ಚಿತ್ರದುರ್ಗ;
ಭಾರತೀಯ ಜನತಾ ಪಾರ್ಟಿಯ ನಾಯಕರು ಮತದಾರರು ನೀಡಿದ ಆದೇಶ ಪಾಲಿಸುವ ಬದಲಿಗೆ ಅಧಿಕಾರ ಹಿಡಿಯಲು ವಾಮ ಮಾರ್ಗ ಅನುಸರಿಸಲು ಮುಂದಾಗಿದ್ದಾರೆ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಂಗಳವಾರ ನಗರಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚಿಸಲು ರೋಡ್ ಶೋ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಪೂರ್ಣ ಪ್ರಮಾಣದ ಬೆಂಬಲ ವ್ಯಕ್ತಪಡಿಸಿಲ್ಲ. ಹೀಗಾಗಿ ಅವರು ವಿರೋಧ ಪಕ್ಷದ ಸ್ಥಾನದಲ್ಲಿ ಇರಬೇಕು. ಅದನ್ನು ಬಿಟ್ಟು ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕು ಎಂದು ಯೋಚನೆ ಮಾಡುತ್ತಿದ್ದಾರೆ. ಅವರ ಕನಸು ನೆನೆಸಾಗಲು ಸಾಧ್ಯವಿಲ್ಲವೆಂದರು.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮೀಶ್ರ ಸರ್ಕಾರ ಐದು ವರ್ಷ ಇರಲಿದ್ದು, ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಗಳಾಗಿರುತ್ತಾರೆ. ಮುಖ್ಯಮಂತ್ರಿ ಬದಲಾವಣೆ ವಿಚಾರ ಇಲ್ಲ. ಅಂತಹ ವಿಚಾರಗಳು ಚರ್ಚೆಯಾಗಿದ್ದರೆ ಅದು ನಮ್ಮ ಆಂತರೀಕ ವಿಚಾರವಷ್ಟೇ ಎಂದರು
ಕೇಂದ್ರ ಸರ್ಕಾರ ಆಡಳಿತದ ಎಲ್ಲಾ ರಂಗಗಳಲ್ಲಿಯೂ ವಿಫಲವಾಗಿದೆ. ಭ್ರಷ್ಟಾಚಾರ ನಿಲ್ಲಲಿಲ್ಲ. ಅತ್ಯಾಚಾರ ಹೆಚ್ಚಾಗಿದೆ. ಕಪ್ಪುಹಣ ವಾಪಾಸ್ ಬರಲಿಲ್ಲ. ಉದ್ಯೋಗ ಸೃಷ್ಟಿಯೇ ಆಗಲಿಲ್ಲ. ಆರ್ಥಿಕ ಬೆಳವಣಿಗೆ ಕುಂಟಿತಗೊಂಡಿದೆ. ಲೋಕಪಾಲ್ ಮಸೂದೆ ಜಾರಿಯಾಗಲಿಲ್ಲ. ಭಯೋತ್ಪಾದನೆ, ಪೆಟ್ರೋಲ್ ಬೆಲೆ, ರೂಪಾಯಿ ಬೆಲೆ ಹೆಚ್ಚಳ ಎಲ್ಲದರಲ್ಲೂ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.
ಸಮನ್ವಯ ಸಮಿತಿಯಲ್ಲಿ ಜೆಡಿಎಸ್ ನಿಂದ ಒಬ್ಬರು ಇರಬೇಕು ಎಂಬ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಯಾರನ್ನು ಸಮಿತಿಗೆ ಸದಸ್ಯರನ್ನಾಗಿ ನೇಮಕ ಮಾಡಬೇಕೆಂಬುದು ಜೆಡಿಎಸ್‍ಗೆ ಬಿಟ್ಟ ವಿಚಾರ. ಆಡಳಿತದ ಎಲ್ಲ ವಿಚಾರಗಳು ಸಮನ್ವಯ ಸಮಿತಿಯಲ್ಲಿ ಚರ್ಚಿಸಿಯೇ ಮಾಡಲಾಗುತ್ತಿದೆ.ಸಾಲ ಮನ್ನಾಕ್ಕೂ ಇದು ಹೊರತಾಗಿಲ್ಲ. ಎಲ್ಲವೂ ಸರಿಯಾಗಿದೆ. ಸಣ್ಣಪುಟ್ಟ ಗೊಂದಲಗಳನ್ನು ಸರಿಮಾಡಿಕೊಳ್ಳುತ್ತೇವೆ. ಸಿದ್ದರಾಮಯ್ಯ ಅವರು ಭಾಷಣದಲ್ಲಿ ಸಹಜವಾಗಿ ಜನರು ಮತ್ತೆ ಅವಕಾಶ ನೀಡಿದರೆ ತಾವು ಮುಖ್ಯಮಂತ್ರಿಯಾಗುವುದಾಗಿ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರ ಭದ್ರವಾಗಿದೆ ಎಂದರು.
