ಬೆಳಗಾವಿ:
ತಾಲ್ಲೂಕಿನ ಹೊಸ ವಂಟಮೂರಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ, ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ತಡರಾತ್ರಿ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.
11 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದರು. ಇವರ ಪೈಕಿ ಮೊದಲ ಮೂವರು ಪುರುಷ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಕೋರಿದ್ದರು.
‘ಬುಧವಾರ ವಿಚಾರಣೆ ಕೈಗೆತ್ತಿಕೊಂಡ ಇಲ್ಲಿನ 4ನೇ ಜೆಎಂಎಫ್‌ಸಿ ನ್ಯಾಯಾಲಯವು ಆದೇಶ ಹೊರಡಿಸಿತು. ಈ ಮೂವರ ಪೈಕಿ ಇಬ್ಬರು ನಾಲ್ಕು ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣದಲ್ಲೂ ದೋಷಿಗಳಾಗಿದ್ದಾರೆ. ಜಾಮೀನು ಪಡೆದು ಅವರು ಹೊರಗಿದ್ದರು. ಹೀಗಾಗಿ, ಸಿಐಡಿ ಅಧಿಕಾರಿಗಳು ಅವರನ್ನು ಮತ್ತೆ ವಶಕ್ಕೆ ಪಡೆದು ಸ್ಥಳ ಮಹಜರು ನಡೆಸಿದರು’ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ಕಾಕತಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಿಐಡಿಯ ಪ್ರಭಾರಿ ಡಿಐಜಿ ಸುಧೀರಕುಮಾರ ರೆಡ್ಡಿ ಅವರ ನೇತೃತ್ವದ ತಂಡವು, ಠಾಣೆಯ 15 ಸಿಬ್ಬಂದಿಯನ್ನು ವಿಚಾರಣೆ ಮಾಡಿತು.‘ಮಹಿಳೆ ವಿವಸ್ತ್ರಗೊಳಿಸಿದ ಹೊಸ ವಂಟಮೂರಿ ಗ್ರಾಮವು ಕಾಕತಿ ಠಾಣೆಯಿಂದ ಎಷ್ಟು ಅಂತರದಲ್ಲಿದೆ? ಎಷ್ಟು ಗಂಟೆಗೆ ಘಟನೆ ನಡೆದಿದೆ? ಮಾಹಿತಿ ಎಷ್ಟು ಗಂಟೆಗೆ ಬಂದಿದೆ, ಪೊಲೀಸರು ಎಷ್ಟೊತ್ತಿಗೆ ಸ್ಥಳಕ್ಕೆ ಧಾವಿಸಿದ್ದಾರೆ ಎಂಬ ವಿವರವನ್ನು ಸಿಬ್ಬಂದಿಯಿಂದ ಪಡೆದರು’ ಎಂದು ಮೂಲಗಳು ತಿಳಿಸಿವೆ.
ಮತ್ತೊಂದು ಪ್ರೇಮ ಪ್ರಕರಣ:
ಬೆಳಗಾವಿ ಸಮೀಪದ ಉದ್ಯಮಬಾಗದಲ್ಲಿ ಪ್ರೇಮ ವಿವಾಹಕ್ಕೆ ಸಂಬಂಧಪಟ್ಟಂತೆ ಯುವಕನ ತಂದೆಯನ್ನು ಯುವತಿಯ ಕಡೆಯವರು ಥಳಿಸಿದ ಘಟನೆ ತಡವಾಗಿ ವರದಿಯಾಗಿದೆ.
ಪುಣೆಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯಮಬಾಗದ ಯುವಕನೊಬ್ಬ ಅಲ್ಲಿನ ಯುವತಿಯೊಬ್ಬರನ್ನು ಪ್ರೀತಿಸಿದ್ದ. ಆದರೆ, ಇವರ ಮದುವೆಗೆ ಯುವತಿ ಮನೆಯವರು ಒಪ್ಪಿಗೆ ನೀಡಿರಲಿಲ್ಲ. ಡಿಸೆಂಬರ್ 10ರಂದು ಯುವತಿ ಮನೆ ಬಿಟ್ಟು, ಡಿ.12ರಂದು ಮದುವೆಯಾಗಿ ಯುವಕನ ಮನೆಗೆ ಬಂದಿದ್ದರು. ಯುವಕನ ಮನೆಯವರು ಇಬ್ಬರಿಗೂ ಆಶ್ರಯ ನೀಡಿದ್ದರು.
ಯುವತಿ ಕಡೆಯುವರು ಡಿಸೆಂಬರ್ 15ರಂದು ಯುವಕನ ತಂದೆ ಹಾಗೂ ಸಹೋದರನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಉದ್ಯಮಬಾಗ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈ ಸಂಬಂಧ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