ಮಡಿಕೇರಿ:
‘ಮಳೆಯಿಂದ ಜಿಲ್ಲೆಯ ಶಾಲಾ – ಕಾಲೇಜುಗಳಿಗೆ ತಿಂಗಳು ರಜೆ ನೀಡಲಾಗಿತ್ತು. ಶನಿವಾರ, ಭಾನುವಾರ ಶಾಲಾ– ಕಾಲೇಜು ನಡೆಸಿ, ಪಾಠ ಪೂರ್ಣಗೊಳಿಸಲಾಗುವುದು. ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಎಂದು ಶಿಕ್ಷಣ ಸಚಿವ ಎನ್. ಮಹೇಶ್ ಭರವಸೆ ನೀಡಿದ್ದಾರೆ.
ಮಳೆಯಿಂದಾಗಿ ‘ರಸ್ತೆ ಸಂಪರ್ಕ ಕಡಿತಗೊಂಡಿದ್ದು ಶಾಲೆಗಳಿಗೆ ತಲುಪಲು ಸಾಧ್ಯವಿಲ್ಲದ ಕಡೆ ಪರಿಹಾರ ಕೇಂದ್ರದಲ್ಲೇ ಶಿಕ್ಷಕರನ್ನು ನಿಯೋಜಿಸಿ ಕಲಿಕಾ ಚಟುವಟಿಕೆ ಆರಂಭಿಸಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.
ಮಳೆ, ಭೂಕುಸಿತದಿಂದ ಸಂಕಷ್ಟಕ್ಕೆ ಒಳಗಾಗಿರುವ ‘ಸೋಮವಾರಪೇಟೆ ಹಾಗೂ ಮಡಿಕೇರಿ ತಾಲ್ಲೂಕಿನಲ್ಲಿನ 61 ಶಾಲೆಯ ವಿದ್ಯಾರ್ಥಿಗಳನ್ನು ಸಮೀಪದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ಸ್ಥಳಾಂತರ ಮಾಡಲಾಗುವುದು’ ಹಾಗೂ ಮನೆ ಕುಸಿತದಿಂದ ಪಠ್ಯ ಪುಸ್ತಕ, ನೋಟ್‌ಬುಕ್ ಕಳೆದುಕೊಂಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕ ವಿತರಣೆ ಮಾಡಲಾವುದು’ ಎಂದು ತಿಳಿಸಿದ್ದಾರೆ.
‘9 ಶಾಲೆಯ ಕಟ್ಟಡಗಳು ಪೂರ್ಣ ಕುಸಿದಿವೆ. 163 ಕೊಠಡಿಗಳು ಹಾನಿಗೀಡಾಗಿದ್ದು ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಅಂದಾಜು 4 ಕೋಟಿಯಷ್ಟು ಅನುದಾನದ ಅಗತ್ಯವಿದೆ. ರಾಜ್ಯ ಸರ್ಕಾರಿ ನೌಕರರು, ಶಾಲಾ ಶಿಕ್ಷಕರು ಒಂದು ದಿನದ ಸಂಬಳವನ್ನು ‘ಮುಖ್ಯಮಂತ್ರಿ ಪರಿಹಾರ ನಿಧಿ’ಗೆ ನೀಡಲು ತೀರ್ಮಾನಿಸಿದ್ದಾರೆ. ಅದರಿಂದ 100 ಕೋಟಿ ಸಿಗಲಿದೆ. ಶಿಕ್ಷಕರಿಂದಲೇ 40 ಕೋಟಿ ಸಂಗ್ರಹವಾಗಲಿದೆ. ರಾಜ್ಯದಲ್ಲಿ ಶಾಲಾ ಕೊಠಡಿ ದುರಸ್ತಿಗೆ 120 ಕೋಟಿ ಅನುದಾನ ಮೀಸಲಿಡಲಾಗಿದ್ದು, ಅದರಿಂದ ಶಾಲೆಗಳ ದುರಸ್ತಿಗೆ ಅಗತ್ಯವಿರುವಷ್ಟು ಅನುದಾನ ಬಳಸಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ಸಚಿವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