ಬೆಂಗಳೂರು:
ರಾಜ್ಯದಲ್ಲಿ ಈಗಾಗಲೇ ರಚನೆಯಾಗಿರುವ 50 ಹೊಸ ತಾಲ್ಲೂಕುಗಳಿಗೆ ವಿವಿಧ ಇಲಾಖೆಗಳ ಕಚೇರಿಯನ್ನು ಮಂಜೂರು ಮಾಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.
ಕಂದಾಯ ಇಲಾಖೆಯ ವಿವಿಧ ವಿಷಯಗಳ ಕುರಿತು ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಿದರು. ಎಂ.ಬಿ.ಪ್ರಕಾಶ್ ವರದಿಯ ಪ್ರಕಾರ ಹೊಸದಾಗಿ ರಚನೆಯಾದ ತಾಲ್ಲೂಕಿನಲ್ಲಿ ಕನಿಷ್ಟ 14 ಇಲಾಖೆಗಳು ಕಾರ್ಯನಿರ್ವಹಿಸಬೇಕಾಗುತ್ತದೆ. ಹೊಸ ತಾಲ್ಲೂಕುಗಳಲ್ಲಿ ಉಳಿದ ಇಲಾಖೆಗಳ ತಾಲ್ಲೂಕು ಮಟ್ಟದ ಕಚೇರಿಗಳನ್ನು ಸ್ಥಾಪಿಸಲು ಸಹಮತ ನೀಡುವಂತೆ ಆರ್ಥಿಕ ಇಲಾಖೆಗೆ ಸಲ್ಲಿಸಿದ್ದ ಪ್ರಸ್ತಾವನೆಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಬಗ್ಗೆ ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಹೊಸ ತಾಲ್ಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣದ ಕುರಿತು ಸಹ ಚರ್ಚೆ ನಡೆಸಲಾಯಿತು. ಇದಲ್ಲದೆ ಹೊಸ ತಾಲ್ಲೂಕು ರಚನೆಯ ಬಗ್ಗೆ ಬಂದಿರುವ ಬೇಡಿಕೆಗಳಲ್ಲಿ ನಿಜವಾಗಿಯೂ ಅಗತ್ಯವಿರುವ ಸ್ಥಳವನ್ನು ಗುರುತಿಸುವಂತೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ತಿಳಿಸಿದರು.
ಭೂ ಮಾಪನ ಇಲಾಖೆಯ ಕರ್ನಾಟಕ ಭೂ ಕಂದಾಯ ಕಾಯ್ದೆಯ 1964 ರ ಕಲಂ 94 (ಸಿ) ಅಡಿಯಲ್ಲಿ 26922 ಅರ್ಜಿಗಳನ್ನು ಹಾಗೂ ಮತ್ತು 94 (ಸಿ.ಸಿ) ಅಡಿಯಲ್ಲಿ 13971 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸಾಮಾಜಿಕ ಭದ್ರತೆ ಪಿಂಚಣಿ ವಿತರಣೆಯಲ್ಲಿ ವಿಳಂಬವಾಗುತ್ತಿರುವ ಕುರಿತು ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