ಸುಮಾರು 108 ಪೌರ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ಸಾಹ ಮೂಡಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಎಲ್ಲೆಡೆ ಪಕ್ಷಕ್ಕೆ ಉತ್ತಮ ಜನಬೆಂಬಲ ದೊರಕುತ್ತಿದೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಆದ ಅಭಿವೃದ್ದಿ ಕಾರ್ಯಕ್ರಮ ಜನರ ಮನಸ್ಸಿನಲ್ಲಿ ಅಚ್ಚಳಿಯೇ ಉಳಿದಿದೆ. ಒಂದು ಸುಭದ್ರ ಸರ್ಕಾರವನ್ನು ಜನತೆಗೆ ನೀಡಲಾಗಿತ್ತು. ಕೊಟ್ಟ ಮಾತಿನಂತೆ ಎಲ್ಲ ಭರವಸೆಗಳನ್ನು ಈಡೇರಿಸಲಾಗಿತ್ತು. ಜನತೆ ಸರ್ಕಾರವನ್ನು ನಕಾರಾತ್ಮಕವಾಗಿ ನೋಡಲಿಲ್ಲ. ಇದೆಲ್ಲವೂ ಕಾಂಗ್ರೆಸ್ ಗೆಲುವಿಗೆ ಪೂರಕವಾಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮಿತಿಮಿರಿತ್ತು. ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಗಮನಾರ್ಹ ಸಾಧನೆ ಮಾಡಲಾಗಿತ್ತು. ಬಂಡಾವಾಳ ಹೂಡಿಕೆಯಲ್ಲೂ ರಾಜ್ಯ ಪ್ರಥಮ ಸ್ಥಾನ ಗಳಿಸಿತ್ತು. ಉದ್ಯೋಗ ಸೃಷ್ಟಿಯಲ್ಲೂ ಉತ್ತಮ ಸಾಧನೆ ತೋರಿದೆ. ಜನತೆಗೆ ಇದೆಲ್ಲವನ್ನು ತಿಳಿಸಿ ಹೇಳುತ್ತೇವೆ. ಆ ಮೂಲಕ ಮತಯಾಚನೆ ನಡೆಸುತ್ತೇವೆ ಎಂದರು.
ಪತ್ರಿಕಾ ಗೋಷ್ಟಿಯಲ್ಲಿ ಮಾಜಿ ಸಚಿವ ಹೆಚ್.ಅಂಜನೇಯ, ಶಾಸಕ ರಘುಮೂರ್ತಿ, ಸಂಸದ ಚಂದ್ರಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಫಾತ್ಯರಾಜನ್, ಮುಖಂಡರಾದ ಹನುಮಲಿ ಷಣ್ಮುಖಪ್ಪ, ಆರ್.ಮಂಜುನಾಥ್, ಆರ್.ಕೆ. ಸರ್ದಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.
ನಗರದಲ್ಲಿ ರೋಡ್ ಶೋ
ನಗರಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾರಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡುರಾವ್ ಹಾಗೂ ಮುಖಂಡರು ವಿವಿಧ ವಾರ್ಡ್‍ಗಳಲ್ಲಿ ರೋಡ್ ಶೋ ಮೂಲಕ ಮತಯಾಚಿಸಿದರು.
ರೋಡ್ ಶೋ ವೇಳೆ ಬಾರೀ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದು. ಮಾಜಿ ಸಚಿವ ಹೆಚ್.ಆಂಜನೇಯ, ಶಾಸಕ ರಘುಮೂರ್ತಿ, ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ, ಕೆಪಿಸಿಸಿ ಕಾರ್ಯದರ್ಶಿ ಆರ್.ಮಂಜುನಾಥ್, ಹನುಮಲಿ ಷಣ್ಮುಖಪ್ಪ, ಜಿಲ್ಲಾಧ್ಯಕ್ಷ ಫಾತ್ಯರಾಜನ್ ಇನ್ನಿತರರು ಹಾಜರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
