ಚಿತ್ರದುರ್ಗ:
ವಿಜ್ಞಾನ-ತಂತ್ರಜ್ಞಾನ ವೇಗವಾಗಿ ಬೆಳೆದಂತೆ ಅಂಧಶ್ರದ್ದೆಯೂ ಅಷ್ಟೆ ವೇಗವಾಗಿ ಬೆಳೆಯುತ್ತಿರುವುದರಿಂದ ಸಮಾಜದಲ್ಲಿ ತಾಕಲಾಟ ಏರ್ಪಟ್ಟಿದೆ ಎಂದು ಚಿತ್ರದುರ್ಗ ವಿಜ್ಞಾನ ಕೇಂದ್ರದ ಸದಸ್ಯ ಜೆ.ಯಾದವರೆಡ್ಡಿ ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆ, ಯುವ ರೆಡ್‍ಕ್ರಾಸ್ ಘಟಕ ಹಾಗೂ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ ಸಮಿತಿಯಿಂದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಗುರುವಾರ ನಡೆದ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಕ್ಷರತೆ ಪ್ರಮಾಣ ಜಾಸ್ತಿಯಾಗಿದೆ. ಜೊತೆ ಜೊತೆಯಲ್ಲಿ ವೈಚಾರಿಕತೆ ಕಡಿಮೆಯಾಗುತ್ತಿರುವುದು ಅತ್ಯಂತ ನೋವಿನ ಸಂಗತಿ. ವಿದ್ಯಾವಂತರೆ ಮೂಡನಂಬಿಕೆಗಳಿಗೆ ಹೆಚ್ಚು ಮಾರು ಹೋಗುತ್ತಿದ್ದಾರೆ. ವೈಜ್ಞಾನಿಕವಾಗಿ ಮುಕ್ತ ಮನಸ್ಸನ್ನು ಹೊಂದಿದಾಗ ಮಾತ್ರ ಅಂಧಶ್ರದ್ದೆ, ಮೂಢನಂಬಿಕೆಯಿಂದ ಹೊರಬರಲು ಸಾಧ್ಯ. ವಿಶೇಷವಾಗಿ ವಿದ್ಯಾರ್ಥಿಗಳು ಯಾವುದನ್ನಾದರೂ ಪ್ರಶ್ನಿಸದೆ ಒಪ್ಪಿಕೊಳ್ಳಬಾರದು ಎಂದು ಕರೆ ನೀಡಿದರು.
ಪ್ರೊ.ಕೆ.ಕೆ.ಕಮಾನಿ ಮಾತನಾಡುತ್ತ ಸಮಾಜದಲ್ಲಿ ಎರಡು ರೀತಿಯ ಆಚರಣೆಗಳಿವೆ. ಒಂದು ಭಕ್ತಿಪೂರ್ವಕ ಆಚರಣೆ ಮತ್ತೊಂದು ಭಯಂಕರ ಆಚರಣೆ. ಹುಟ್ಟಿನಿಂದ ಹಿಡಿದು ಸಾಯುವತನಕ ಒಂದಲ್ಲ ಒಂದು ರೀತಿಯಲ್ಲಿ ಅಂಧಶ್ರದ್ದೆ ಆರಂಭವಾಗುತ್ತದೆ. ಮಾನಸಿಕ ರೋಗವೇ ನಿಜವಾದ ಜಾತಿಯತೆ ಎಂದರು.
