ವಿಜ್ಞಾನ ಇಲ್ಲದೇ ಬದುಕೇ ಇಲ್ಲ: ಪ್ರೊ.ಎನ್.ಲಿಂಗಣ್ಣ

 ದಾವಣಗೆರೆ :

      ವಿಜ್ಞಾನ ನಮ್ಮೆಲ್ಲರ ಜೀವನದ ದಾರಿದೀಪ, ವಿಜ್ಞಾನ ಇಲ್ಲದೇ ಬದುಕಿಲ್ಲ. ಆದರೆ, ಅದನ್ನು ಬಳಸುವ ವಿಧಾನಗಳು ಉತ್ತಮವಾಗಿರಬೇಕು ಎಂದು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೊ.ಎನ್.ಲಿಂಗಣ್ಣ ತಿಳಿಸಿದರು.

      ನಗರದ ಸಿದ್ದಗಂಗಾ ಪ್ರೌಢಶಾಲೆಯಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ 2018-19ನ್ನು ‘ಹೆಚ್2ಓ2’ ಪ್ರಯೋಗದ ಮೂಲಕ ವಿನೂತನವಾಗಿ ಉದ್ಘಾಟಿಸಿ ಅವರು ಮತನಾಡಿದರು.

      ವಿಜ್ಞಾನವಿಲ್ಲದೇ ನಮ್ಮ ಜೀವನವನ್ನು ಊಹಿಸಿಕೊಳ್ಳುವುದು ಕಷ್ಟ. ವಿಜ್ಞಾನದಿಂದ ಅನೇಕ ಉಪಯೋಗಗಳು ಇವೆ. ಅಂತೆಯೇ ಅನೇಕ ದುಷ್ಪರಿಣಾಮಗಳೂ ಇವೆ. ಒಳಿತಿಗೂ ವಿಜ್ಞಾನವನ್ನು ಬಳಸಬಹುದು. ವಿನಾಶಕ್ಕೂ ಇದನ್ನು ಬಳಸಬಹುದು. ಇಂದಿನ ಪೈಪೋಟಿ ಯುಗದಲ್ಲಿ ವಿಜ್ಞಾನವನ್ನು ಅಭಿವೃದ್ಧಿಗೆ, ಮಾನವತೆಯ ಒಳಿತಿಗೆ ಪೂರಕವಾಗಿ ಹೇಗೆಲ್ಲ ಬಳಸಿಕೊಳ್ಳಬಹುದೆಂಬ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾದ ಅವಶ್ಯಕತೆ ಇದೆ ಎಂದು ಆಶಿಸಿದರು.

      ಜನ ಜೀವನಕ್ಕೆ ಉಪಯುಕ್ತವಾಗುವಂತೆ ನೈಸರ್ಗಿಕ ಶಕ್ತಿಗಳನ್ನು ಹೇಗೆಲ್ಲ ಬಳಸಬಹುದೆಂಬುದನ್ನು ಅಧ್ಯಯನ ಮಾಡಬೇಕಿದೆ. ವಿದ್ಯಾರ್ಥಿಗಳೇ ಮುಂದಿನ ವಿಜ್ಞಾನಿಗಳಾಗಿದ್ದು, ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಇಂತಹ ವಸ್ತುಪ್ರದರ್ಶನ ಮುಖ್ಯವಾಗಿವೆ. ವಿಜ್ಞಾನದಲ್ಲಿ ಹಲವಾರು ಪ್ರಯೋಗಗಳನ್ನು ಮಾಡುತ್ತಾ ಭಾರತ ಅಭಿವೃದ್ಧಿಶೀಲ ದೇಶವಾಗಿದೆ. ಅಮೇರಿಕಾ, ಇಂಗ್ಲೆಂಡ್, ಫ್ರಾನ್ಸ್‍ನಂತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿನಲ್ಲಿ ಭಾರತ ಸೇರಬೇಕು. ಈ ನಿಟ್ಟಿನಲ್ಲಿ ವಿಜ್ಞಾನದಲ್ಲಿ ಇನ್ನೂ ಹೆಚ್ಚಿನ ಅನ್ವೇಷಣೆಗಳು ನಡೆಯಲಿ ಎಂದು ಹೇಳಿದರು.

