ಸರ್ಕಾರಿ ಶಾಲೆಗಳ ಸಬಲೀಕರಣದ ಕನಸು ಹೊತ್ತಿರುವ ಶಿಕ್ಷಣ ತಜ್ಞ – ವಿ.ಪ. ಸದಸ್ಯ ಚಿದಾನಂದ್ ಎಂ.ಗೌಡ
-ಬರಗೂರು ವಿರೂಪಾಕ್ಷ
ಶಿರಾ:
ಸರ್ಕಾರಿ ಶಾಲೆಗಳೆಂದರೆ ಸಾಕು ಅನೇಕ ಮಂದಿ ಸ್ಥಿತಿವಂತರಿಗೆ ಮೂಗು ಮುರಿಯುವಂತಹ ಕಾಲವಿದು. ಒಂದು ಬೃಹತ್ ಪ್ರಮಾಣದ ಖಾಸಗಿ ಶಾಲೆಯನ್ನು ಹೊಂದಿ ಸಾವಿರಾರು ಮಕ್ಕಳಿಗೆ ಖಾಸಗಿ ಶಾಲೆಯ ಶಿಕ್ಷಣ ನೀಡುತ್ತಿರುವ ವ್ಯಕ್ತಿಯೊಬ್ಬರು ಕೋಟ್ಯಂತರ ರೂ.ಗಳ ವೆಚ್ಚದಲ್ಲಿ ಸರ್ಕಾರಿ ಶಾಲೆಯೊಂದರ ಅಭಿವೃದ್ಧಿಗೆ ಮುಂದಾಗುವುದು ನಿಜಕ್ಕೂ ಅಚ್ಚರಿಯೆ ಸರಿ.
ಶಿರಾ ನಗರದ ಉನ್ನತ ಖಾಸಗಿ ಶಿಕ್ಷಣ ಸಂಸ್ಥೆಯಾದ ಪ್ರೆಸಿಡೆನ್ಸಿ ಶಾಲಾ ಸಂಸ್ಥಾಪಕ ಅಧ್ಯಕ್ಷ ಚಿದಾನಂದ್ ಎಂ.ಗೌಡ ತಮ್ಮ ಖಾಸಗಿ ಶಿಕ್ಷಣ ಸಂಸ್ಥೆಗೂ ಭಿನ್ನವಾದ ಸರ್ಕಾರಿ ಶಾಲೆಯೊಂದರ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದಾರೆ. ವಿಧಾನ ಪರಿಷತ್ ಸದಸ್ಯರೂ ಆದ ಅವರು ತಮ್ಮ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನ ಒಂದು ಕೋಟಿ ರೂ.ಗಳೊಟ್ಟಿಗೆ ಸುಮಾರು ೫ ಕೋಟಿ ರೂ. ವೆಚ್ಚದ ಶಿರಾ ನಗರದ ಸರ್ಕಾರಿ ಬಾಲಕರ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಹೈಟೆಕ್ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಿದ್ದು ಕಟ್ಟಡ ಕಾಮಗಾರಿಯೂ ಪೂರ್ಣಗೊಂಡಿದೆ.
