ವಚನಗಳು ನೈಜ ಬದುಕಿನ ಪ್ರತಿಬಿಂಬ

ಚಿಕ್ಕನಾಯಕನಹಳ್ಳಿ
              ವಚನಗಳು ಒಂದೆಡೆ ಕುಳಿತು ರಚನೆ ಮಾಡಿದಂತಹ ಕಾವ್ಯಗಳಲ್ಲ. ಅವು ಜೀವನದ ನೈಜ ಚಿತ್ರಣವನ್ನು ಬಿಂಬಿಸುತ್ತಿವೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಜಿ.ಸಿದ್ದರಾಮಯ್ಯ ಹೇಳಿದರು.
               ಪಟ್ಟಣದ ನವೋದಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುತ್ತೂರು ಜಗದ್ಗುರು ಲಿಂ.ಡಾ.ಶ್ರೀರಾಜೇಂದ್ರ ಮಹಾಸ್ವಾಮಿಗಳ ಜನ್ಮದಿನದ ಅಂಗವಾಗಿ ವಚನ ದಿನದ ಪ್ರಯುಕ್ತ ನಡೆದ ಪ್ರೌಢಶಾಲಾ ಮಕ್ಕಳಿಗೆ ತಾಲ್ಲೂಕು ಮಟ್ಟದ ವಚನ ಗಾಯನ ಸ್ಫರ್ಧೆ ಹಾಗೂ ದತ್ತಿ ಉಪನ್ಯಾಸದ ಕಾರ್ಯಕ್ರಮದಲ್ಲಿ ಮಾತನಾಡಿದರು.
                ವಚನ ಸಾಹಿತ್ಯದಲ್ಲಿ ಪ್ರತಿಪಾದಿತ ಮೌಲ್ಯಗಳು ಕುರಿತಂತೆ ಇಂದಿನ ಆಧುನಿಕ ಸಮಾಜದಲ್ಲಿ ಸ್ವಾರ್ಥವೇ ಹೆಚ್ಚಾಗಿ ತುಂಬಿ ತುಳುಕುತ್ತಿದೆ. ತಮ್ಮ ಸ್ವಾರ್ಥ ಸಾಧನೆಗೆ ತಂದೆ, ತಾಯಿ, ಗುರು, ಹಿರಿಯರು ಎನ್ನದೇ ಅವರನ್ನು ಅವಮಾನಿಸುತ್ತಿದ್ದಾರೆ. 12ನೇಶತಮಾನದಲ್ಲಿ ರಚಿಸಿರುವ ಕಾವ್ಯಗಳು, ನಮಗೆ ಆದರ್ಶ ಜೀವನದ ಮೌಲ್ಯಗಳನ್ನು ತಿಳಿಸುತ್ತಿವೆ. ಶರಣರು ವೈಚಾರಿಕ ಚಿಂತನೆಗಳನ್ನೊಳಗೊಂಡ ವಚನಗಳು ಮೂಢನಂಬಿಕೆಗಳನ್ನು ಹೋಗಲಾಡಿಸಿ ಉತ್ತಮ ಜೀವನಕ್ಕೆ ಅಡಿಪಾಯ ಹಾಕುತ್ತವೆ. ಶರಣರು ರಚಿಸಿದ 770 ವಚನಕಾರರಿಂದ ಸುಮಾರು ಎರಡೂವರೆ ಸಾವಿರ ವಚನಗಳು ಇಂದು ದೇಶದ 24 ಭಾಷೆಗಳಿಗೆ ಭಾಷಾಂತರಗೊಂಡಿವೆ ಎಂದರು.
                ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಶಿಕ್ಷಕ ತ.ಶಿ.ಬಸವಮೂರ್ತಿ ಮಾತನಾಡಿ, ವಚನಗಳನ್ನು ಕೇವಲ ಪಠ್ಯಕ್ಕೆಂದು ಓದದೇ ಜೀವನಕ್ಕಾಗಿ ಓದುವುದನ್ನು ರೂಢಿಸಿಕೊಳ್ಳಿ ಎಂದರು.
                ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನವೋದಯ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಹೆಚ್.ಎಸ್.ಶಿವಯೋಗಿ, ಮಕ್ಕಳು ಕೇವಲ ವಚನಗಳನ್ನು ಓದುವುದಲ್ಲ, ಅವುಗಳನ್ನು ಗಾಯನ ಮಾಡುವ ಮೂಲಕ ಈ ಸ್ಫರ್ಧೆಯಲ್ಲಿ ಪಾಲ್ಗೊಂಡು ಉತ್ತಮವಾಗಿ ಹಾಡಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ಇನ್ನು ಹೆಚ್ಚು ಆಯೋಜಿಸುವಂತೆ ತಿಳಿಸಿದರು.

                  ಗಾಯನ ಸ್ಫರ್ಧೆಯಲ್ಲಿ ಭಾಗವಹಿಸಿದ್ದ ವಿಜೇತರು : ನಿರ್ವಾಣೇಶ್ವರ ಶಾಲೆಯ ಯಶೋಧ ಪ್ರಥಮಸ್ಥಾನ, ನವೋದಯ ಶಾಲೆಯ ಸಂಗೀತ ದ್ವಿತೀಯಸ್ಥಾನ, ಸರ್ಕಾರಿ ಪ್ರೌಢಶಾಲೆಯ ಶಶಿಧರ್ ತೃತಿಯ ಬಹುಮಾನ ಪಡೆದರು.
                ಕಾರ್ಯಕ್ರಮದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲಿಕಾರ್ಜುನಯ್ಯ(ಪಂಡಿತ್)ಪ್ರಾಸ್ತಾವಿಕ ನುಡಿಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ನೊಳಂಬ ವೀರಶೈವ ಸಮಾಜದ ನಿರ್ದೇಶಕ ರವಿಕುಮಾರ್, ನಿವೃತ್ತ ಶಿಕ್ಷಕ ಈಶ್ವರಪ್ಪ, ತಾ.ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಸ್ವಾಮಿ, ಕೋಶಾಧ್ಯಕ್ಷ ಕಾಶಿನಾಥ್, ನಿವೃತ್ತ ಶಿಕ್ಷಕ ಜಯಣ್ಣ ಮತ್ತಿತರರು ಭಾಗವಹಿಸಿದ್ದರು.

Recent Articles

spot_img

Related Stories

Share via
Copy link