ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೇಮಕಗೊಳ್ಳಲಿರುವ ಶಿಕ್ಷಕರ ಅರ್ಹತೆ ಮತ್ತು ಹಿನ್ನೆಲೆ ಪರಿಶೀಲನೆ ನಡೆಸಲು ವಿಶೇಷ ಆಯುಕ್ತರಾದ (ಶಿಕ್ಷಣ) ಐಎಎಸ್ ಅಧಿಕಾರಿ ಪ್ರೀತಿ ಗೆಹ್ಲೋಟ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟಾರೆ ಶೇ 83.89ರಷ್ಟು ಮಂದಿ ಉತ್ತೀರ್ಣರಾಗಿದ್ದರೆ, ಬಿಬಿಎಂಪಿ ಶಾಲೆಗಳಲ್ಲಿ ಶೇ 67.53 ರಷ್ಟು ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಈ ಶಾಲೆಗಳು ಐತಿಹಾಸಿಕವಾಗಿ ಬೋರ್ಡ್ ಪರೀಕ್ಷೆಗಳಲ್ಲಿ ಕಡಿಮೆ ಶೇಕಡಾವಾರು ಉತ್ತೀರ್ಣವನ್ನು ಹೊಂದಿವೆ. ಕೆಲವೊಮ್ಮೆ ಶೇ 50ಕ್ಕಿಂತ ಕಡಿಮೆ ಫಲಿತಾಂಶ ಪಡೆದಿವೆ. ಅಲ್ಲದೆ, ಈ ಶಾಲೆಗಳೂ ಶಿಕ್ಷಕರ ಕೊರತೆಯಿಂದ ಬಳಲುತ್ತಿವೆ.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 142 ಶಾಲೆಗಳಿವೆ. ಅವುಗಳು ಮೂಲಸೌಕರ್ಯ ಮತ್ತು ಸಲಕರಣೆಗಳ ಕೊರತೆಯ ಸಾಮಾನ್ಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಆದರೆ, ಅರ್ಹ ಶಿಕ್ಷಕರ ಕೊರತೆಯು ಒಂದು ಪ್ರಮುಖ ವಿಚಾರವಾಗಿದೆ. ‘ನಾವು ವೃತ್ತಿಪರ ಮತ್ತು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಲು ಸಮರ್ಥರಾಗಿರುವ ಅರ್ಹ ಶಿಕ್ಷಕರನ್ನು ಕೇಳುತ್ತಿದ್ದೇವೆ’ ಎಂದು ಗಿರಿನಾಥ್ ಹೇಳಿದರು.