ಸುಮಾರು 75 ವರ್ಷಗಳ ಹಿಂದೆ ಸ್ವಾತಂತ್ರ ಪೂರ್ವದಲ್ಲಿ ನಿರ್ಮಾಣಗೊಂಡ ಸರ್ಕಾರಿ ಪ್ರೌಢಶಾಲಾ ಕಟ್ಟಡವು ಕುಸಿದು ಬೀಳಲಿದೆ ಎಂಬ ಸುದ್ದಿಯು ಅಕ್ಟೋಬರ್ 5, 2021 ರಂದು ಪ್ರಜಾಪ್ರಗತಿಯಲ್ಲಿ ಪ್ರಕಟಗೊಂಡಿತ್ತು. ಸುದ್ದಿ ಬಂದ ಮಾರನೆ ದಿನವೆ ಶಾಲೆಗೆ ಭೇಟಿ ನೀಡಿದ ವಿ.ಪ. ಶಾಸಕ ಚಿದಾನಂದ್ ಎಂ.ಗೌಡ, ಸದರಿ ಶಾಲೆಯ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳುವ ಭರವಸೆಯನ್ನು ನೀಡಿದ್ದರು. ಸಾಕಷ್ಟು ಅನುದಾನ ಲಭ್ಯವಾಗದಿದ್ದರೆ ತಮ್ಮ ಜೇಬಿನಿಂದಲೇ ಹಣ ವ್ಯಯಿಸುವುದಾಗಿ ಹೇಳಿದ್ದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರವೆ ಕೋಟ್ಯಂತರ ರೂ.ಗಳನ್ನು ವ್ಯಯಿಸುವುದು ಕಷ್ಟವಿರುವ ಈ ಕಾಲದಲ್ಲಿ ೫ ಕೋಟಿ ರೂ.ಗಳ ವೆಚ್ಚದ ಸರ್ಕಾರಿ ಶಾಲೆಯೊಂದು ಹೈಟೆಕ್ ರೀತಿಯಲ್ಲಿ ಅಭಿವೃದ್ಧಿಗೊಂಡಿರುವುದು ರಾಜ್ಯದಲ್ಲಿಯೇ ಮೊದಲು ಎನ್ನಲಾಗುತ್ತಿದೆ. ಇಂತಹ ಮಹತ್ವದ ಕೆಲಸವೊಂದನ್ನು ವಿ.ಪ. ಸದಸ್ಯ ಚಿದಾನಂದ್ ಎಂ.ಗೌಡ ಮಾಡಿದ್ದಾರೆ.
ಈಗಾಗಲೇ ತಳ ಹಂತಸ್ತಿನ ಸುಮಾರು 10 ಶಾಲಾ ಕೊಠಡಿಗಳ ನಿರ್ಮಾಣ ಸಂಪೂರ್ಣಗೊಂಡಿದ್ದು, ಎಲ್ಲಾ ಕೊಠಡಿಗಳನ್ನು ಅವರ ಸ್ವಂತ ಖಾಸಗಿ ಶಾಲೆ ಪ್ರೆಸಿಡೆನ್ಸಿ ಶಾಲೆಗಿಂತಲೂ ಅತ್ಯುನ್ನತ ಗುಣಮಟ್ಟದಲ್ಲೆ ನಿರ್ಮಾಣ ಮಾಡಲಾಗಿದೆ. ಇದೇ ಕಟ್ಟಡದ ಮೇಲು ಹಂತಸ್ತಿನಲ್ಲಿ ಹೈಟೆಕ್ ಗ್ರಂಥಾಲಯ, ವಿದ್ಯಾರ್ಥಿನಿಯರ ವಿಶ್ರಾಂತಿ ಗೃಹ, ವಿದ್ಯಾರ್ಥಿನಿಯರಿಗಾಗಿಯೇ ಪ್ರತ್ಯೇಕ ಶೌಚಾಲಯ, ಸುಸಜ್ಜಿತ ಪ್ರಯೋಗಾಲಯದ ಕೊಠಡಿಗಳ ನಿರ್ಮಾಣವೂ ಆಗಲಿದೆ.
