ಮಧುಗಿರಿ
ರೈತ ಅನ್ನದಾತನಾದರೆ ಶಿಕ್ಷಕ ಜ್ಞಾನದಾತ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ತಿಳಿಸಿದರು.
ಬುಧವಾರ ಪಟ್ಟಣದ ಕನ್ನಡ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಪ್ರಶಸ್ತಿ ಪುರಸ್ಕøತ ಶಿಕ್ಷಕರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರಶಸ್ತಿ ಪುರಸ್ಕಾರಗಳು ವ್ಯಕ್ತಿಯ ಜವಾಬ್ದಾರಿಯನ್ನು ಹೆಚ್ಚಿಸಿ ಕ್ರಿಯಾಶೀಲರನ್ನಾಗಿಸುತ್ತದೆ. ಗುರುಶಿಷ್ಯರ ಬಾಂಧವ್ಯ ಇನ್ನೂ ಭಾರತದಲ್ಲಿ ಇರುವಂತೆ ವಿಶ್ವದ ಬೇರೆಲ್ಲೂ ಕಾಣುವುದಿಲ್ಲ. ಇಂದಿನ ವಿದ್ಯಾರ್ಥಿಗಳು ನಮ್ಮ ಪರಂಪರೆಯಲ್ಲಿರುವ ಗುರುಶಿಷ್ಯರ ಸಂಬಂಧವನ್ನು ಉಳಿಸಿ ಬೆಳೆಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ನಮ್ಮ ಶ್ಯೆಕ್ಷಣಿಕ ಜಿಲ್ಲೆಯಿಂದ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾದ ಎಲ್ಲಾ ನಾಲ್ವರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮತ್ತು ಒಡನಾಡಿಗಳಾಗಿರುವುದು ಒಂದು ವಿಶೇಷವಾಗಿದ್ದು, ಮುಂದಿನ ದಿನಗಳಲ್ಲಿ ಇವರಿಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳು ದೊರೆಯುವಂತಾಗಲಿ ಎಂದು ಆಶಿಸಿದರು.
ತಾಲ್ಲೂಕು ಸರ್ಕಾರಿ ನೌಕರರ ಅಧ್ಯಕ್ಷ ನಾ.ಮಹಲಿಂಗೇಶ್, ಧಾರ್ಮಿಕ ಮುಂಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಎಚ್.ಡಿ.ನರಸೇಗೌಡ, ನಗರ ಘಟಕದ ಅಧ್ಯಕ್ಷ ನಾಗು ಹೆಚ್.ಪುರ, ಪದಾಧಿಕಾರಿಗಳಾದ ಲಕ್ಷ್ಮಿನರಸಯ್ಯ, ಪುಟ್ಟಸ್ವಾಮಿ, ವೆಂಕಟರಮಣಪ್ಪ, ಸತ್ಯನಾರಾಯಣ ಮುಂತಾದವರು ಪ್ರಶಸ್ತಿ ಪುರಸ್ಕøತರನ್ನು ಕುರಿತು ಮಾತನಾಡಿದರು.
ರಾಜ್ಯ ಪ್ರಶಸ್ತಿ ಪುರಸ್ಕತ ಐ.ಡಿ.ಹಳ್ಳಿ ರಂಗನಾಥಪ್ಪ ಮತ್ತು ಜಿಲ್ಲಾ ಪ್ರಶಸ್ತಿಗೆ ಭಾಜನರಾದ ಎಂ.ಎನ್.ನರಸಿಂಹಮೂರ್ತಿ , ಉಮಾಶಂಕರ್, ವೆಂಕಟರತ್ನಂಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು.ಹಿರಿಯ ಸಾಹಿತಿ ಜಯರಾಮಯ್ಯ, ಶಿಕ್ಷಕರಾದ ಗಂಗಾಧರ್, ನಾಗೇಂದ್ರಪ್ಪ,, ಲಲಿತಾಂಬ ಮುಂತಾದವರು ಉಪಸ್ಥಿತರಿದ್ದರು.ಪುಟ್ಟಸ್ವಾಮಿ ಸ್ವಾಗತಿಸಿದರು, ನರಸೇಗೌಡ ಕಾರ್ಯಕ್ರಮ ನಿರೂಪಿಸಿದರು, ಸತ್ಯನಾರಾಯಣ ವಂದಿಸಿದರು.