ಉಡುಪಿ:
ಉಡುಪಿಯ ಕೆಮ್ಮಣ್ಣು ಗ್ರಾಮದ ಫರಂಗಿ ಕುದ್ರು ಬಳಿ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಕೀರ್ತನ್ ಪುತ್ರನ್ ಹಾಗೂ ರಾಕೇಶ್ ಬೆಳ್ಚಡ ಅವರ ಮನೆಗೆ ಇಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಅವರು ಭೇಟಿ ಮಾಡಿ ಮೃತರ ಕುಟುಂಬಕ್ಕೆ ಸಂತ್ವಾನ ಹೇಳಿದರು.ಮೊದಲಿಗೆ ಕೀರ್ತನ್ ಅವರ ಮನೆಗೆ ಭೇಟಿ ನೀಡಿದ ಸಚಿವೆ ಡಾ.ಜಯಮಾಲ ಅವರು ಮೃತ ಕೀರ್ತನ್ ಅವರ ತಂದೆ ತಾಯಿ ಹಾಗೂ ಬಂಧುಗಳಿಗೆ ಸಾಂತ್ವಾನ ಹೇಳಿದರು.
ಬಳಿಕ ರಾಕೇಶ್ ಬೆಳ್ಚಡ ಅವರ ಮನೆಗೆ ಭೇಟಿ ನೀಡಿದ ಸಚಿವರು ಮೃತರ ತಂದೆ ಹಾಗೂ ತಾಯಿ ಮತ್ತು ಕುಟುಂಬ ವರ್ಗದವರಿಗೆ ಸಂತ್ವಾನ ಹೇಳಿದರು.
ಇಬ್ಬರೂ ಮೃತರು ಯುವಕರಾಗಿದ್ದು, ಇನ್ನೂ ಸಾಕಷ್ಟು ಬಾಳಿ ಬದುಕಬೇಕಾಗಿದ್ದವರು, ಆದರೆ ಆಕಸ್ಮಿಕ ಅವಘಡದಲ್ಲಿ ಮೃತಪಟ್ಟಿರುವುದು ನೋವಿನ ಸಂಗತಿ. ಮೃತರ ಕುಟುಂಬದ ನೋವಿನಲ್ಲಿ ನಾನು ಭಾಗಿಯಾಗಿದ್ದೇನೆ. ಯಾವ ರೀತಿಯಲ್ಲೂ ಹೋದ ಜೀವವನ್ನು ಮರಳಿ ತರಲಾಗದು, ಕುಟುಂಬಕ್ಕೆ ಆಧಾರವಾಗಬೇಕಾಗಿದ್ದ ಈ ಯುವಕರ ಸಾವು ಇವರ ಕುಟುಂಬದ ಆಧಾರಸ್ಥಂಬವನ್ನೇ ಕಳಚಿದಂತೆ ಮಾಡಿದೆ. ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಮೆಸ್ಕಾಮ್ ಇಲಾಖೆಯ ವತಿಯಿಂದ ತಕ್ಷಣ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಕುಟುಂಬಿಕರ ಭೇಟಿಯ ಬಳಿಕ ತಿಳಿಸಿದರು.