ಸದರಿ ಶಾಲೆಯ ಕಟ್ಟಡದಲ್ಲಿ ಮುಂಬರುವ ವರ್ಷದಿಂದ 1500 ಮಂದಿ ವಿದ್ಯಾರ್ಥಿಗಳು ಅಭ್ಯಾಸ ಮಾಡಬಹುದಾಗಿದ್ದು, ಸದರಿ ಶಾಲೆಗೆ ಮಕ್ಕಳನ್ನು ದಾಖಲಿಸುವಂತೆ ಚಿದಾನಂದ್ ಅವರೇ ಖುದ್ದು ಮನೆ ಮನೆಗಳಿಗೆ ಭೇಟಿ ನೀಡಿ ದಾಖಲಾತಿ ಆಂದೋಲನ ಆರಂಭಿಸಲಿದ್ದಾರೆ. ಈ ಶಾಲೆಯಲ್ಲಿ ಶಿಕ್ಷಕರ ಕೊರತೆ ಕಂಡು ಬಂದಲ್ಲಿ ಅದರ ಹೊಣೆಯನ್ನೂ ತಾವೆ ಹೊರುವುದಾಗಿ ಭರವಸೆ ನೀಡಿದ್ದಾರೆ. ತನ್ನ ಸ್ವಂತ ಖಾಸಗಿ ಶಾಲೆಯಾದ ಪ್ರೆಸಿಡೆನ್ಸಿಯಂತೆಯೇ ಮುಂದೆ ನಿಂತು ಈ ಸರ್ಕಾರಿ ಶಾಲೆ ಮುನ್ನಡೆಸುವ ಸಂಪೂರ್ಣ ಹೊಣೆಯನ್ನು ಚಿದಾನಂದ್ ಹೊತ್ತಿದ್ದಾರೆ.
ಇಂತಹ ಭವ್ಯವಾದ ನೂತನ ಸರ್ಕಾರಿ ಶಾಲಾ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮವು ಶಿರಾ ನಗರದಲ್ಲಿ ಇಂದು ನಡೆಯಲಿದೆ. ಸರ್ಕಾರಿ ಕಾರ್ಯಕ್ರಮವೂ ಆಗಿರುವ ಈ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವರು, ಗೃಹ ಸಚಿವರು ಸೇರಿದಂತೆ ಸರ್ಕಾರದ ವಿವಿಧ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಅಪ್ಪಟ ಗ್ರಾಮೀಣ ಪ್ರತಿಭೆ ಹಾಗೂ ಹಳ್ಳಿಗಾಡಿನ ಜನರ ಸಂಕಷ್ಟದ ನಡುವೆ ಬೆಳೆದು ಬಂದ ಹಾಲಿ ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಅವರ ಬದುಕಿನ ಜಟಕಾ ಬಂಡಿ ನಿಜಕ್ಕೂ ಒಂದು ದುರ್ಗಮ ಹಾದಿಯೇ ಸರಿ.ಬರಗೂರು ಗ್ರಾಮದಂತಹ ಬರದ ಬೀಡಿನ ಕುಗ್ರಾಮದಲ್ಲಿ ಹೆತ್ತವರ ಮಾಗದರ್ಶನ ಹಾಗೂ ಗೋಪಿಕುಂಟೆಯ ಶಿಕ್ಷಕ ದಿ.ಈರಣ್ಣ ಮಾಸ್ತರರ ನೆರವಿನಲ್ಲಿ ಓದಿದ ಚಿದಾನಂದ್ ಎಂ ಗೌಡ ಆರಂಭದಿಂದಲೂ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮದೇ ಆದ ಒಂದಿಷ್ಟು ಗುರಿಯನ್ನಿಟ್ಟುಕೊಂಡು ಬಂದವರು.
