ವಾಜಪೇಯಿರವರು ಓರ್ವ ಅಪರೂಪದ ರಾಜಕೀಯ ಮುತ್ಸದ್ಧಿ

ಹೊನ್ನಾಳಿ:

      ಮಾಜಿ ಪ್ರಧಾನಮಂತ್ರಿ ಎ.ಬಿ. ವಾಜಪೇಯಿ ಅವರು ಓರ್ವ ಅಪರೂಪದ ರಾಜಕೀಯ ಮುತ್ಸದ್ದಿ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕತ್ತಿಗೆ ಗಂಗಾಧರಪ್ಪ ಬಣ್ಣಿಸಿದರು.

      ತಾಲೂಕಿನ ಬೇಲಿಮಲ್ಲೂರು ಗ್ರಾಮದ ಉಮಾ ಪ್ರಗತಿ ಪ್ರೌಢಶಾಲೆಯಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡ ಕೋಟೆಹಾಳ್ ಶ್ರೀಮತಿ ಬಸಮ್ಮ ಹಂಪೋಳ್ ಶಿವಪ್ಪ ಮತ್ತು ದಿ. ಕೋಟೆ ಕರಿಗೌಡರ ರುದ್ರಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ಎ.ಬಿ. ವಾಜಪೇಯಿ ಕವಿ ಹೃದಯಿಯಾಗಿದ್ದರು. ಪ್ರತಿಪಕ್ಷದವರೂ ಮೆಚ್ಚುವಂಥ ಅನನ್ಯ ರಾಜಕಾರಣಿಯಾಗಿದ್ದರು ಎಂದು ತಿಳಿಸಿದರು. ತಮ್ಮ ವಿಶಿಷ್ಟ ರೀತಿಯ ಆಡಳಿತದ ಮೂಲಕ ಎಲ್ಲರನ್ನೂ ಗೆಲ್ಲುವ ಅವರಿಗೆ ಅವರೇ ಸಾಟಿಯಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.

      ಬದ್ಧ ವೈರಿ ರಾಷ್ಟ್ರವಾದ ನಮ್ಮ ದೇಶದ ಪಕ್ಕದ ಪಾಕಿಸ್ತಾನದೊಂದಿಗೆ ಮಿತೃತ್ವ ಬೆಳೆಸಲು ತಾವು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ವಾಜಪೇಯಿ ಪ್ರಯತ್ನಿಸಿದರು. ಎರಡೂ ದೇಶಗಳ ಜನರನ್ನು ಬೆಸೆಯುವ ಉದ್ದೇಶದಿಂದ ದೆಹಲಿಯಿಂದ ಲಾಹೋರ್‍ಗೆ ಬಸ್ ಪ್ರಯಾಣವನ್ನು ಪ್ರಾರಂಭಿಸಿದರು. ಸ್ನೇಹಮಯ ವಾತಾವರಣಕ್ಕಾಗಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಶಾಂತಿಯ ಉದ್ದೇಶದಿಂದ ಇಷ್ಟೆಲ್ಲಾ ಪ್ರಯತ್ನ ಮಾಡಿದರೂ ಪಾಕಿಸ್ತಾನ ತನ್ನ ದುರ್ಬುದ್ಧಿಯನ್ನು ಬಿಡದೇ ಯುದ್ಧಕ್ಕೆ ಮುಂದಾದಾಗ ಕಾರ್ಗಿಲ್‍ನಲ್ಲಿ ಭಾರತಕ್ಕೆ ಅಭೂತಪೂರ್ವ ಜಯ ದೊರೆಯುವಂತೆ ಮಾಡಿದರು. ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ ನಡೆಸುವ ಮೂಲಕ ಭಾರತದ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿದರು ಎಂದು ವಿವರಿಸಿದರು.

