ತಿಪಟೂರು
ಬರಗಾಲದಲ್ಲಿ ಒಣಹುಲ್ಲು ತಿನ್ನದ ಹಸುಗಳಿಗೆ ಬುದ್ದಿವಂತನೊಬ್ಬನ ಉಪಾಯದಂತೆ ಹಸಿರು ಕನ್ನಡಕವನ್ನು ಹಾಕಿ ಹುಲ್ಲು ತಿನ್ನುವಂತೆ ಮಾಡಿದನು. ಅದೇ ಕೆಲಸವನ್ನು ಇಂದು ನಮ್ಮ ಶಾಸಕರು ತಿಪಟೂರು ಕೆರೆಯನ್ನು ತುಂಬಿಸಿ ಜನರ ಕಣ್ಣಿಗೆ ಮಂಕುಬೂದಿ ಎರಚಿ ಮೋಸಮಾಡುತ್ತಿದ್ದಾರೆಂದು ಜೆ.ಡಿ.ಎಸ್ ಮುಖಂಡರಾದ ಲೋಕೇಶ್ವರ್ ಗಂಭೀರವಾಗಿ ಆರೋಪಿಸಿದ್ದಾರೆ.
ನಗರದ ತಮ್ಮ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಾಸಕರ ಮತ್ತು ಸರ್ಕಾರದ ಅವೈಜ್ಞಾನಿಕ ತೀರ್ಮಾನ, ಸರಿಯಾದ ಯೋಜನೆಗಳಿಲ್ಲದೆ ಸರ್ಕಾರದಿಂದ ಬಂದಂತಹ ಸುಮಾರು 125 ಕೋಟಿಹಣವನ್ನು ಪೋಲು ಮಾಡಿರುವುದು ಸಿ.ಎ.ಜಿ. ವರದಿಯಿಂದ ತಿಳಿದು ಬಂದ ಸತ್ಯವಾಗಿದೆ. ಹಣದ ಸಮರ್ಪಕ ಬಳಕೆಯೂ ಆಗದೆ ರೈತರಿಗೆ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನಲ್ಲಿ ಅನ್ಯಾಯ ಮತ್ತು ಮೋಸ ಮಾಡಲಾಗಿದೆ. 1969 ರಲ್ಲಿ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಹೊನ್ನವಳ್ಳಿ ಏತ ನೀರಾವರಿ ಯೋಜನೆಯನ್ನು ಕುಡಿಯುವ ನೀರಿಗಾಗಿ ರೂಪಿಸಿ ಒಂಬತ್ತು ಕೆರೆಗಳನ್ನು ಸೇರಿಸಿ 19 ಲಕ್ಷ ವೆಚ್ಚದಲ್ಲಿ ರೂಪಗೊಂಡು, ನಂತರ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಈ ಯೋಜನೆಗೆ 87 ಕೋಟಿ ಅನುದಾನ ಮಂಜೂರು ಮಾಡಿಸಿ 9 ಕೆರೆಗಳ ಜೊತೆಗೆ ಹೊಸದಾಗಿ 13 ಕೆರೆಗಳನ್ನು ಸೇರಿಸಿದರು. ಆದರೆ ನೀರು ಎತ್ತುವ ಯಂತ್ರಗಳ ಸಾಮಥ್ರ್ಯವನ್ನು ಹೆಚ್ಚಿಸದೆ, ಎಲ್ಲಾ ಕೆರೆಗಳಿಗೂ ಒಂದೇ ನಾಲೆಯಿಂದ ನೀರು ತುಂಬಿಸುತ್ತೇನೆ. ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ರೈತರಿಗೆ ಮೋಸ ಮಾಡುತ್ತಾ ತಿರುಗಾಡುತ್ತಿದ್ದಾರೆ ಎಂದರು.