ಆಚರಣೆಗಳೆಲ್ಲ ತಾರ್ಕಿಕತೆಯಿಂದ ಕೂಡಿದೆ. ಧಾರ್ಮಿಕ ಆಚರಣೆ, ಸಾಮಾಜಿಕ ನಡವಳಿಕೆ, ರಾಜಕೀಯ ಇಚ್ಚೆಗಳು ಸಮಾಜದಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಸ್ತುವಾಗಿ ಪಠ್ಯ ಕ್ರಿಯೆಗಳೊಂದಿಗೆ ವೈಜ್ಞಾನಿಕ ವಿಚಾರಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡಾಗ ಮಾತ್ರ ದೇಶ ಅಭಿವೃದ್ದಿಯಾಗಲು ಸಾಧ್ಯ. ಹೋಮ ಹವನಗಳಿಂದ ಯಾವುದೇ ಉಪಯೋಗವಿಲ್ಲ. ಅದಕ್ಕೆ ಬದಲಾಗಿ ಮನುಷ್ಯನಲ್ಲಿ ದೌರ್ಬಲ್ಯಗಳು ಹೆಚ್ಚಾಗುತ್ತಿರುವುದರಿಂದ ನಮ್ಮ ಭವಿಷ್ಯದಲ್ಲಿ ಬೇರೆಯವರು ನುಸುಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಆರ್.ದಾಸೇಗೌಡ ಮಾತನಾಡುತ್ತ ವಿದ್ಯಾರ್ಥಿಗಳು ಪ್ರಶ್ನಿಸುವ ಗುಣ ಬೆಳೆಸಿಕೊಂಡು ನಿರಂಕುಶಮತಿಗಳಾಗಬೇಕು. ಅಪ್ಪ, ಅಮ್ಮ, ಗುರುಗಳು, ಸ್ವಾಮೀಜಿಗಳು, ಜ್ಯೋತಿಷಿಗಳು, ರಾಜಕಾರಣಿಗಳು ಹೇಳಿದ್ದಾರೆಂದು ಅದನ್ನೇ ನಂಬಿ ಕೂರಬಾರದು. ವಿಜ್ಞಾನಕ್ಕೆ ಇರುವ ಲಕ್ಷಣ ಗೊತ್ತಿದ್ದರೆ ಮಾತ್ರ ವಿದ್ಯಾರ್ಥಿಗಳು ವಿಜ್ಞಾನವನ್ನು ಓದಬಹುದು. ವಿಜ್ಞಾನಕ್ಕೆ ಸಾರ್ವತ್ರಿಕ, ಪ್ರಯೋಗಶೀಲತೆ, ತರ್ಕ, ವಾದ, ಊಹೆ ಇರುತ್ತದೆ. ಇದರಿಂದಲೇ ಸಂಶೋಧನೆಗಳು ನಡೆಯುತ್ತಿರುವುದು ಎಂದು ಹೇಳಿದರು.
ದೇವಸ್ಥಾನಗಳು ಜಾಸ್ತಿಯಾಗಿರುವುದರಿಂದ ಅಂಧಶ್ರದ್ದೆ, ಅಜ್ಞಾನ ಬೆಳೆಯುತ್ತಿದೆ. ಮೂಢನಂಬಿಕೆ ತಾಂಡವವಾಡುತ್ತ ಕ್ರಿಯಾಶೀಲತೆ ಸತ್ತುಹೋಗಿದೆ. ದೇವಸ್ಥಾನಗಳಿಗಿಂತ ಶಾಲೆಗಳು ಹೆಚ್ಚಾಗಬೇಕು. ವೈಜ್ಞಾನಿಕ ಮನೋಭಾವ. ಸಾಕ್ಷರತೆ ಬೆಳೆಸಿಕೊಳ್ಳಿ. ಜ್ಯೋತಿಷಿಗಳು, ವಾಸ್ತುಗಳು ಆಕಾಶದಿಂದ ಇಳಿದು ಬಂದವರಂತೆ ಟಿ.ವಿ.ಗಳಲ್ಲಿ ಬರುತ್ತಾರೆ. ನಿಜವಾಗಿಯೂ ವಾಸ್ತು, ಜ್ಯೋತಿಷ್ಯಶಾಸ್ತ್ರ ಭೂಕೇಂದ್ರ ಸಿದ್ದಾಂತದ ಮೇಲೆ ನಿಂತಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ತತ್ವಸಿದ್ದಾಂತಗಳನ್ನು ಓದದೆ ಕೆಲವು ಸಚಿವರು ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಾ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ. ವಾಸ್ತುವನ್ನು ಮೊಟ್ಟ ಮೊದಲು ಬರೆದವರು ಋಷಿಮುನಿಗಳು ಎಂದು ನುಡಿದರು.ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸದಸ್ಯ ಎಂ.ಟಿ.ಶಂಕರಪ್ಪ, ಉಪನ್ಯಾಸಕ ರಮೇಶ್‍ಐನಳ್ಳಿ ವೇದಿಕೆಯಲ್ಲಿದ್ದರು. ಸರ್ಕಾರಿ ವಿಜ್ಞಾನ ಕಾಲೇಜು ಪ್ರಾಚಾರ್ಯರಾದ ಸಣ್ಣಮ್ಮ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