ಶಿರಾ : ನಾಯಕತ್ವದ ಕೊರತೆ ನೀಗಿಸಲು JDS ಕಾರ್ಯಕರ್ತರ ಒತ್ತಡ

ಶಿರಾ : 

      ಶಾಸಕರಾಗಿದ್ದ ಬಿ.ಸತ್ಯನಾರಾಯಣ್ ಅವರ ನಿಧನದ ನಂತರ ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರಿಗೆ ಓರ್ವ ಸಮರ್ಥ ನಾಯಕನೇ ಇಲ್ಲದಂತಾಗಿದ್ದು ಈ ಕೂಡಲೇ ಪಕ್ಷಕ್ಕೆ ಸಮರ್ಥ ನಾಯಕರೊಬ್ಬರನ್ನು ಸೂಚಿಸುವಂತೆ ಜೆ.ಡಿ.ಎಸ್. ಪಕ್ಷದ ಕಾರ್ಯಕರ್ತರು ವರಿಷ್ಠರಿಗೆ ಒತ್ತಡ ಹೇರಿದ ಪ್ರಸಂಗ ನಡೆಯಿತು.

      ಶಿರಾ ನಗರದ ಶ್ರೀರಾಮ ಸಮುದಾಯ ಭವನದಲ್ಲಿ ಗ್ರಾ.ಪಂ. ಚುನಾವಣೆಯ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಜೆ.ಡಿ.ಎಸ್. ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಕಾರ್ಯಕರ್ತರು ತಮ್ಮ ಅಳನನ್ನು ತೋಡಿಕೊಂಡರು.

      ಕಾರ್ಯಕರ್ತರ ಸಭೆಯು ಆರಂಭಗೊಳ್ಳುತ್ತಿದ್ದಂತೆಯೇ ವೇದಿಕೆಯ ಮುಖಂಡರು ಮಾತನಾಡುವ ಮುನ್ನವೇ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ತಿಳಿಸಲು ಅವಕಾಶ ನೀಡಿದಾಗ ಕಾರ್ಯಕರ್ತರಾದ ತಾರಾನಾಥ್, ಈರಣ್ಣ, ತಿಮ್ಮರಾಜು, ವೀರೇಂದ್ರ, ಕೃಷ್ಣೇಗೌಡ, ಪಟೇಲ್ ಕೃಷ್ಣೇಗೌಡ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಬರುವ ಸ್ಥಳೀಯ ಚುನಾವಣೆಗಳನ್ನು ಎದುರಿಸಲು ಸಮರ್ಥ ನಾಯಕತ್ವದ ಕೊರತೆ ಇರುವ ಬಗ್ಗೆ ಅಳನ್ನು ತೋಡಿಕೊಂಡರು.

      ಕ್ಷೇತ್ರದ ಗ್ರಾಮಾಂತರ ಪ್ರದೇಶದಲ್ಲಿ ಈಗಲೂ ನಿಷ್ಠಾವಂತ ಜೆ.ಡಿ.ಎಸ್. ಕಾರ್ಯಕರ್ತರಿದ್ದು ಹಲವು ಕಾರಣದಿಂದ ಕೆಲ ಮುಖಂಡರು ಪಕ್ಷ ಬಿಟ್ಟರೂ ಕಾರ್ಯಕರ್ತರ್ಯಾರೂ ಕೂಡಾ ಪಕ್ಷ ಬಿಟ್ಟಿಲ್ಲ. ನಮ್ಮಲ್ಲಿ ಇನ್ನೂ ಪಕ್ಷದ ನಿಷ್ಠೆಯ ಶಕ್ತಿ ಇದ್ದು ನಮಗೆ ಸಮರ್ಥ ನಾಯಕನೇ ಇಲ್ಲದಂತಾಗಿದೆ ಎಂದು ಮುಖಂಡರಲ್ಲಿ ಒತ್ತಡ ಹೇರಿದರು.

ಭ್ರಷ್ಟಾಚಾರದ ಹಣ ಮುಟ್ಟದೇ ಚುನಾವಣೆ ಎದುರಿಸಿದ್ದೀರಿ : ತಿಪ್ಪೇಸ್ವಾಮಿ

      ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಮಾತನಾಡಿ ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ನಿಷ್ಠಾವಂತರಿದ್ದಾರೆ. ವಿರೋಧ ಪಕ್ಷಗಳು ಉಪ ಚುನಾವಣೆಯಲ್ಲಿ ನೀಡಿದ ಭ್ರಷ್ಟಾಚಾರದ ಹಣವನ್ನು ಮುಟ್ಟದೆ ಚುನಾವಣೆ ಮಾಡಿದ್ದಾರೆ. ಸಮರ್ಥ ನಾಯಕತ್ವದ ಬಗ್ಗೆ ವರಿಷ್ಠರಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದ ಅವರು ಮಾಜಿ ಮುಖಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಹೆಚ್.ಡಿ.ರೇವಣ್ಣ ಅವರಿಗೆ ಈ ಕ್ಷೇತ್ರದ ಕಾರ್ಯಕರ್ತರಲ್ಲಿನ ಹುಮ್ಮಸ್ಸಿನ ಅರಿವಿದೆ ಎಂದರು.

     ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿರಬಹುದು ಆದರೆ ಈವರೆಗೂ ಸಂಘಟನೆಯ ಹಿನ್ನಡೆಯಾಗಿಲ್ಲ. ನಿಮ್ಮೆಲ್ಲರ ಸಮಸ್ಯೆಗಳಿಗೆ ಸ್ಪಂಧಿಸಲು ನಿಮ್ಮೊಂದಿಗೆ ನಾನು ಹಾಗೂ ನಮ್ಮ ಪಕ್ಷದ ಮುಖಂಡರಿದ್ದೇವೆಂದು ಭರವಸೆ ನೀಡಿದರು.

      ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಆರ್.ಸಿ.ಆಂಜಿನಪ್ಪ ಮಾತನಾಡಿ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪಡೆದ ಮತಗಳು ಕಡಿಮೆಯೇನಲ್ಲ. ವಿರೋಧ ಪಕ್ಷಗಳು ಹಠದಿಂದ ಗೆಲುವು ಸಾಧಿಸಲು ನಡೆಸಿದ ಭ್ರಷ್ಠಾಚಾರದ ತಂತ್ರಗಳ ನಡುವೆ ನಮ್ಮ ಅಭ್ಯರ್ಥಿಗೆ ಹಿನ್ನಡೆಯಾಗಿದ್ದು ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ನಿಜಕ್ಕೂ ಕಡಿಮೆಯಾಗಿಲ್ಲ. ಎಲ್ಲರೂ ಒಗ್ಗೂಡಿ ಗ್ರಾ.ಪಂ. ಚುನಾವಣೆಯಲ್ಲಿ ಜೆ.ಡಿ.ಎಸ್. ಕಾರ್ಯಕರ್ತರ ಗೆಲುವಿಗೆ ಶ್ರಮಿಸಬೇಕು ಎಂದರು.

      ತಾ. ಜೆ.ಡಿ.ಎಸ್. ಅಧ್ಯಕ್ಷ ಆರ್.ಉಗ್ರೇಶ್ ಮಾತನಾಡಿ ಪಕ್ಷದಲ್ಲಿ ಈಗ ನಾಯಕತ್ವದ ಕೊರತೆ ಇದೆ ನಿಜ. ಈ ಕೊರತೆಯನ್ನು ವರಿಷ್ಠರು ನೀಗಿಸಲೇಬೇಕಿದೆ. ಪಕ್ಷ ಸಂಘಟನೆಗಾಗಿ ಎಲ್ಲರೂ ಕೈಜೋಡಿಸಬೇಕಿದೆ. ಗ್ರಾ.ಪಂ. ಚುನಾವಣೆಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ಪ್ರಯತ್ನ ಎಲ್ಲರದ್ದಾಗಬೇಕು ಎಂದರು.

      ಜಿ.ಪಂ. ಮಾಜಿ ಸದಸ್ಯ ಸಿ.ಆರ್.ಉಮೇಶ್ ಮಾತನಾಡಿ ಕಾರ್ಯಕರ್ತರು ಎದೆಗುಂದುವ ಅಗತ್ಯವಿಲ್ಲ. ನಿಮ್ಮೊಡನೆ ಯಾವುದೇ ಸಮಸ್ಯೆಗಳಿಗೆ ಸ್ಪಂಧಿಸಲು ನಾವೆಲ್ಲರೂ ಇದ್ದೇವೆ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

      ನಗರಸಭೆಯ ಮಾಜಿ ಅಧ್ಯಕ್ಷರಾದ ಆಂಜನಪ್ಪ, ಆರ್.ರಾಮು, ಆರ್.ರಾಘವೇಂದ್ರ, ಟಿ.ಡಿ.ಮಲ್ಲೇಶ್, ಅರೇಹಳ್ಳಿ ಬಾಬು, ಲಿಂಗದಹಳ್ಳಿ ಚೇತನ್‍ಕುಮಾರ್, ರವಿಶಂಕರ್, ಡಿ.ಎನ್.ಪರಮೇಶ್‍ಗೌಡ, ಹೊನ್ನೇನಹಳ್ಳಿ ನಾಗರಾಜು, ಎ.ನಾಗರಾಜು, ಸೋಮಶೇಖರ್ ಸೇರಿದಂತೆ ಅನೇಕ ಪ್ರಮುಖರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link