ದಾವಣಗೆರೆ:
ಕಳೆದ 8 ತಿಂಗಳಿಂದ ಬಾಕಿ ಇರುವ ಶಿಷ್ಯ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಜೂನಿಯರ್ ಡಾಕ್ಟರ್ ಅಸೋಸಿಯೇಷನ್ ನೇತೃತ್ವದಲ್ಲಿ ಸರ್ಕಾರಿ ಆಸ್ಪತ್ರೆಗಳ ಗೃಹ ಮತ್ತು ಕಿರಿಯ ವೈದ್ಯರು ಹಾಗೂ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ನಗರದಲ್ಲಿ ಸೋಮವಾರದಿಂದ ಅನಿರ್ಧಿಷ್ಠಾವಧಿ ಧರಣಿ ಆರಂಭಿಸಿದ್ದಾರೆ.
ನಗರದ ಜಿಲ್ಲಾ ಚಿಗಟೇರಿ ಸಾರ್ವಜನಿಕರ ಆಸ್ಪತ್ರೆಯ ಆವರಣದಲ್ಲಿ ಧರಣಿ ಆರಂಭಿಸಿರುವ ವೈದ್ಯರು ತಮ್ಮ ಬಾಕಿ ಶಿಷ್ಯ ವೇತನ ಬಿಡುಗಡೆ ಆಗುವ ವರೆಗೂ ಧರಣಿ ಮುಂದುವರೆಸುವುದಾಗಿ ಸರ್ಕಾರವನ್ನು ಎಚ್ಚರಿಸಿದರು.
ಜಿಲ್ಲಾಸ್ಪತ್ರೆ ಹಾಗೂ ಹೆರಿಗೆ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದ ಗೃಹ ವೈದ್ಯರು ಮತ್ತು 230 ಜನ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಹಗಲಿರುಳು ರೋಗಿಗಳ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ವೈದ್ಯಕೀಯ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಅಸಂಬದ್ಧ ಕಾರಣ ನೀಡಿ ಕಳೆದ ಎಂಟು ತಿಂಗಳಿನಿಂದ ಶಿಷ್ಯ ವೇತನ ತಡೆಹಿಡಿದು ದ್ಯಾರ್ಥಿಗಳಿಂದ ವೇತನವಿಲ್ಲದೇ ದುಡಿಸಿಕೊಳ್ಳುವ ಕೀಳು ಮಟ್ಟಕ್ಕೆ ಇಳಿದಿರುವ ಸರ್ಕಾರದ ಕ್ರಮ ಅತ್ಯಂತ ಅಮಾನವೀಯವಾಗಿದೆ ಎಂದು ಕಿಡಿಕಾರಿದರು.
ಶಿಷ್ಯ ವೇತನವನ್ನೇ ನೆಚ್ಚಿಕೊಂಡು ಪ್ರವೇಶ ಪಡೆದಿರುವ ಸರ್ಕಾರಿ ಕೋಟಾದ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿದ್ದಾರೆ. ಈ ವಿಷಯದ ಬಗ್ಗೆ ಅನವಶ್ಯಕವಾಗಿ ಸಂಬಂಧಪಟ್ಟ ಕಡತಗಳನ್ನು ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ದೂಡುತ್ತಾ, ನಿರ್ಲಕ್ಷ ತೋರಿ ಸತಾಯಿಸಲಾಗುತ್ತಿದೆ. ಕಳೆದ 8 ತಿಂಗಳಿನಿಂದ ಶಿಷ್ಯ ವೇತನ ತಡೆ ಹಿಡಿದಿರುವುದರಿಂದ ಸ್ವಂತ ಖರ್ಚಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಸಚಿವರನ್ನು ಹಲವು ಬಾರಿ ಭೇಟಿ ಮಾಡಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೋಗಿಗಳ ಹಿತದೃಷ್ಠಿಯಿಂದ ಇಲ್ಲಿಯವರೆಗೂ ಸೇವೆ ಸಲ್ಲಿಸುತ್ತಿದ್ದರೂ ವೈದ್ಯಕೀಯ ಶಿಕ್ಷಣ ಇಲಾಖೆ ಲೆಕ್ಕಿಸುತ್ತಿಲ್ಲ. ಹಿಂದೆಯೂ ಸಹ ಹೋರಾಟ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸೂಕ್ತ ಪರಿಹಾರ ಸಿಕ್ಕಿಲ್ಲ. ಈಗಾಗಲೇ ಜಿಲ್ಲಾಧಿಕಾರಿ, ವೈದ್ಯಕೀಯ ಶಿಕ್ಷಣ ಸಚಿವರು, ಗೃಹಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿಕೊಂಡರೂ ಬಾಕಿ ಶಿಷ್ಯವೇತನ ಪಾವತಿಸದೆ ಆಶ್ವಾಸನೆ ನೀಡಿ, ಮೂಗಿಗೆ ತುಪ್ಪ ಸವರುತ್ತಿದ್ದಾರೆ. ಸರ್ಕಾರ ನಮ್ಮ ಕೂಗಿಗೆ ಸ್ಪಂದಿಸದ ಕಾರಣ ಮುಷ್ಕರ ಅನಿವಾರ್ಯವಾಗಿದೆ. ನಮ್ಮ ಬೇಡಿಕೆ ಈಡೇರುವ ವರೆಗೂ ಧರಣಿಯನ್ನು ಮುಂದುವರೆಸುತ್ತೇವೆ. ಅಕ್ಟೋಬರ್ ಅಂತ್ಯದೊಳಗೆ ಸಮಸ್ಯೆಗೆ ಪರಿಹಾರ ಸಿಗದೇ ಇದ್ದರೆ, ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ. ಆಗ ಸಂಭವಿಸುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ ಆಗಬೇಕಾಗುತ್ತದೆ ಎಂದು ಧರಣಿನಿರತ ಕಿರಿಯ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಎಚ್ಚರಸಿದರು.
ಧರಣಿಯಲ್ಲಿ ಸಂಘಟನೆ ಅಧ್ಯಕ್ಷ ಡಾ.ಸೈಯದ್ ಅಬರಾರ್ ಬಾಷಾ, ಡಾ.ಸ್ವರೂಪ್ ಮಲ್ಲೇಶ್, ಡಾ.ಜಿ.ಪಿ. ಪ್ರಿಯಾಂಕ, ಡಾ.ಮನೀಷ್, ಡಾ.ಕೆ.ಎನ್.ಚಂದನ್, ಡಾ.ಹೆಚ್.ಜಿ. ಸಂಗಮ್, ಡಾ.ಅರುಣ್‍ಕುಮಾರ್, ಡಾ. ರವಿಕಿರಣ್, ಡಾ.ಅಭಿಲಾಷ್, ಡಾ.ಸಂತೋಷ್, ಡಾ.ಪ್ರಭುದೇವ್, ಡಾ.ಅನುರೂಪ, ಡಾ.ಕರಿಬಬಸಪ್ಪ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