ಶೈಕ್ಷಣಿಕವಾಗಿ ದುಡಿಮೆ ಮಾಡಬೇಕೆಂದು ಹೊರಟಿದ್ದರೆ ಚಿದಾನಂದ್ ಬೆಂಗಳೂರಿನಲ್ಲಿಯೇ ಒಂದು ಹೈಟೆಕ್ ಖಾಸಗಿ ಶಾಲೆ ಮಾಡಿ ಶಿಕ್ಷಣದ ಹೆಸರಲ್ಲಿಯೇ ಸಾಕಷ್ಟು ಹಣ ಗಳಿಕೆ ಮಾಡಬಹುದಿತ್ತು. ಹಿಂದುಳಿದಿದ್ದ ಶಿರಾ ಕ್ಷೇತ್ರದಲ್ಲಿ ಪ್ರೆಸಿಡೆನ್ಸಿ ಅನ್ನುವ ಸಣ್ಣದಾಗಿಯೇ ಶಾಲೆ ಆರಂಭಿಸಿದ ಚಿದಾನಂದ್ ಈ ತಮ್ಮ ಖಾಸಗಿ ಶಾಲೆಯನ್ನು ಹೆಮ್ಮರವಾಗಿ ಬೆಳೆಸುವಲ್ಲಿ ಸಫಲರಾಗಿದ್ದಾರೆ.ಶಾಲೆ ಆರಂಭಗೊAಡಾಗ ಶಾಲಾ ಶುಲ್ಕ ಜಾಸ್ತಿಯಾದ ಬಗ್ಗೆ ಅನೇಕ ಮಂದಿ ಮೂಗು ಮುರಿಯುತ್ತಿದ್ದರೂ, ಗಮನವೀಯದೆ ಸದೃಢವಾದ ಗುಣಮಟ್ಟದ ಶಾಲೆ ಕಟ್ಟುವಲ್ಲಿ ಚಿದಾನಂದ್ ಯಶ ಕಂಡರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿಯೇ ಗುಣಮಟ್ಟದ ಶಿಕ್ಷಣ ನೀಡುವುದೊಂದೇ ಅವರ ಗುರಿಯಾಗಿತ್ತು.
ಇದೀಗ ನೂರಾರು ಮಂದಿ ಶಿಕ್ಷಕರು, ಉಪನ್ಯಾಸಕರು ಹಾಗೂ ಸಾವಿರಾರು ಮಂದಿ ಬೋಧಕ, ಬೋಧಕೇತರ ಕುಟುಂಬಗಳು ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಯಿಂದ ತಮ್ಮ ಜೀವನವನ್ನು ಕಟ್ಟಿಕೊಂಡಿವೆ. ಅನೇಕ ಮಂದಿಗೆ ಈ ಶಾಲೆಯಲ್ಲಿ ಉದ್ಯೋಗವೂ ಲಭ್ಯವಾದಂತಾಗಿದೆ.
ಪ್ರೆಸಿಡೆನ್ಸಿ ಶಾಲೆಯು ಆರಂಭಗೊAಡಿದ್ದೆ ತಡ ಇಡೀ ನಗರ ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯವಾಯಿತು. ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕಾಗಿ ಪೋಷಕರು ಶಿರಾ ನಗರದಲ್ಲಿಯೇ ನೆಲೆಯೂರಲು ಕೂಡ ಈ ಸಂಸ್ಥೆ ಕಾರಣವೂ ಆಯಿತು.
ಸದರಿ ಶಾಲೆಯು ಗುಣಮಟ್ಟದ ಶಿಕ್ಷಣ ನೀಡುತ್ತಾ ಮುನ್ನಡೆದಂತೆ ಹಂತ ಹಂತವಾಗಿ ಶಿರಾ ನಗರದ ಅಭಿವೃದ್ಧಿಯೂ ಮುನ್ನಡೆಯುತ್ತಲೇ ಹೋಯಿತು. ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಾಗಿ ಸದರಿ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರು ಕೂಡ ದುಂಬಾಲು ಬಿದ್ದರು.
ನಗರದ ಎಲ್ಲಾ ಶಾಲೆಗಳಿಗಿಂತಲೂ ಶಾಲಾ ಶುಲ್ಕ ಇಲ್ಲಿ ಜಾಸ್ತಿ ಎಂಬ ಮಾತುಗಳು ಪೋಷಕರಲ್ಲಿ, ಸಾರ್ವಜನಿಕರಲ್ಲಿ ಹರಿದಾಡಿದವಾದರೂ ಗುಣ ಮಟ್ಟದ ಶಿಕ್ಷಣವನ್ನೇ ಗುರಿ ಮಾಡಿಕೊಂಡಿದ್ದ ಚಿದಾನಂದ್ ತಮ್ಮದೇ ಆದ ಸಾರ್ವಜಿನಿಕ ಸೇವೆಯೊಟ್ಟಿಗೆ ಇತಿ-ಮಿತಿಯಲ್ಲಿ ಸಂಸ್ಥೆಯನ್ನು ಮುನ್ನಡೆಸುತ್ತಲೇ ಬಂದಿದ್ದರು.