      ಸಾಹಿತ್ಯ ಪರಿಷತ್ತು ನಿಯಮಿತವಾಗಿ ತಾಲೂಕಿನ ವಿವಿಧ ಶಾಲಾ-ಕಾಲೇಜುಗಳಲ್ಲಿ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ಮಹತ್ವದ ಕೆಲಸ ಮಾಡುತ್ತಿದೆ. ಈ ಕಾರ್ಯಕ್ಕೆ ಎಲ್ಲೆಡೆ ಉತ್ತಮ ಸ್ಪಂದನೆ ಲಭಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

      ಬೇಲಿಮಲ್ಲೂರು ಗ್ರಾಮದ ಉಮಾ ಪ್ರಗತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿ. ಹಾಲಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಶ್ರೀಮಂತ ಕವಿಗಳ ಪರಂಪರೆ ಇದೆ. ಇಂಥ ಅಪರೂಪದ ನಾಡಿನಲ್ಲಿ ಹುಟ್ಟಿರುವ ನಾವೆಲ್ಲರೂ ಧನ್ಯರು. ಇಂಥ ಭಾಷೆಯ ಸೇವೆ ಮಾಡುವ ಅವಕಾಶವನ್ನು ಯಾರೂ ಕಳೆದುಕೊಳ್ಳಬಾರದು ಎಂದು ಹೇಳಿದರು.

      ಮಾತೃಭಾಷೆಯಲ್ಲಿ ಶಿಕ್ಷಣ ಪಡೆದವರು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ಆದ್ದರಿಂದ, ಕರ್ನಾಟಕ ರಾಜ್ಯದಲ್ಲಿ ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಮಾನ್ಯತೆ ಲಭಿಸಬೇಕು. ಕನಿಷ್ಟ ಎಸ್ಸೆಸ್ಸೆಲ್ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವುದನ್ನು ಕಡ್ಡಾಯಗೊಳಿಸಬೇಕು. ಎಸ್ಸೆಸ್ಸೆಲ್ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಸರಕಾರಿ ಉದ್ಯೋಗಕ್ಕೆ ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಶೇ.10ರಷ್ಟು ಕೃಪಾಂಕಗಳನ್ನು ನೀಡುವ ತಿದ್ದುಪಡಿ ತರಲು ಸಾಹಿತ್ಯ ಪರಿಷತ್ತು ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಅಭಿಪ್ರಾಯಪಟ್ಟರು.

      ಹೊನ್ನಾಳಿಯ ಎಂ.ಎಸ್. ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಎಚ್. ಅಣ್ಣಪ್ಪ “ವಚನ ಸಾಹಿತ್ಯ” ಕುರಿತು ಉಪನ್ಯಾಸ ನೀಡಿ, 12ನೇ ಶತಮಾನದಲ್ಲಿ ರಾಜಾಶ್ರಯವನ್ನು ಧಿಕ್ಕರಿಸಿ ಜನಾಶ್ರಯದಲ್ಲಿ ಬೆಳೆದ ಸಾಹಿತ್ಯ ವಚನ ಸಾಹಿತ್ಯವಾಗಿದೆ. ಪ್ರಾಚೀನ ಕನ್ನಡ ಸಾಹಿತ್ಯ ಸಂಸ್ಕøತ ಮಿಶ್ರಿತವಾಗಿರುತ್ತಿತ್ತು. ಆ ಕಾರಣಕ್ಕೆ ಜನಸಾಮಾನ್ಯರಿಂದ ದೂರವೇ ಉಳಿದಿತ್ತು. ಅಂಥ ಸಂದರ್ಭದಲ್ಲಿ ಸರಳ ಕನ್ನಡ ಭಾಷೆಯಲ್ಲಿ ಬಸವಾದಿ ಶರಣರು ವಚನ ಸಾಹಿತ್ಯ ಪ್ರಕಾರವನ್ನು ಜನಪ್ರಿಯಗೊಳಿಸಿದರು. ವಿಶ್ವ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಅಪರೂಪದ ವಚನ ಸಾಹಿತ್ಯವೇ ಆಗಿದೆ. ಇದು ವಚನ ಸಾಹಿತ್ಯದ ಹಿರಿಮೆ ಎಂದು ತಿಳಿಸಿದರು.

