ಚಳ್ಳಕೆರೆ:
ರಾಷ್ಟ್ರದಲ್ಲಿ ರೂಪಿತವಾಗಿರುವ ಸಂವಿಧಾನ ಬದ್ದ ಕಾನೂನುಗಳು ಮಹಿಳೆಯರಿಗೆ ಸಂಪೂರ್ಣ ಬೆಂಬಲವನ್ನು ನೀಡುವ ಮೂಲಕ ಅವಳ ರಕ್ಷಣೆಗೆ ಮುಂದಾಗಿದೆ. ಮಹಿಳೆ ಈ ಸಮಾಜದ ಪ್ರಜ್ವಲಿಸುವ ಬೆಳಕಾಗಿದ್ದು, ಅವಳ ಜೀವನದಲ್ಲಿ ದೌರ್ಜನ್ಯದ ಕತ್ತಲು ಆವರಿಸದಂತೆ ಜಾಗ್ರತೆ ವಹಿಸಬೇಕಾಗಿದೆ. ಪೊಲೀಸ್ ಇಲಾಖೆ ಜಿಲ್ಲೆಯ ವಿವಿಧೆಡೆಗಳಲ್ಲಿ ವಿಶೇಷವಾಗಿ ಶಾಲಾ ಕಾಲೇಜುಗಳ ಬಳಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುವ ಶಕ್ತಿಗಳ ವಿರುದ್ದ ಒನಕೆ ಓಬವ್ವ ಪಡೆಯ ಮೂಲಕ ಅವಳ ಗೌರವವನ್ನು ರಕ್ಷಿಸುವಲ್ಲಿ ಮುಂದಾಗಿದೆ ಎಂದು ಉಪವಿಭಾಗದ ಡಿವೈಎಸ್ಪಿ ಎಸ್.ರೋಷನ್ ಜಮೀರ್ ತಿಳಿಸಿದರು.
ಅವರು, ಮಂಗಳವಾರ ಇಲ್ಲಿನ ಸ್ವಾಮಿವಿವೇಕಾನಂದ ವಿದ್ಯಾಸಂಸ್ಥೆಯ ಎನ್.ಜಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಆತ್ಮರಕ್ಷಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚೆಗೆ ಜಿಲ್ಲೆಯ ವಿವಿಧೆಡೆಗಳಲ್ಲಿ ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಪ್ರತಿನಿತ್ಯ ಆಗುತ್ತಿರುವ ಕಿರುಕುಳವನ್ನು ಗ್ರಹಿಸಿದ ಪೊಲೀಸ್ ಇಲಾಖೆ ಇವುಗಳನ್ನು ನಿಯಂತ್ರಿಸಲು ವಿದ್ಯಾರ್ಥಿನಿ ಯಾವುದೇ ರೀತಿಯ ಅಳುಕಿಲ್ಲದೆ ಕಾಲೇಜಿಗೆ ಹೋಗಿ ತನ್ನ ಅಭ್ಯಾಸವನ್ನು ಮುಂದುವರೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಶ್ರೀನಾಥ ಎಂ.ಜೋಶಿ, ಹೆಚ್ಚುವರಿ ರಕ್ಷಣಾಧಿಕಾರಿ ರಾಮಲಕ್ಷ್ಮಣ್‍ವರಸಿದ್ದಿ ನೇತೃತ್ವದಲ್ಲಿ 45 ಮಹಿಳಾ ಪೊಲೀಸರ ಓಬವ್ವ ಪಡೆಯನ್ನು ರಚಿಸಿ ಈ ಪಡೆ ಪ್ರತಿಯೊಂದು ಶಾಲಾ ಕಾಲೇಜುಗಳ ಆವರಣದಲ್ಲಿ ಗಸ್ತು ಮಾಡುತ್ತಾ ಯಾರಾದರೂ ಮಹಿಳೆಯ ಮೇಲೆ ದೌರ್ಜನ್ಯ ಎಸಗಲು ಮುಂದಾದಲ್ಲಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಯಾವುದೇ ಹಂತದಲ್ಲೂ ಮಹಿಳೆಯ ಮೇಲೆ ದೌರ್ಜನ್ಯ ನಡೆಯದಂತೆ ಜಾಗ್ರತೆ ವಹಿಸುತ್ತಾರೆ. ಓಬವ್ವಪಡೆಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗಿದ್ದು, ಅಪಾಯಕ್ಕೆ ಸಿಲುಕಿದ ವಿದ್ಯಾರ್ಥಿನಿ ದೂರವಾಣಿ ಮೂಲಕ ಮಾಹಿತಿ ನೀಡಿದಲ್ಲಿ ಕೇವಲ ಐದತ್ತು ನಿಮಿಷದಲ್ಲಿ ಸ್ಥಳಕ್ಕೆ ಆಗಮಿಸುತ್ತಾರೆ. ಶಾಲಾ ಕಾಲೇಜುಗಳಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿನಿಯರು ತಮ್ಮ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಆಸಕ್ತಿ ನೀಡಬೇಕು. ಅನಗತ್ಯ ವಿಷಯಗಳಿಂದ ದೂರವಿರಬೇಕು. ನಿಮ್ಮ ಭವಿಷ್ಯವನ್ನು ರೂಪಿಸುವ ಶಿಕ್ಷಣವನ್ನು ಹೆಚ್ಚು ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ, ಪ್ರತಿನಿತ್ಯವೂ ಪೊಲೀಸ್ ಇಲಾಖೆ ಸಮಾಜದ ಹಲವಾರು ಚಟುವಟಿಕೆಗಳ ಬಗ್ಗೆ ಜಾಗ್ರತೆ ವಹಿಸುತ್ತದೆ. ಶಾಂತಿ ಮತ್ತು ಸೌಹಾರ್ಥತೆ ಕಾಪಾಡುವುದಲ್ಲದೆ, ವಿದ್ಯಾರ್ಥಿನಿಯರಿಗೆ ಕಂಟಕಪ್ರಾಯವಾಗುವ ಪುಂಡರ ವಿರುದ್ದ ಓಬವ್ವ ಪಡೆಯ ಮೂಲಕ ಕಾನೂನು ಕ್ರಮ ಜರುಗಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿನಿಯೂ ಆತ್ಮರಕ್ಷಣೆಗೆ ಒತ್ತು ನೀಡಬೇಕಿದೆ. ಕಾರಣ ನಿಮ್ಮ ಕಲಿಕೆಯ ಸಂದರ್ಭದಲ್ಲಿ ಕೆಲವು ಶಕ್ತಿಗಳು ಸ್ನೇಹ ಬಯಸಿ ನಿಮ್ಮ ದೂರವಾಣಿ ಸಂಖ್ಯೆ ಹಾಗೂ ಇತರೆ ಮಾಹಿತಿಯನ್ನು ಪಡೆದು ವಿಶ್ವಾಸದ ಮೂಲಕವೇ ವಿದ್ಯಾರ್ಥಿನಿಯರನ್ನು ತಪ್ಪು ದಾರಿಗೆ ಎಳೆಯುವ ಸಂದರ್ಭಗಳು ಹೆಚ್ಚು. ವಿದ್ಯಾರ್ಥಿನಿಯರು ತಮ್ಮ ಭವಿಷ್ಯದ ಜೀವನ ಉತ್ತಮ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಮೊಬೈಲ್, ಫೇಸ್‍ಬುಕ್, ವಾಟ್ಸ್‍ಪ್, ಟ್ವಿಟ್ವರ್, ಇಸ್ಟ್ರೋಗ್ರಾಂ, ಇ-ಮೇಲ್ ಇಂತಹ ಆಧುನಿಕ ತಂತ್ರಜ್ಞಾನವುಳ್ಳ ಎಲೆಕ್ಟ್ರಾನಿಕ್ ಯಂತ್ರಗಳಿಂದ ದೂರವಿರಬೇಕು. ಶೈಕ್ಷಣಿಕ ಪ್ರಗತಿಗೆ ಪೂರಕವಾಗುವಂತಹ ಅಂಶಗಳನ್ನು ಮಾತ್ರ ತಂತ್ರಜ್ಞಾನದಲ್ಲಿ ಪಡೆಯಬೇಕು. ಪ್ರತಿಯೊಬ್ಬರ ಜೀವನವೂ ಅಮೂಲ್ಯವಾಗಿದ್ದು, ಈ ಬಗ್ಗೆ ಚಿಂತಿಸಿ ಕಾಯೋನ್ಮುಖರಾಗುವಂತೆ ಮನವಿ ಮಾಡಿದರು.
ಓಬವ್ವ ಪಡೆಯ ಮುಖ್ಯಸ್ಥೆ ಜ್ಯೋತಿ ಮಾತನಾಡಿ, ಕಾಲೇಜು ಹಾಗೂ ಹೈಸ್ಕೂಲ್‍ನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ತಮ್ಮ ಆತ್ಮರಕ್ಷಣೆಗೆ ಮೊದಲ ಆದ್ಯತೆ ನೀಡಬೇಕಿದೆ. ಕಾರಣ ನಮಗೆ ಅರಿವಿಲ್ಲದಂತೆ ನಮಗೆ ಅಪಾಯ ನಮ್ಮ ಬೆನ್ನ ಹಿಂದೆ ಇರುತ್ತದೆ. ಕಾರಣ ವಿದ್ಯಾರ್ಥಿನಿಯರು ಬಸ್, ಆಟೋ, ರಸ್ತೆ ಗಳಲ್ಲಿ ಓಡಾಟ ನಡೆಸುವಾಗ ಅನೇಕ ಪುಂಡಪೋಕರಿಗಳ ವಕ್ರದೃಷ್ಠಿ ನಿಮ್ಮ ಮೇಲೆ ಬಿದ್ದು ನಿಮಗೆ ಅಪಾಯ ಉಂಟು ಮಾಡುವ ಲಕ್ಷಣಗಳು ಇರುತ್ತವೆ. ಈ ಹಿನ್ನೆಲೆಯಲ್ಲಿ ಅಪಾಯದ ಸಂದರ್ಭದಲ್ಲಿ ಅನುಸರಿಸಬೇಕಾದ ಹಲವಾರು ವಿಧಾನಗಳನ್ನು ಜಿಲ್ಲಾ ರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ತರಬೇತಿ ಮೂಲಕ ನಮಗೆ ನೀಡಿದ್ದು, ಅದನ್ನು ನಿಮಗೆ ಪ್ರಾತ್ಯಕ್ಷತೆ ಮೂಲಕ ನೀಡುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಎಂ.ನಾರಾಯಣಪ್ಪ ವಹಿಸಿದ್ದರು. ಮುಖ್ಯ ಶಿಕ್ಷಕಿ ಡಿ.ಆರ್.ಪ್ರಮೀಳಾ, ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಇರ್ಫಾನ್, ಒಬವ್ವ ಪಡೆಯ ಸಿಬ್ಬಂದಿಯವರಾದ ಕವಿತಾ, ಸುಮಂಗಲೆ, ರೂಪ, ಲತಾ, ರತ್ನಮ್ಮ, ಗಂಗಮ್ಮ, ಶಾಲೆಯ ಶಿಕ್ಷಕಿಯರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.