ತಮ್ಮ ಖಾಸಗಿ ಶಿಕ್ಷಣ ಸಂಸ್ಥೆಯ ಮೇಲೆ ನಿಗಾ ಇಡುವುದರ ಜೊತೆಗೆ ಸಾರ್ವಜನಿಕ ಸೇವೆಯಲ್ಲೂ ಮುಂದಾಗತೊಡಗಿದ್ದ ಅವರು 2005ರಲ್ಲಿ ಹುಲಿಕುಂಟೆ ಹೋಬಳಿಯ ಪ್ರತಿ ಗ್ರಾಮದ ಸರ್ಕಾರಿ ಶಾಲೆಯಿಂದ ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿಯಂತೆ ಒಟ್ಟು 20 ಮಂದಿ ವಿದ್ಯಾರ್ಥಿಗಳನ್ನು ದತ್ತು ಪಡೆದು ೬ ನೆ ತರಗತಿಯಿಂದ ಪಿ.ಯು.ಸಿ.ವರೆಗೂ ಪ್ರೆಸಿಡೆನ್ಸಿ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಿದ ಕೀರ್ತಿ ಅವರದ್ದು.
ಅಲೆಮಾರಿ ವಿದ್ಯಾರ್ಥಿಗಳು ಸೇರಿದಂತೆ ಸುಮಾರು ೧,೦೦೦ಕ್ಕೂ ಅಧಿಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಈವರೆಗೆ ಉಚಿತ ಶಿಕ್ಷಣ ನೀಡಿದ್ದು, ಪ್ರೆಸಿಡೆನ್ಸಿ ಶಾಲೆಯಲ್ಲಿ ಉಚಿತ ಶಿಕ್ಷಣ ಪಡೆದ ಸುಮಾರು ೪೦೦ ಮಂದಿ ವೈದ್ಯರು ಹಾಗೂ ೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಂಜಿನಿರ‍್ಸ್ ಮತ್ತು ವಿವಿಧ ಹುದ್ದೆಗಳಲ್ಲಿದ್ದಾರೆ.
ಸ್ವಂತ ಖಾಸಗಿ ಶಿಕ್ಷಣ ಸಂಸ್ಥೆ ಇದ್ದರೂ ಸರ್ಕಾರಿ ಶಾಲೆಗಳು, ಬಡ ಮಕ್ಕಳು, ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡ ಸರ್ಕಾರಿ ಶಾಲಾ ಮಕ್ಕಳನ್ನೂ ಪ್ರೋತ್ಸಾಹಿಸುತ್ತಾ ಬಂದ ಚಿದಾನಂದ್ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ. ತರಗತಿಗಳಲ್ಲಿ ಅತ್ಯುನ್ನತ ಶ್ರೇಣಿ ಪಡೆದ ಮಕ್ಕಳಿಗೆ ಪ್ರೆಸಿಡೆನ್ಸಿ ಶಾಲೆಯಲ್ಲಿ ೨೨ ವರ್ಷಗಳವರೆಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿದ್ದು ಪ್ರತಿಭಾನ್ವಿತ ಮಕ್ಕಳ ಉಚಿತ ಶೈಕ್ಷಣಿಕ ಭವಿಷ್ಯಕ್ಕಾಗಿ ಈವರೆಗೆ ೨೫ ಕೋಟಿ ರೂ.ಗಳನ್ನು ತಾವೇ ಭರಿಸಿರುವುದು ಹೆಮ್ಮೆಯ ಸಂಗತಿಯೂ ಹೌದು.
