ಶಿವಮೂರ್ತಿ ಮುರುಘಾಶರಣ ಕರೆ; ಹಾಲು ಹುತ್ತಕ್ಕೆ ಹಾಕುವ ಬದಲು ಮಕ್ಕಳಿಗೆ ಕೊಡಿ

 ಚಿತ್ರದುರ್ಗ :

      ನಾಗರಪಂಚಮಿಯಂದು ಹಾಲನ್ನು ಹುತ್ತಕ್ಕೆ ಹಾಕುವ ಬದಲು ಮಕ್ಕಳಿಗೆ ಹಾಕಿ. ಹಾವಿಗೆ ಹಾಲನ್ನು ಹಾಕಬಾರದು. ಕಾರಣ ಹಾವು ಹಾಲನ್ನು ಕುಡಿಯುವುದಿಲ್ಲ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

      ವಿ.ಪಿ. ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಸವಕೇಂದ್ರ ಶ್ರೀಮುರುಘಾಮಠ, ರೋಟರಿಕ್ಲಬ್ ಚಿನ್ಮೂಲಾದ್ರಿ, ಸಹನಾಮಾತೃಶ್ರೀ ಸಂಸ್ಥೆ ಇವರ ಸಹಯೋಗದಲ್ಲಿ ನಡೆದ ನಾಗರಪಂಚಮಿ ಪ್ರಯುಕ್ತ ಮಕ್ಕಳಿಗೆ ಹಾಲು ಹಣ್ಣು ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶ್ರೀಗಳು ಮಾತನಾಡಿದರು.

      ಹಾವು ಮಾಂಸಹಾರಿ. ಹಾಗಾಗಿ ಹಾಲು ಕುಡಿಯುವುದಿಲ್ಲ. ಮೊಟ್ಟೆಯಿಂದ ಹೊರಬರುವ ಪ್ರಾಣಿ ಹಾಲನ್ನು ಕುಡಿಯುವುದಿಲ್ಲ. ಪ್ರತಿವರ್ಷ ನಾಗರಪಂಚಮಿ ಸಂದರ್ಭದಲ್ಲಿ ಪೌಷ್ಟಿಕಾಂಶವುಳ್ಳ ಹಾಲನ್ನು ಹುತ್ತಕ್ಕೆ ಎರೆಯುವ ಮೂಲಕ ವ್ಯರ್ಥ ಮಾಡದೇ ಮಕ್ಕಳಿಗೆ ನೀಡುವಂತೆ ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸಲು ನಾಗರಪಂಚಮಿಗೆ ಬಸವ ಪಂಚಮಿಯ ಸ್ವರೂಪ ಕೊಡಲಾಗಿದೆ ಎಂದರು.

      ಮುಖ್ಯಅತಿಥಿಯಾಗಿದ್ದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಶ್ರೀಗಳು ಮಾಡುತ್ತಿರುವ ಇಂತಹ ಕೆಲಸಗಳಿಗೆ ನನ್ನ ಅಭಿನಂದನೆಗಳು. ಬಹಳಷ್ಟು ಮಠ ಮಾನ್ಯಗಳು ಇಂತಹ ಕೆಲಸಗಳನ್ನು ಕಡಿಮೆ ಮಾಡುತ್ತಿವೆ. ಸರ್ಕಾರದಿಂದ ಶಾಲೆಗಳಿಗೆ ಎಲ್ಲ ರೀತಿಯ ಸವಲತ್ತುಗಳನ್ನು ಕೊಡುತ್ತೇವೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮಗಳಲ್ಲಿ ಓದುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಶಾಲೆಗಳನ್ನು ಉಳಿಸುವ ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಡಿಇಡಿ, ಬಿಇಡಿ ಆದವರು ಸಾಕಷ್ಟಿದ್ದು ನಿರುದ್ಯೋಗಿಗಳಾಗಿದ್ದಾರೆ. ಹಾಗಾಗಿ ಶಿಕ್ಷಕರು ಶಿಸ್ತಿನಿಂದ ಶಾಲೆಗಳನ್ನು ನಡೆಸಬೇಕು. ಕಾನೂನುಬಾಹಿರವಾಗಿ ಎಷ್ಟೋ ಇಂಗ್ಲಿಷ್ ಶಾಲೆಗಳು ನಡೆಯುತ್ತಿವೆ. ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಎಲ್ಲ ರೀತಿಯ ತಪಾಸಣೆ ಮಾಡಬೇಕು. ಕಳೆದ ಕೆಲವು ವರ್ಷಗಳಿಂದ ಶಾಲೆಗಳ ಸ್ಥಿತಿ ಗಂಭೀರವಾಗಿದೆ. ಹಾಗಾಗಬಾರದು ಎಂದರು.

      ವೇದಿಕೆಯಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯನಿರ್ವಹಣಾ ನಿರ್ದೇಶಕ ಡಾ.ಈ. ಚಿತ್ರಶೇಖರ್, ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ನಾಗಭೂಷಣ್, ಶಾಲೆಯ ಮುಖ್ಯೋಪಾಧ್ಯಾಯರು, ನಗರಸಭೆ ಸದಸ್ಯ ರವಿಶಂಕರ್‍ಬಾಬು, ವೀರಶೈವ ಸಮಾಜದ ಅಧ್ಯಕ್ಷ ಎನ್.ಜಯಣ್ಣ ಇದ್ದರು. ಪ್ರಾರಂಭದಲ್ಲಿ ಶಿವರಾಮ್ ಸ್ವಾಗತಿಸಿದರು. ನಾಗರಾಜ್ ಸಂಗಮ್ ನಿರೂಪಿಸಿದರು.

Recent Articles

spot_img

Related Stories

Share via
Copy link
Powered by Social Snap