ಹುಳಿಯಾರು:
ಗ್ರಾಹಕರ ಹಕ್ಕುಗಳ ರಕ್ಷಣೆಗಾಗಿ ಹಲವು ಕಾನೂನು ಜಾರಿಗೊಳಿಸಲಾಗಿದೆ. ಗ್ರಾಹಕರು ಕಾನೂನು ಮತ್ತು ಹಕ್ಕುಗಳನ್ನು ತಿಳಿದುಕೊಂಡು ಶೋಷಣೆಯಿಂದ ತಪ್ಪಿಸಿಕೊಳ್ಳಬೇಕು ಎಂದು ಚಿ.ನಾ.ಹಳ್ಳಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿರಣ್ ಕುಮಾರ್ ಡಿ ವಡಿಗೇರಿ ಹೇಳಿದರು.
ಹಂದನಕೆರೆ ಹೋಬಳಿ ಕಾನ್ಕೆರೆಯಲ್ಲಿ ಕಾನೂನು ಸೇವಾ ಪ್ರಾಧಿಕಾರ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ವೇದಿಕೆಯಿಂದ ವಿಶ್ವ ಗ್ರಾಹಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತೆರಿಗೆ ಕಟ್ಟಿ ವಸ್ತು ಖರೀದಿಸುವುದರಿಂದ ಎಲ್ಲರೂ ರಸೀದಿ ಕೇಳಿ ಪಡೆಯುವ ಮನೋಭಾವ ಬೆಳೆಸಿಕೊಳ್ಳಬೇಕು. ಶೇ.85 ರಷ್ಟು ಮಹಿಳೆಯರು ಹೆಚ್ಚಾಗಿ ವಸ್ತು ಖರೀದಿಸುವುದರಿಂದ ಅವರಿಗೆ ಗ್ರಾಹಕ ಹಕ್ಕು ಶಿಕ್ಷಣದ ಅವಶ್ಯಕವಿದೆ ಎಂದರಲ್ಲದೆ ಖರೀದಿಸುವ ಮುನ್ನ ಯಾವುದೇ ವಸ್ತುವಿನ ತೂಕ, ಅಳತೆ, ಅದರ ಗುಣಮಟ್ಟ, ಬಳಕೆ ಮಾಡುವ ವಿಧಾನ ಅರಿತಿರಬೇಕು. ಗ್ರಾಹಕರು ಖರೀದಿಸಿದ ವಸ್ತುವಿನ ಬಿಲ್‍ನ್ನು ಕೇಳಿ ಪಡೆಯುವ ಅಭ್ಯಾಸ ರೂಢಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಎಸ್.ಎಚ್.ಚಂದ್ರಶೇಖರ್ ಅವರು ಮಾತನಾಡಿ ಮಾರುಕಟ್ಟೆ ಅನ್ವೇಷಣೆ ಪೂರ್ವದಲ್ಲಿಯೇ ವಸ್ತುಗಳ ವಿನಿಮಯ ಪದ್ಧತಿ ಚಾಲ್ತಿಯಲ್ಲಿತ್ತು. ಬಳಿಕ ವಸ್ತುವಿನ ಮೌಲ್ಯಕ್ಕೆ ಅನುಗುಣವಾಗಿ ಹಣ ಕೊಟ್ಟು ಖರೀದಿಸುವ ವಿಧಾನ ಬಂದಿತು. ಈಗ ಆನ್‍ಲೈನ್ ವ್ಯವಹಾರ ಬಂದಿದೆ ವಿವರಿಸಿದರಲ್ಲದೆ ಆನ್‍ಲೈನ್‍ನಲ್ಲಿ ಮೊಬೈಲ್, ಕಂಪ್ಯೂಟರ್ ವ್ಯವಸ್ಥೆ ಮೂಲಕ ಖರೀದಿ ಹಣ ವರ್ಗಾಯಿಸುವುದು ಅಥವಾ ಖರೀದಿಗೆ ಬೇಡಿಕೆ ನೀಡುವುದು ಆಗಿರುತ್ತದೆ. ಗ್ರಾಹಕರಿಗೆ ಖರೀದಿಸಿದ ವಸ್ತುವಿನ ಗುಣಮಟ್ಟ, ಸೇವೆಯಲ್ಲಿ ನೂನ್ಯತೆ ಕಂಡು ಬಂದರೆ ಗ್ರಾಹಕರ ವೇದಿಕೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಎನ್.ಬಿ.ನಾಗರಾಜು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರಶಾಂತ್, ವಕೀಲರಾದ ಮಹಾಲಿಂಗಯ್ಯ, ಜಿ.ಎಸ್.ಚನ್ನಬಸಪ್ಪ, ಸಂದೀಪ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಗೀತಾ, ಸೇವಾ ಪ್ರತಿನಿಧಿ ಕಾಂತವೇಣಿ, ಒಕ್ಕೂಟದ ಅಧ್ಯಕ್ಷೆ ಸರೋಜ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
