ದಾವಣಗೆರೆ:
ಬಸವಾದಿ ಶರಣರ ತತ್ವಾದರ್ಶ-ವಿಚಾರಧಾರೆಗಳನ್ನು ಅರಿಯಲು ನಮಗೆ ವಚನಗಳೇ ಮೂಲ ಆಧಾರವಾಗಿವೆ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಪ್ರತಿಪಾದಿಸಿದರು.
ನಗರದ ಸೀತಮ್ಮ ಬಾಲಕಿಯರ ಕಾಲೇಜಿನಲ್ಲಿ ಗುರುವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‍ನ ಸಂಸ್ಥಾಪನಾ ದಿನದ ಪ್ರಯುಕ್ತ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ‘ವಚನ ದಿನ’ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ಮಾತನಾಡಿದರು.
ಜನ ಸಾಮಾನ್ಯರು ಆಡುವ ಭಾಷೆಯನ್ನು ದೇವಭಾಷೆಯನ್ನಾಗಿಸಿದ ಹಾಗೂ ವಚನಗಳ ಪರಿಕಲ್ಪನೆಯನ್ನು ತಂದ ಕೀರ್ತಿ ವಿಶ್ವಗುರು ಬಸವಣ್ಣನವರಿಗೆ ಸಲ್ಲಲಿದೆ. ಅನುಭವ ಮಂಟಪದಲ್ಲಿ ಶರಣರು ನುಡಿದ ಉತ್ತಮ ನುಡಿಗಳು ಹಾಗೂ ಅವರುಗಳ ತತ್ವ-ಆದರ್ಶ-ವಿಚಾರಧಾರೆಗಳನ್ನು ತಿಳಿದುಕೊಳ್ಳಲು ನಮಗೆ ಈ ವಚನಗಳೇ ಆಧಾರವಾಗಿವೆ. ಹೀಗಾಗಿ ನಾವುಗಳು ವಚನಗಳನ್ನು ಅಧ್ಯಯನ ಮಾಡಿ ಅವರುಗಳ ಸಾರವನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡು ಶರಣರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಬೇಕೆಂದು ಕಿವಿಮಾತು ಹೇಳಿದರು.
ಸರ್ವರಿಗೂ ಸಮಪಾಲು. ಸಮಬಾಳು ಕಲ್ಪಿಸಲಿಕ್ಕಾಗಿ ಹಾಗೂ ಸಮ ಸಮಾಜ ನಿರ್ಮಾಣಕ್ಕಾಗಿ ಬಸವಣ್ಣವರು 12ನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿ ಆರಂಭಿಸಿದ್ದರು. ಅಲ್ಲದೆ, ಮೂಢನಂಬಿಕೆ. ಅಂಧಶ್ರದ್ಧೆಗಳ ವಿರುದ್ಧ ಅಂದೇ ಶರಣರು ಅನೇಕ ವಚನಗಳನ್ನು ರಚಿಸುವ ಮೂಲಕ ವೈಚಾರಿಕ ತಳಹದಿಯ ಮೇಲೆ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು ಎಂದು ಹೇಳಿದರು.
ಎಲ್ಲರಿಗೂ ಸಮಾನತೆ ಸಿಗಬೇಕಾದರೆ ಹಾಗೂ ಮೂಢನಂಬಿಕೆ ತೊಲಗಬೇಕಾದರೆ, ನಾವು ಬಸವಾದಿ ಶರಣರ ಮಾರ್ಗದರ್ಶನದ ಮೇಲೆ ನಡೆಯಬೇಕಾಗಿದೆ. ಆದರೆ, ಇಂದಿನ ಯುವ ಸಮೂಹವು ಹಲವು ಕಾರಣಗಳಿಂದ ತಪ್ಪು ದಾರಿಯಲ್ಲಿ ಹೆಜ್ಜೆ ಇಡುತ್ತಿದೆ. ಹೀಗಾಗಿ ಇಂದಿನ ಯುವ ಪೀಳಿಗೆಯಲ್ಲಿ ಶರಣರ ತತ್ವಾದರ್ಶಗಳನ್ನು ಬೆಳೆಸುವ ಮೂಲಕ ಸರಿದಾರಿಗೆ ತರಬೇಕಾದ ಅವಶ್ಯಕತೆ ಇದೆ ಎಂದರು.
ವಚನಗಳು ನೈಜ ಜ್ಞಾನ ಸಂಪತ್ತು ಹೊಂದಿವೆ. ಅವುಗಳ ಸತತ ಅಧ್ಯಯನದಿಂದ ಅಜ್ಞಾನದ ಕತ್ತಲೆ ಕಳೆದು ಜ್ಞಾನದ ಜ್ಯೋತಿ ಬೆಳಗುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸಮೂಹ ವಚನಗಳನ್ನು ಓದಿ, ಅವುಗಳಿಂದ ಪ್ರೇರಿತರಾಗಿ ಉತ್ತಮ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ, ಜಗತ್ತಿನ 25 ಭಾಷೆಗಳಲ್ಲಿ ವಚನ ಸಾಹಿತ್ಯ ತರ್ಜುಮೆಗೊಂಡಿದೆ ಎಂದರೆ, ಈ ಸಾಹಿತ್ಯದಲ್ಲಿರುವ ಶಕ್ತಿಯ ಬಗ್ಗೆ ತಿಳಿಯಲಿದೆ. ವಚನ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ಸುತ್ತೂರಿನ ಲಿಂ.ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜನ್ಮದಿನದ ಅಂಗವಾಗಿ ರಾಜ್ಯಾದ್ಯಂತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಚನಗಳ ಬಗ್ಗೆ ಅರಿವು ಮೂಡಿಸಲು ವಚನದಿನ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾಲೇಜಿನ ಉಪಪ್ರಾಚಾರ್ಯ ಎ.ಆರ್.ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ, ಬಿಇಒ ಪುಷ್ಪಲತಾ, ಎಂಎಸ್‍ಬಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಅನಿತಾ ದೊಡ್ಡಗೌಡರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