      ಜಿ ಪಂ ಸದಸ್ಯೆ ಶೈಲಜಾ ಬಸವರಾಜ್ ಮಾತನಾಡಿ, ವಿಜ್ಞಾನಕ್ಕೆ ಆದಿ-ಅಂತ್ಯ ಎಂಬುದಿಲ್ಲ. ಇಂತಹ ಸವಿಸ್ತಾರವಾದ ವಿಜ್ಞಾನ ವಿಷಯದಲ್ಲಿ ಯಾವ ದೇಶ ಮುಂಚೂಣಿಯಲ್ಲಿದೆಯೋ ಅದೇ ಹೆಚ್ಚು ಬಲಾಢ್ಯ ದೇಶವೆಂಬ ಸಂದರ್ಭ ಬಂದೊದಗಿದೆ. ಅತ್ಯದ್ಭುತ ಸೃಷ್ಟಿಗಳಿಂದ ಹಿಡಿದು ವಿನಾಶಕಾರಿ ಅಣ್ವಸ್ತ್ರದವರೆಗೆ ವಿಜ್ಞಾನ ಬೆಳೆದಿದೆ. ಆದರೆ, ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು, ಎಲ್ಲರಿಗೂ ಅನುಕೂಲಕರವಾಗಿರುವ, ಸಮಾಜ-ಕುಟುಂಬದಲ್ಲಿ ಶಾಂತಿ-ಸೌಹಾರ್ಧತೆಯಿಂದ ಬದುಕಲು ಪೂರಕವಾದ ವಿಜ್ಞಾನ ಬೇಕಿದೆ. ವಿಜ್ಞಾನದಲ್ಲಿನ ಸಾಧಕ-ಬಾಧಕಗಳನ್ನು ನೋಡಿಕೊಂಡು ಸಂಶೋಧನೆಯಲ್ಲಿ ತೊಡಗಬೇಕಿದೆ. ಮೂಲವಿಜ್ಞಾನದಲ್ಲಿ ಸಂಶೋಧಿಸುವ ಅನೇಕ ವಿದ್ಯಾರ್ಥಿಗಳಿದ್ದಾರೆ. ಅತ್ಯಂತ ಹೆಚ್ಚಿನ ವಿಜ್ಞಾನಿಗಳನ್ನು ತಯಾರು ಮಾಡುತ್ತಿರುವ ದೇಶ ನಮ್ಮದಾಗಿದ್ದರೂ ಆರ್ಥಿಕವಾಗಿ ಬಳಲುವ ಸ್ಥಿತಿ ಅನೇಕ ವಿಜ್ಞಾನಿಗಳದ್ದಾಗಿರುವುದರಿಂದ ವಿಜ್ಞಾನಿಗಳನ್ನು ಬೆಳೆಸಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

      ಜಿ ಪಂ ಸದಸ್ಯೆ ಗೀತಾ ಗಂಗಾನಾಯ್ಕ ಮಾತನಾಡಿ, ವಿಜ್ಞಾನ ಎಂದರೆ ಆಶ್ಚರ್ಯ, ಇಂದಿನ ಮಕ್ಕಳೇ ಮುಂದಿನ ವಿಜ್ಞಾನಿಗಳಾಗಿದ್ದು. ಪಠ್ಯದ ಜೊತೆಜೊತೆಗೆ ಮಕ್ಕಳಲ್ಲಿನ ವಿಶೇಷ ಪ್ರತಿಭೆಗಳನ್ನು ಅನಾವರಣಗೊಳಿಸಲು ಇಂತಹ ವಸ್ತುಪ್ರದರ್ಶನದಿಂದ ಸಾಧ್ಯವಾಗುತ್ತದೆ ಎಂದರು.

      ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಿ ಪಂ ಅಧ್ಯಕ್ಷೆ ಜಯಶೀಲ ವಸ್ತುಪ್ರದರ್ಶನ ವೀಕ್ಷಿಸಿದರು. ಡಯಟ್‍ನ ಪ್ರಾಚಾರ್ಯರಾದ ಹೆಚ್.ಕೆ.ಲಿಂಗರಾಜು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮಹಾಪೌರರಾದ ಶೋಭಾ ಪಲ್ಲಾಗಟ್ಟೆ ಅಧ್ಯಕ್ಷತೆ ವಹಿಸಿದ್ದರು. ಸಿದ್ದಗಂಗಾ ಪ್ರೌಢಶಾಲೆಯ ಸಂಸ್ಥಾಪಕ ಶಿವಣ್ಣ, ಶಾಲೆಯ ಮುಖ್ಯಸ್ಥೆ ಜಸ್ಟೀನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link