ತಾಲ್ಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ೧೦ನೆ ತರಗತಿ ಹಾಗೂ ಪಿ.ಯು. ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡ ಮಕ್ಕಳಿಗೆ ಜಾತ್ಯತೀತವಾಗಿ ಗುರ್ತಿಸಿ ಅಂತಹ ಪ್ರತಿ ಮಕ್ಕಳಿಗೂ ೫,೦೦೦ ರೂ.ಗಳಿಂದ ೧೫,೦೦೦ ರೂ.ಗಳವರೆಗೆ ಪ್ರತಿಭಾ ಪುರಸ್ಕಾರವನ್ನು ೧೫ ವರ್ಷಗಳವರೆಗೆ ನೀಡಿರುವ ಕೀರ್ತಿ ಚಿದಾನಂದ್ ಅವರದ್ದು. ಮಕ್ಕಳ ಪ್ರತಿಭಾ ಪುರಸ್ಕಾರಕ್ಕಾಗಿಯೇ ಸುಮಾರು ೧೫ ಕೋಟಿ ರೂ. ಗಳ ವೆಚ್ಚ ಭರಿಸಲಾಗಿದೆ.
ಕಳೆದ ೨ ವರ್ಷಗಳ ಹಿಂದೆ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿಯೂ ಆಯ್ಕೆಗೊಂಡ ಚಿದಾನಂದ್, ತಮ್ಮ ಪ್ರೆಸಿಡೆನ್ಸಿ ಶಾಲೆಗಿಂತಲೂ ಸರ್ಕಾರಿ ಶಾಲೆಗಳ ಅಭಿವೃದ್ಧಿಯತ್ತ ಗಮನಹರಿಸಿದ್ದು ಹಂತ ಹಂತವಾಗಿ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೂ ಮುಂದಾಗಿದ್ದಾರೆ.
ಸ್ಥಳೀಯ ಪ್ರದೇಶಾಭಿವೃದ್ಧಿಯ ಅಲ್ಪ ಪ್ರಮಾಣದ ಅನುದಾನದ ಜೊತೆಗೆ ತಮ್ಮ ಖರ್ಚಿನಿಂದಲೇ ಕೋಟ್ಯಂತರ ರೂ.ಗಳನ್ನು ವ್ಯಯಿಸಿ ವಿವಿಧ ಸರ್ಕಾರಿ ಶಾಲಾ ಕಟ್ಟಡಗಳ ಅಭಿವೃದ್ಧಿಗೆ ಚಿದಾನಂದ್ ಮುಂದಾಗಿರುವುದು ಹೆಮ್ಮೆಯ ಸಂಗತಿಯೂ ಹೌದು.ತಾವು ಓದಿದ ಬರಗೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಬಗ್ಗೆ ಕಾಳಜಿ ಹೊಂದಿರುವ ಅವರು ಈ ಶಾಲೆಯನ್ನೂ ದತ್ತು ಪಡೆದು ತಮ್ಮದೇ ಖರ್ಚಿನಲ್ಲಿ ಹತ್ತಾರು ನೂತನ ಕೊಠಡಿಗಳ ನಿರ್ಮಾಣಕ್ಕೂ ಮುಂದಾಗಿದ್ದಾರೆ.
ಸ್ಥಿತಿವಂತರು ಪ್ರೆಸಿಡೆನ್ಸಿಯಂತಹ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳನ್ನು ಓದಿಸುತ್ತಾರೆ. ಆದರೆ ಕಡು ಬಡವರ ಮಕ್ಕಳು, ಆರ್ಥಿಕ ಸಂಕಷ್ಟಕ್ಕೊಳಗಾದವರು ಇಂತಹ ಸಂಸ್ಥೆಯಲ್ಲಿ ಓದುವುದು ಕಷ್ಟ ಸಾಧ್ಯವೇ ಆಗಿದ್ದು, ಅವರಿಗೆ ಸರ್ಕಾರಿ ಶಾಲೆ ಅನಿವಾರ್ಯವಾಗಿದೆ. ಹೀಗಾಗಿಯೇ ಶಿರಾ ಭಾಗದ ಸರ್ಕಾರಿ ಶಾಲೆಗಳಿಗೆ ಹಂತ ಹಂತವಾಗಿ ಶಕ್ತಿ ತುಂಬುವ ಕೆಲಸ ಮಾಡುವ ಇಂಗಿತವನ್ನು ಚಿದಾನಂದ್ ಹೊಂದಿದ್ದಾರೆ.