ನಮ್ಮ ತಾಲ್ಲೂಕಿನಲ್ಲಿಯೇ ಎತ್ತಿನಹೊಳೆ ಯೋಜನೆಯು 54 ಕಿಲೋ ಮೀಟರ್ ದೂರ ಹಾದು ಹೋಗಿದ್ದರೂ ನಮ್ಮ ತಾಲ್ಲೂಕಿನ ಯಾವುದೇ ಕೆರೆಗಳು ಸೇರ್ಪಡೆಯಾಗಿಲ್ಲ. ಕಳೆದ 10 ವರ್ಷಗಳಲ್ಲಿ ನಮ್ಮ ತಾಲ್ಲೂಕಿನ ಶಾಸಕರು ಎತ್ತಿನ ಹೊಳೆ ಯೋಜನೆಯ ಯಾವುದೇ ಸಭೆಗಳಿಗೆ ಹೋಗದೆ ಇರುವ ಕಾರಣವೇ ಎತ್ತಿನಹೊಳೆ ಯೋಜನೆಯಲ್ಲಿ ನಮ್ಮ ತಾಲ್ಲೂಕನ್ನೇ ಸೇರಿಸಿಲ್ಲ. ಇದು ತಾಲ್ಲೂಕಿನ ಜನತೆಗೆ ಶಾಸಕರುಗಳು ಮಾಡಿದ ಅನ್ಯಾಯವಾಗಿದೆ ಎಂದರು.
ಪಕ್ಕದ ಅರಸೀಕೆರೆ ತಾಲ್ಲೂಕಿನಲ್ಲಿ ಅರಸೀಕೆರೆ, ಕಾಮಸಮುದ್ರ, ಕಣಕಟ್ಟೆಗಳಿಗೆ ಅಲ್ಲಿನ ಶಾಸಕರು ಪ್ರತ್ಯೇಕ ಯೋಜನೆಗಳನ್ನು ರೂಪಿಸಿ ಕೆರೆಗಳಿಗೆ ನೀರು ತುಂಬಿಸುತ್ತಿದ್ದಾರೆ. ಆದರೆ ನಮ್ಮ ಶಾಸಕರು ನಮ್ಮ ಸರ್ಕಾರವಿಲ್ಲ ಎಂದು ಹಾಗೂ ಶಾಸಕರು ಯಾವುದೇ ಹೊಸಯೋಜನೆಗಳನ್ನು ಮಾಡಿಸಿಲ್ಲ. ಬೇರೆಯವರ ಕಾಲದಲ್ಲಿ ಆಗಿರುವ ಯೋಜನೆಗಳನ್ನು ನನ್ನ ಕಾಲದಲ್ಲಿ ಆಗಿದೆ ಎಂದು ಹೇಳುತ್ತಾ ಆಧುನಿಕ ಭಗೀರಥನಂತೆ ಓಡಾಡುತ್ತಿದ್ದಾರೆಂದು ಟೀಕಿಸಿದರು.
ಕೆರೆಗಳಿಗೆ ನೀರುಬಿಡುತ್ತೇವೆ ಎಂದು ಹೇಳಿ ನೀರುಬಿಡುತ್ತಾರೆ, ಇಲ್ಲಿ ಶಾಸಕರ ಸತ್ಯನಿಷ್ಠೆಯನ್ನು ನಾವು ಮೆಚ್ಚಲೇಬೇಕು. ಆದರೆ ಅವರು ಯಾವುದೇ ಕೆರೆಗಳನ್ನು ತುಂಬಿಸುತ್ತೇವೆಂದು ಎಲ್ಲಿಯೂ ಹೇಳಿಲ್ಲ ಅದರಂತೆ ನಡೆಯುತ್ತಿದ್ದಾರೆ. ಅದಕ್ಕೆ ಇದುವರೆಗೂ ಯಾವುದೇ ಕೆರೆಗಳನ್ನು ತುಂಬಿಸಿಲ್ಲ ಎಂದು ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಸೊಪ್ಪು ಗಣೇಶ್ ತಿಳಿಸುತ್ತಾ ಜೊತೆಗೆ ತಾಲ್ಲೂಕು ಕಚೇರಿಯಲ್ಲಿರುವ ಅಟಲ್ ಜೀ ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ದಿನಗಟ್ಟಲೆ ಕಾಯಬೇಕು. ಆದ್ದರಿಂದ ಮತ್ತೊಂದು ಅಟಲ್ ಜೀ ಕೇಂದ್ರವನ್ನು ತೆರೆಯಬೇಕು ಎಂದರು. ಬರ ಪರಿಹಾರದ ಫಸಲ್ ಬೀಮಾ ಯೋಜನೆ ಹಣ ಬರುವುದರಲ್ಲಿ ವಿಳಂಬವಾಗುತ್ತಿದ್ದು, ಶವ ಸಂಸ್ಕಾರದ ಹಣವು ತಲುಪುವುದರಲ್ಲಿ ತಡವಾಗುತ್ತಿದ್ದು ಇದರ ಬಗ್ಗೆ ಜಿಲ್ಲಾಡಳಿತ ಹೆಚ್ಚು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.