ವಚನ ಸಾಹಿತ್ಯ ಮನೆ ಮನಗಳಿಗೆ ಮುಟ್ಟಿದರೆ ಜಾತಿ ತಾರತಮ್ಯಗಳು ದೂರಗೊಳ್ಳುತ್ತವೆ

ಶಿರಾ:

         12ನೆಯ ಶತಮಾನದಲ್ಲಿ ಬಸವಣ್ಣ ಹಾಗೂ ಶರಣರು ಸಾರಿದ ಸಂದೇಶ ಮತ್ತು ಮಾರ್ಗದರ್ಶನಗಳು ಪ್ರತಿಯೊಬ್ಬರಿಗೂ ಮಾದರಿಯಾಗಬೇಕಿದ್ದು ವಚನ ಸಾಹಿತ್ಯವು ಪ್ರತಿಯೊಂದು ಮನೆ, ಮನಗಳಿಗೆ ಮುಟ್ಟಿದಲ್ಲಿ ಮಾತ್ರಾ ಜಾತಿಯ ತಾರತಮ್ಯ ಮತ್ತು ಭೇಧ-ಭಾವಗಳು ದೂರಗೊಳ್ಳಲು ಸಾದ್ಯ ಎಂದು ನಿವೃತ್ತ ಪ್ರಾಂಶುಪಾಲ ಪಿ.ಹೆಚ್.ಮಹೇಂದ್ರಪ್ಪ ಹೇಳಿದರು.
ನಗರದ ಮಾಧವ ವಿದ್ಯಾ ಮಂದಿರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ಮತ್ತು ತಾ|| ಶರಣ ಸಾಹಿತ್ಯ ಪರಿಷತ್ತು ಹಾಗೂ ನಿವೃತ್ತ ನೌಕರರ ಮಹಾ ಮನೆಯ ವತಿಯಿಂದ ನಡೆದ ವಚನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

           ಶರಣ ಸಾಹಿತ್ಯ ಮತ್ತು ವಚನ ಸಾಹಿತ್ಯದ ತತ್ವ ಸಂದೇಶಗಳಿಂದ ಸಮಾಜ ಸುಧಾರಣೆಯ ಕ್ರಾಂತಿಯಾಗಿದೆ. 800 ವರ್ಷಗಳ ಹಿಂದೆ ಬಸವಣ್ಣ ಅವರ ಅನುಭವ ಮಂಟಪದ ಪರಿಕಲ್ಪನೆ ಇಂದಿನ ಸಂವಿಧಾನದ ವ್ಯವಸ್ಥೆಯಾಗಿರುವುದಕ್ಕೆ ಪ್ರತಿಯೊಬ್ಬರೂ ಹೆಮ್ಮೆಪಡಬೇಕಾಗಿದೆ ಎಂದರು.
           ಜಾನಪದ ವಿದ್ವಾಂಸ ಡಾ||ಚಿಕ್ಕಣ್ಣ ಯಣ್ಣೇಕಟ್ಟೆ ಮಾತನಾಡಿ 11ನೇ ಶತಮಾನದಲ್ಲಿ ಉದಯಿಸಿದ ಧರ್ಮ ಪ್ರೇರಿತ ಸಾಹಿತ್ಯವಾದ ವಚನ ಸಾಹಿತ್ಯವು ಕನ್ನಡದ ಪ್ರಾಚೀನ ಸಾಹಿತ್ಯದಡಿಯಲ್ಲಿ ವರ್ಗಾಯಿಸಲ್ಪಟ್ಟಿದೆ. ಸ್ವಂತಿಕೆಯಿಂದ ಮೆರೆವ ವಚನಗಳು ಕನ್ನಡ ಸಾಹಿತ್ಯದಲ್ಲಿ ಪ್ರಭಾವಶಾಲಿ ಆತ್ಮ ವಿಮರ್ಶೆಯ ಮಾಧ್ಯಮವಾಗಿ ಸ್ವತಂತ್ರವಾಗಿ ಬೆಳೆದು ವಿಜೃಂಭಿಸಿ ಮುಂದಿನ ಸಾಹಿತ್ಯ ಪರಂಪರೆಗಳ ಮೇಲೆ ಬೆಳಕು ಚೆಲ್ಲಲು ಕಾರಣವಾಯಿತು ಎಂದರು.
           ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ||ಕೆ.ಹನುಮಂತರಾಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜದ ಎಲ್ಲಾ ಜಾತಿಯ ಜನ ವಚನವನ್ನು ಮುಖ್ಯ ಮಾಧ್ಯಮವನ್ನಾಗಿ ಮಾಡಿಕೊಂಡು ತಮ್ಮ ಅನುಭವಗಳನ್ನು ಹಂಚಿಕೊಳ್ಳತೊಡಗಿದ್ದರಿಂದ ವಚನ ಸಾಹಿತ್ಯ ಒಂದು ಚಳುವಳಿಯೂ ಆಯಿತು ಎಂದರು.
          ತಾಲ್ಲೂಕಿನ ಶರಣ ಸಾಹಿತ್ಯ ಪರಿಷತ್ತು ಕೂಡಾ ಕಳೆದ ಒಂದು ವರ್ಷದಿಂದಲೂ ತಾಲ್ಲೂಕಿನಾಧ್ಯಂತ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದ ಮೇಲೆ ವಚನ ಸಾಹಿತ್ಯದ ಬೆಳಕು ಚೆಲ್ಲುವ ಕಾರ್ಯ ಮಾಡುತ್ತಾ ಬಂದಿದೆ ಎಂದು ಪ್ರೊ||ಕೆ.ಹನುಮಂತರಾಯಪ್ಪ ತಿಳಿಸಿದರು.
           ತಾ|| ಕ.ಸಾ.ಪ. ಅಧ್ಯಕ್ಷ ಡಾ||ನಂದೀಶ್ವರ್, ರೈತ ಸಂಘದ ಮುಖಂಡ ಧನಂಜಯರಾಧ್ಯ, ರಂಗಭೂಮಿ ಕಲಾವಿದ ರಂಗನಾಥಪ್ಪ, ಸಾವಿತ್ರಮ್ಮ, ಸಾಹಿತಿ ಅಗ್ರಹಾರ ಲೋಕೇಶ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಜಿ.ಎಲ್.ರಾಮಣ್ಣ, ಲಿಂಗಣ್ಣ, ಬಡೇನಹಳ್ಳಿ ಟಿ.ಗೋವಿಂದಯ್ಯ, ಆರ್.ವಿ.ಪುಟ್ಟಕಾಮಣ್ಣ ಸೇರಿದಂತೆ ಅನೇಕ ಪ್ರಮುಖರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Recent Articles

spot_img

Related Stories

Share via
Copy link