ಬೆಂಗಳೂರು
ಬೆಂಗಳೂರು ಸೇರಿದಂತೆ ರಾಜ್ಯದ ಇತರ ಪ್ರಮುಖ ನಗರಗಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‍ಆರ್‍ಟಿಸಿ)ಯ ಕೇಂದ್ರ ಬಸ್ ನಿಲ್ದಾಣಗಳಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ ನಷ್ಟದಲ್ಲಿರುವ ಸಂಸ್ಥೆಯ ಆದಾಯ ಹೆಚ್ಚಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.
ನಷ್ಟದಲ್ಲಿರುವ ಸಂಸ್ಥೆಯನ್ನು ಲಾಭದತ್ತ ತೆಗೆದುಕೊಂಡು ಹೋಗಲು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿ ಆದಾಯ ಹೆಚ್ಚಿಸುವ ಸಂಬಂಧ ಸಂಸ್ಥೆಯ ಹಿರಿಯ ಅಧಿಕಾರುಗಳ ಸಭೆ ನಡೆಸಿ ಚರ್ಚೆ ನಡೆಸಲಾಗಿದೆ.ಸದ್ಯದಲ್ಲಿಯೇ ಬಸ್ ನಿಲ್ದಾಣದ ಆವರಣದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವ ಸಂಬಂಧ ಟೆಂಡರ್ ಆಹ್ವಾನಿಸಲಾಗುವುದು ಎಂದರು.
ನಗರದ ಕೆಆರ್ ರಸ್ತೆಯ ಕುವೆಂಪು ಕಲಾ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘದ ವತಿಯಿಂದ ಆಯೋಜಿಸಿದ್ದ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭ ಉದ್ಫಾಟಿಸಿ ಮಾತನಾಡಿದ ಅವರು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುವುದಲ್ಲದೇ ಆದಾಯ ವೃದ್ಧಿಗೆ ಹಲವು ಹೊಸ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅದೇ ರೀತಿ, ಬಸ್ ಘಟಕಗಳಲ್ಲಿ 500 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಮಾಡುವ ಚಿಂತನೆ ನಡೆಸಲಾಗುತ್ತಿದೆ.ಈ ಕುರಿತು, ಹಲವಾರು ಒಳ್ಳೆಯ ಅಭಿಪ್ರಾಯ ತಿಳಿಸಿದ್ದು, ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರುವ ಉದ್ದೇಶವನ್ನು ಇಲಾಖೆ ಹೊಂದಿದೆ ಎಂದರು.
ದಕ್ಷತೆಯ ಕೆಲಸ
ರಾಜ್ಯದಲ್ಲಿ ಅತೀ ಹೆಚ್ಚು ಉದ್ಯೋಗ ಅವಕಾಶ ಕಲ್ಪಿಸುವ ಏಕೈಕ ಸಂಸ್ಥೆ ಸಾರಿಗೆ.ಅದು ಅಲ್ಲದೆ, ಹೆಚ್ಚಾಗಿ ಕನ್ನಡಿಗರೇ ಉದ್ಯೋಗದಲ್ಲಿದ್ದು, ಅದರಲ್ಲಿ ಸಾಕಷ್ಟು ಗ್ರಾಮೀಣ ಪ್ರದೇಶದಿಂದ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಅವರೇ ನಮ್ಮ ಆಧಾರ ಸ್ಥಂಭ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಳ ವರ್ಗದ ನೌಕರರಿಗೆ ತೊಂದರೆ ಕೊಡಬೇಡಿ ಎಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ನೌಕರರಿಗೆ ಸಾಕಷ್ಟು ಸಮಸ್ಯೆ ಇರುತ್ತೆ. ಅವರು ಮಾನಸಿಕವಾಗಿ ಕುಗ್ಗಿರುತ್ತಾರೆ. ಹೀಗಾಗಿ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಅಧಿಕಾರಿಗಳು ಭ್ರಷ್ಟಾಚಾರ ಬಿಟ್ಟು ದಕ್ಷತೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ನಿಗಮವೂ ಲಾಭದಾಯವಾಗಿ ನಡೆಯುತ್ತಿದೆ.ಒಂದು ವೇಳೆ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದರೆ,ಮುಂದೆ ಬರುವ ಸರ್ಕಾರಗಳು, ಖಾಸಗೀಕರಣಕ್ಕೆ ಒತ್ತು ನೀಡಲಿವೆ. ಇದರಿಂದ ಲಕ್ಷಾಂತರ ನೌಕರರ ಭವಿಷ್ಯ ಬೀದಿ ಪಾಲಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೊಡಗಿಗೆ ದೇಣಿಗೆ
ಸಹಕಾರ ಸಂಘದ ನಿರ್ದೇಶಕರು ಪ್ರಾಮಾಣಿಕ ವಾಗಿ ಕೆಲಸ ಮಾಡಿದಾಗ ಮಾತ್ರ ಸಹಕಾರಿ ಬ್ಯಾಂಕ್,ಸಂಘ ಉಳಿಯಲು ಸಾಧ್ಯ.ಅಲ್ಲದೆ, ಎಷ್ಟು ಸಹಕಾರಿ ಸಂಘಗಳು ಭ್ರಷ್ಟಾಚಾರ ನಡೆಯುತ್ತಿದೆ. ಇದಕ್ಕೆ ಕಾರಣ ಒಳಗಿನ ಆಡಳಿತ ವ್ಯವಸ್ಥೆ ಪರಿಣಾಮಕಾರಿಯಾಗಿ ಇಲ್ಲದೇ ಇರೋದು.ಜೊತೆಗೆ, ಅಧಿಕಾರಿ ವರ್ಗ ವೈಫಲ್ಯ ಕಾರಣ ಎಂದರು.
ಕೊಡಗಿನಲ್ಲಿ ಪ್ರವಾಹ ಉಂಟಾಗಿ, ಆಸ್ತಿ,ಹಾಗೂ ಸಾಕಷ್ಟು ನಷ್ಟ ಅನುಭವಿಸಿದ ಕಾರಣ, ಮುಖ್ಯಮಂತ್ರಿ ಗಳ ಪರಿಹಾರ ನಿಧಿಗೆ ಸಂಘದ ಸದಸ್ಯರುಗಳಿಂದ ಸಂಗ್ರಹಿಸಲಾದ ದೇಣಿಗೆ ಮೊತ್ತ 17,97,507 ರೂಪಾಯಿಗಳನ್ನು ಚೆಕ್ ಮೂಲಕ ವಿತರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಕೆಎಸ್‍ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಉಮಾಶಂಕರ್, ಶಾಸಕಿ ಸೌಮ್ಯ ರೆಡ್ಡಿ, ಬೆಂಗಳೂರು ವಿವಿ ಕುಲಪತಿ ಕೆ.ಆರ್. ವೇಣುಗೋಪಾಲ್ ಸೇರಿ ಪ್ರಮುಖರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








