ಶಿಕ್ಷಕ ಪ್ರಶಸ್ತಿ ಶಿಕ್ಷಕ ಹುದ್ದೆಯ ಗೌರವ ಘನತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಚಳ್ಳಕೆರೆ

            ವಿದ್ಯಾರ್ಥಿಗಳ ಭವಿಷ್ಯದ ಬದುಕನ್ನು ರೂಪಿಸುವ ಶಿಕ್ಷಕನ ಮೇಲೆ ಅತಿಹೆಚ್ಚು ಜವಾಬ್ದಾರಿ ಇದೆ. ಗುಣಾತ್ಮಕ ಶಿಕ್ಷಣ ನೀಡುವ ಜೊತೆಗೆ ವಿದ್ಯಾರ್ಥಿಗಳ ಮನೋಭಾವನೆಯನ್ನು ಅರಿತು ಅವರಿಗೆ ಶಿಕ್ಷಣ ನೀಡಬೇಕಿದೆ. ಶಿಕ್ಷಣದ ಆಳವನ್ನು ಅಭ್ಯಾಸ ಮಾಡಿ ವಿದ್ಯಾರ್ಥಿಗಳಿಗೆ ಬೋಧಿಸಬೇಕಿದೆ. ಶಿಕ್ಷಕರು ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಶ್ರಮಿಸಬೇಕಿದೆ ಎಂದು ಬಿ.ಎಂ.ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಸಂಪತ್‍ಕುಮಾರ್ ತಿಳಿಸಿದರು.
            ಅವರು, ಶನಿವಾರ ತಳಕು ಹೋಬಳಿಯ ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಅಭಿನಂದಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಣ ಇಲಾಖೆಯಲ್ಲಿ ಬಹುತೇಕ ಎಲ್ಲಾ ಶಿಕ್ಷಕರೂ ಸಹ ಉತ್ತಮ ಶಿಕ್ಷಣ ನೀಡುವಲ್ಲಿ ಸದಾ ಜಾಗೃತರಾಗಿದ್ಧಾರೆ. ಆದರೆ, ಇಲಾಖೆ ನಿಯಮದಡಿ ಕೆಲವು ಶಿಕ್ಷಕರಿಗೆ ಮಾತ್ರ ಉತ್ತಮ ಶಿಕ್ಷಕ ಪ್ರಶಸ್ತಿ ನೀಡುತ್ತಿದ್ದು, ಪ್ರಶಸ್ತಿ ಪಡೆದ ಶಿಕ್ಷಕರಷ್ಟೇ ಇರುವ ಎಲ್ಲಾ ಗೌರವ ವಿಶ್ವಾಸ ಬೇರೆ ಶಿಕ್ಷಕರ ಮೇಲೂ ಸಹ ಸದಾ ಇರುತ್ತದೆ ಎಂದರು.
           ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ನಿರ್ದೇಶಕ ಸಿ.ಟಿ.ವೀರೇಶ್ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆಯುವ ಮೂಲಕ, ಪ್ರಶಸ್ತಿ ಪಡೆದ ಎಲ್ಲಾ ಶಿಕ್ಷಕರು ತಾಲ್ಲೂಕಿಗೆ ವಿಶೇಷ ಗೌರವವನ್ನು ತಂದುಕೊಟ್ಟಿದ್ಧಾರೆ. ಪ್ರತಿವರ್ಷವೂ ಸಹ ಇಂತಹ ಪ್ರಶಸ್ತಿ ಪಡೆಯುವ ಶಿಕ್ಷಕರ ಸಂಖ್ಯೆ ಮತ್ತಷ್ಟು ಹೆಚ್ಚಬೇಕಿದೆ ಎಂದರು.
           ಇದೇ ಸಂದರ್ಭದಲ್ಲಿ ಪ್ರೌಢಶಾಲಾ ಶಿಕ್ಷಕರಾದ ಕೆ.ಎ.ಮೂರ್ತಿತಪ್ಪ, ಟಿ.ಡಿ.ಬಸವರಾಜು, ಸಿ.ತಿಪ್ಪೇಸ್ವಾಮಿ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಶಿಕ್ಷಕ ಕೆ.ಎ.ಮೂರ್ತಪ್ಪ, ಈ ಪ್ರಶಸ್ತಿ ಕೇವಲ ನನಗಷ್ಟೇ ಸೀಮಿತವಲ್ಲ ಇದು ಎಲ್ಲ ಶಿಕ್ಷಕರಿಗೂ ಸಂದ ಗೌರವವಾಗಿದೆ. ಪ್ರತಿಯೊಬ್ಬ ಶಿಕ್ಷಕನೂ ಸಹ ಸಮಾಜದ ಹಿತದೃಷ್ಠಿಯಿಂದ ಶಿಕ್ಷಣವನ್ನು ಸವಾಲಾಗಿ ಸ್ವೀಕರಿಸಿ ವಿದ್ಯಾರ್ಥಿಗಳ ಬೌದ್ಧಿಕ ಶಕ್ತಿಯನ್ನು ಹೆಚ್ಚಿಸಲು ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅನುದಾನ ರಹಿತ ಶಾಲೆಗಳ ಶಿಕ್ಷಕರ ಸಂಘದ ಅಧ್ಯಕ್ಷ ಸೂರನಾಯಕ, ಪಿ.ಮಹಂತೇಶ್, ಮುಖ್ಯ ಶಿಕ್ಷಕ ಟಿ.ಎಲ್.ವಿಜಯ್, ಪ್ರಮೀಳಮ್ಮ, ಕೆ.ಎಸ್.ಶ್ರೀಕಾಂತ್, ಎ.ಮಂಜಮ್ಮ, ಚಿಟ್ಟಿಬಾಬು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Recent Articles

spot_img

Related Stories

Share via
Copy link