ನವದೆಹಲಿ:
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವರುಣಾರ್ಭಟಕ್ಕೆ ಸಂಚಾರ, ಜನಜೀವನ ಅಸ್ಥವ್ಯಸ್ಥಗೊಂಡಿದ್ದು, ಕೇವಲ ಒಂದು ಗಂಟೆಯಲ್ಲಿ 11.2 ಸೆಂ.ಮೀ ಮಳೆಯಾಗಿದೆ.ದೆಹಲಿಯಲ್ಲಿ ಇಂದು ಸಂಜೆ ಭಾರಿ ಮಳೆ ಸುರಿದಿದ್ದು, ರಾಜಧಾನಿಯ ಪ್ರಮುಖ ರಸ್ತೆಗಳಲ್ಲಿ ಭಾರೀ ಮಳೆಯಿಂದ ರಸ್ತೆಗಳು ಜಲಾವ್ರತವಾಗಿವೆ.
ಈ ಹಿಂದೆ ಪ್ರವಾಹದ ನೀರಿನಲ್ಲಿ ಮೂವರು ವಿದ್ಯಾರ್ಥಿಗಳು ಸಾವನಪ್ಪಿದ ಐಎಎಸ್ ಕೋಚಿಂಗ್ ಸೆಂಟರ್ ಇರುವ ರಾಜೇಂದ್ರ ನಗರ ಕೂಡ ಮತ್ತೆ ಜಲಾವೃತವಾಗಿದೆ.ಈ ಭಾಗದಲ್ಲಿ 20 ನಿಮಿಷ ಸುರಿದ ಮಳೆಗೆ ರಸ್ತೆ ಕೆರೆಯಂತಾಗಿದ್ದು, ಸೊಂಟದವರೆಗೂ ಮಳೆ ನೀರು ನಿಂತಿದೆ. ಇದರಿಂದ ನ್ಯಾಯ ಬೇಕೆಂದು ಯುವಕರು ಕೋಚಿಂಗ್ ಸೆಂಟರ್ ಎದುರು ನಿಂತ ಮಳೆನೀರಿನಲ್ಲಿ ಕೈ ಕೈ ಹಿಡಿದು ಘೋಷಣೆ ಕೂಗುತ್ತಿದ್ದಾರೆ.
ಇನ್ನು ಭಾರಿ ಮಳೆಯಿಂದಾಗಿ ದೆಹಲಿಯ ವಿವಿಧೆಡೆ ಹಲವು ಮಳೆ ಸಂಬಂಧಿತ ದುರಂತಗಳು ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೆಹಲಿಯ ಗಾಜಿಪುರ ಪ್ರದೇಶದಲ್ಲಿ 22 ವರ್ಷದ ಮಹಿಳೆ ಮತ್ತು ಆಕೆಯ ಮಗು ನೀರಿನಿಂದ ತುಂಬಿರುವ ಚರಂಡಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ತನುಜಾ ಮತ್ತು ಅವರ ಮೂರು ವರ್ಷದ ಮಗ ಪ್ರಿಯಾಂಶ್ ಎಂದು ಗುರುತಿಸಲಾಗಿದೆ. ಇಬ್ಬರೂ ಖೋಡಾ ಕಾಲೋನಿ ಬಳಿಯ ವಾರದ ಮಾರುಕಟ್ಟೆಗೆ ಹೋಗಿದ್ದರು.
ನಿರ್ಮಾಣ ಹಂತದ ಕಟ್ಟಡದ ಬಳಿಕ ಚರಂಡಿ ಬಳಿ ಜಾರಿ ಬಿದ್ದಿದ್ದಾರೆ. ನೀರಿನ ಹರಿವು ವೇಗವಾಗಿದ್ದರಿಂದ ಕೊಚ್ಚಿಕೊಂಡು ಹೋಗಿ ರಾತ್ರಿ 8 ವೇಳೆ ಪತ್ತೆಯಾಗಿದ್ದಾರೆ. ಡೈವರ್‌ಗಳು ಮತ್ತು ಕ್ರೇನ್‌ಗಳ ಸಹಾಯದಿಂದ ಜೋಡಿಯನ್ನು ಹೊರತೆಗೆದು ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ಸಾವು ಖಚಿತಪಡಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.