ಎಂದು ರಾಜಕೀಯ ಮಾಡಬೇಡಿ. ನಾವೆಲ್ಲರೂ ಸಮುದಾಯದ ಸೇವೆಗೆ ನೇಮಕ ಆಗಿರುವ ರಾಯಭಾರಿಗಳು ಎಂಬುದು ನೆನಪಿರಲಿ. ಕೆಲವು ಜಿಲ್ಲೆ ಗಳ ಸಮಿತಿಗಳ ಕಾರ್ಯವೈಖರಿ ಬಗ್ಗೆ ನನಗೆ ಸಮಾಧಾನವಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಆಫಿಜುರ್ ರೆಹಮಾನ್ ಸಭೆಗೆ ಗೈರು ಅದ ಬಗ್ಗೆ ಗರಂ ಅದ ಸಚಿವರು ಕೊಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