      ಅಲ್ಲಮಪ್ರಭು, ಚೆನ್ನಬಸವಣ್ಣ, ಬಸವಣ್ಣ, ಅಕ್ಕಮಹಾದೇವಿ, ದಾಸಿಮಯ್ಯ ಮತ್ತಿತರ ಬೆರಳೆಣಿಕೆಯಷ್ಟು ವಚನಕಾರರು ಮೇಲ್ವರ್ಗಕ್ಕೆ ಸೇರಿದವರು. ಆದರೆ, ಕನ್ನಡದ ಮೊದಲ ಶೂದ್ರ ವಚನಕಾರ್ತಿ ಕಾಳವ್ವೆ ತನ್ನ ವಿಶಿಷ್ಟ ವಚನಗಳ ಮೂಲಕ ವಿದ್ವಜ್ಜನರ ಗಮನಸೆಳೆಯುತ್ತಾಳೆ. ಅದರಂತೆ, ಅಂಬಿಗರ ಚೌಡಯ್ಯ, ಡೋಹರ ಕಕ್ಕಯ್ಯ, ಕಸದ ಸತ್ಯಕ್ಕ, ಮೋಳಿಗೆ ಮಾರಯ್ಯ, ಆಯ್ದಕ್ಕಿ ಲಕ್ಕಮ್ಮ, ಸೂಳೆ ಸಂಕವ್ವೆ, ಕದಿರೆ ರಮ್ಮವ್ವೆ, ತುರುಗಾಹಿ ರಾಮಣ್ಣ, ಹರಳಯ್ಯ ಮತ್ತಿತರ ಅನೇಕ ವಚನಕಾರರು ತಮ್ಮ ವಚನಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ವಿವರಿಸಿದರು.

      ಸಾಮಾಜಿಕ ಬದಲಾವಣೆಯ ಹರಿಕಾರನಾಗಿರುವ ಬಸವಣ್ಣ ಒಬ್ಬ ಕ್ರಾಂತಿಯೋಗಿಯಲ್ಲದೇ ಶ್ರೇಷ್ಠ ಆರ್ಥಿಕ ತಜ್ಞನಾಗಿಯೂ ಗಮನಸೆಳೆಯುತ್ತಾರೆ. ಸಂಪತ್ತಿನ ಕ್ರೋಡೀಕರಣವಾಗುವುದನ್ನು ಅವರು ವಿರೋಧಿಸುತ್ತಿದ್ದರು. ಆ ಮೂಲಕ ಎಲ್ಲರೂ ಸಮಾಜದಲ್ಲಿ ಸರಿಸಮನಾದ ಬದುಕು ಸಾಗಿಸಬೇಕು ಎಂಬ ತತ್ವ ಪ್ರತಿಪಾದಿಸುತ್ತಿದ್ದರು ಎಂದು ಹೇಳಿದರು.

      ಕಸಾಪ ಕಾರ್ಯದರ್ಶಿ ಕೆ. ಶೇಖರಪ್ಪ, ಹೊನ್ನಾಳಿಯ ಎಂ.ಎಸ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಯು.ಎನ್. ಸಂಗನಾಳಮಠ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎನ್.ಎಚ್. ಗೋವಿಂದಪ್ಪ, ಬೇಲಿಮಲ್ಲೂರು ಗ್ರಾಮದ ಉಮಾ ಪ್ರಗತಿ ಪ್ರೌಢಶಾಲೆಯ ಶಿಕ್ಷಕರಾದ ವೈ. ನಾಗೇಂದ್ರಪ್ಪ, ಡಿ. ಮಲ್ಲಿಕಾರ್ಜುನಪ್ಪ, ಎಂ.ಎನ್. ದೇವರಾಜ್ ಇತರರು ಮಾತನಾಡಿದರು. ಶಿಕ್ಷಕರಾದ ಎಂ.ಎಸ್. ಬಸವರಾಜ್, ಕೆ. ಶೋಭಾ, ಬಿ. ರಾಮಲಿಂಗಪ್ಪ, ಬಿ.ಕೆ. ಚಂದ್ರಪ್ಪ ಮತ್ತು ಇತರ ಸಿಬ್ಬಂದಿ, ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಸಭೆಯಲ್ಲಿ ಮೌನಾಚರಣೆ ಮೂಲಕ ಮಾಜಿ ಪ್ರಧಾನಮಂತ್ರಿ ದಿ.ಎ.ಬಿ. ವಾಜಪೇಯಿ ಅವರಿಗೆ ಗೌರವ ಸೂಚಿಸಲಾಯಿತು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap