ಉದ್ಘಾಟನೆಯಾಗದ ಕೋಲಾರದ ಯರಗೋಳ್ ಯೋಜನೆ
ಪಂಚರತ್ನ ಯೋಜನೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಕೆರೆಗಳ ಸಂರಕ್ಷಣೆ ಯೋಜನೆ ಸೇರ್ಪಡೆ
ಬೆಂಗಳೂರು: ಕೋಲಾರ ಜಿಲ್ಲೆಯ ನಾಲ್ಕು ತಾಲೂಕುಗಳಿಗೆ ಶಾಶ್ವತ ಕುಡಿಯುವ ಮೀರಿನ ಸೌಲಭ್ಯ ಕಲ್ಪಿಸುವ ಯರಗೋಳ್ ಜಲಾಶಯ ತುಂಬಿ ಹರಿಯುತ್ತಿದ್ದರೂ, ಇನ್ನೂ ಆ ಯೋಜನೆಯನ್ನು ಉದ್ಘಾಟನೆ ಮಾಡದ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮೃದ್ಧ ಮಳೆಯಿಂದ ಜಲಾಶಯ ಕೋಡಿ ಹೋಗುತ್ತಿರುವ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿರುವ ಅವರು; ಶೀಘ್ರವೇ ಜಲಾಶಯಕ್ಕೆ ಭೇಟಿ ನೀಡಿ ಗಂಗಾಮಾತೆಗೆ ಬಾಗೀನ ಅರ್ಪಿಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಸರಕಾರದ ನಿರ್ಲಕ್ಷ್ಯ ವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ್ ಅಣೆಕಟ್ಟೆ ತುಂಬಿ ಹರಿಯುತ್ತಿರುವ ದೃಶ್ಯ ಕಂಡು ನನ್ನ ಮನದುಂಬಿ ಬಂದಿದೆ. ಕುಡಿಯುವ ನೀರಿಲ್ಲದೆ ತತ್ತರಿಸಿದ್ದ ಈ ಭಾಗದ ಜನರಿಗೆ ಪರಿಶುದ್ಧ ನೀರು ಒದಗಿಸಲು 2006ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಯರಗೋಳ್ ಯೋಜನೆಗೆ ಒಪ್ಪಿಗೆ ನೀಡಿದ್ದೆ. ಈ ಅಣೆಕಟ್ಟೆಗೆ ನೀರೆಲ್ಲಿಂದ ಬರುತ್ತದೆ ಎಂದು ಮೂಗು ಮುರಿದಿದ್ದವರು ಈಗೊಮ್ಮೆ ನೋಡಬೇಕು. ಅಲ್ಲಿ ಕಂಗೊಳಿಸುತ್ತಿರುವ ʼಜಲಸಿರಿʼ ನೋಡಲು ಎರಡು ಕಣ್ಣು ಸಾಲದು. ಕೋಲಾರ, ಮಾಲೂರು, ಬಂಗಾರಪೇಟೆ, ಕೆಜಿಎಫ್ ಸೇರಿ 4 ತಾಲೂಕುಗಳಿಗೆ ನೀರೊದಗಿಸುವ ಈ ಯೋಜನೆಯನ್ನು ಸರಕಾರ ಕೂಡಲೇ ಲೋಕಾರ್ಪಣೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜೆಡಿಎಸ್ ಪಕ್ಷ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗ ಕಳೆದ ಏ.24ರಂದು ನಾನೇ ಯರಗೋಳ್ʼಗೆ ತೆರಳಿ ಕಳಸಕ್ಕೆ ನೀರು ತುಂಬಿಕೊಂಡಿದ್ದೆ. ಆ ಕ್ಷಣ ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ. ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಇಂಥ ಇನ್ನಷ್ಟು ಯೋಜನೆಗಳ ಅಗತ್ಯವಿದೆ. ಆ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತೇವೆ. ಜಲಧಾರೆ ದಿನವೇ ನಾನು ಮುಖ್ಯ ಎಂಜಿನೀಯರ್, ಸಂಬಂಧಿತ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಸ್ಥಳದಿಂದಲೇ ಸಂಪರ್ಕಿಸಿ, ತಕ್ಷಣವೇ ಈ ಯೋಜನೆ ಉದ್ಘಾಟಿಸುವಂತೆ ಆಗ್ರಹಿಸಿದ್ದೆ. ಪಂಪ್ ಅಳವಡಿಕೆ ಬಾಕಿ ಇದೆ ಎಂದು ಅವರು ಹೇಳಿದ್ದರು. ಗುತ್ತಿಗೆದಾರರಿಗೆ ಹಣ ಬಾಕಿ ಇದೆ ಎಂಬ ಮಾಹಿತಿಯೂ ಇದೆ. ಬಿಜೆಪಿ ಸರಕಾರದ ನಿರ್ಲಕ್ಷ್ಯದ ಪರಾಕಾಷ್ಠೆ ಇದು ಎಂದು ಅವರು ಕಿಡಿಕಾರಿದ್ದಾರೆ.
2006 ಮಾ.26ರಂದು ಬಾಗೇಪಲ್ಲಿಯ ಚಿತ್ರಾವತಿ ಅಣೆಕಟ್ಟೆ ಲೋಕಾರ್ಪಣೆ ಮಾಡಿದ ವೇಳೆ ಮಾಧ್ಯಮ ಮಿತ್ರರೊಬ್ಬರು ಯರಗೋಳ್ ಬಗ್ಗೆ ಕೇಳಿದ್ದ ಪ್ರಶ್ನೆ ನನ್ನ ಮನಸ್ಸಿಗೆ ನಾಟಿತು. ನಾನು ತಡ ಮಾಡದೇ ಅಧಿಕಾರಿಗಳ ಜತೆ ಚರ್ಚಿಸಿ ಯರಗೋಳ್ ಯೋಜನೆಗೆ ಒಪ್ಪಿಗೆ ಕೊಟ್ಟು ಬಜೆಟ್ʼನಲ್ಲೇ 50 ಕೋಟಿ ರೂ. ಅನುದಾನ ಮೀಸಲಿಟ್ಟೆ. ನನ್ನ ಸರಕಾರದ ನಂತರ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ತಲಾ 5 ವರ್ಷ ಆಡಳಿತ ನಡೆಸಿದರೂ ಯೋಜನೆ ಪೂರ್ಣವಾಗಲಿಲ್ಲ. 3 ವರ್ಷದಿಂದ ಬಿಜೆಪಿ ಸರಕಾರಕ್ಕೆ ಯರಗೋಳ್ ಕಡೆ ಚಿತ್ತವೇ ಇಲ್ಲ. ಅಣೆಕಟ್ಟಿಗೆ ಪಂಪು ಜೋಡಿಸುವುದರಲ್ಲೇ ವರ್ಷಗಳನ್ನೇ ನುಂಗುತ್ತಿದೆ. ಬರಪೀಡಿತ ಜಿಲ್ಲೆಗಳೆಂದರೆ ಬಿಜೆಪಿಗೆ ಅಪಥ್ಯ! ಇದು ನಾಚಿಕೆಗೇಡು ಅಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆರೆ ರಾಜ್ಯಗಳ ಜತೆ ನೀರಿಗಾಗಿ ಗುದ್ದಾಡುವ ಸರಕಾರಕ್ಕೆ ಮಳೆ ನೀರಿನ ಕನಿಷ್ಠ ಪ್ರಜ್ಞೆಯೇ ಇಲ್ಲ. ಬದಲಿಗೆ ಬೆಂಗಳೂರಿನ ವಿಷತ್ಯಾಜ್ಯ ನೀರನ್ನು ಅರೆಬರೆ ಸಂಸ್ಕರಿಸಿ ಹರಿಸುತ್ತಿದೆ. ಈ ಜಿಲ್ಲೆಗಳನ್ನು ಭವಿಷ್ಯದಲ್ಲಿ ರಾಜ್ಯದ ಅತಿದೊಡ್ಡ ʼಆನಾರೋಗ್ಯ ಕೂಪʼವನ್ನಾಗಿ ಮಾಡಲೊರಟಿದೆ. ಈ ಜಿಲ್ಲೆಯ ʼಸ್ವಯಂಘೋಷಿತ ಭಗೀರಥʼರ ಹುನ್ನಾರವೂ ಇದೇ! ಕೆಲ ವರ್ಷದಿಂದ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಸಮೃದ್ಧ ಮಳೆ ಆಗುತ್ತಿದೆ. ಕೆರೆಗಳಲ್ಲಿ ಮಳೆನೀರು ನಿಲ್ಲದೆ, ಪಕ್ಕದ ಆಂಧ್ರ, ತಮಿಳುನಾಡು ಪಾಲಾಗುತ್ತಿದೆ. ಗುತ್ತಿಗೆದಾರರ ಜೇಬು ತುಂಬಿಸಲು ರಾಷ್ಟ್ರೀಯ ಪಕ್ಷಗಳ ಜನವಿರೋಧಿ ಸರಕಾರಗಳು ಕೆಸಿ ವ್ಯಾಲಿ, ಹೆಚ್ ಎನ್ ವ್ಯಾಲಿಯಂಥ ಕೆಟ್ಟ ಯೋಜನೆಗಳನ್ನು ರೂಪಿಸಿ ಹಣ ಲೂಟಿ ಹೊಡೆಯುತ್ತಿವೆ ಎಂದು ಅವರು ದೂರಿದ್ದಾರೆ.
ಕೆರೆಕಟ್ಟೆ,ಕಾಲುವೆ,ಗೋಕುಂಟೆಗಳಂಥ ಸಾಂಪ್ರದಾಯಿಕ ಜಲಮೂಲಗಳನ್ನು ನಾಶಗೊಳಿಸಿ ಕಾಗದದ ಮೇಲಷ್ಟೇ ಬಣ್ಣಬಣ್ಣವಾಗಿ ಕಾಣುವ, ದುಡ್ಡು ಹೊಡೆಯುವ ಯೋಜನೆಗಳು ಇನ್ನಾದರೂ ನಿಲ್ಲಲಿ. ಈ ಜಿಲ್ಲೆಗಳನ್ನು ʼಶಾಶ್ವತ ಮರುಭುಮಿʼ ಮಾಡುವುದು ಬೇಡ. ಮಳೆ ನೀರನ್ನು ಸದ್ಬಳಕೆ ಮಾಡಿಕೊಂಡರೆ ಬರಪೀಡಿತ ಜಿಲ್ಲೆಗಳ ಬವಣೆ ನೀಗುತ್ತದೆ. ಶೀಘ್ರದಲ್ಲೇ ನಾನು ಯರಗೋಳ್ ಅಣೆಕಟ್ಟೆಗೆ ಭೇಟಿ ನೀಡುತ್ತೇನೆ. ಗಂಗಾ ಮಾತೆಗೆ ಪೂಜೆ ಸಲ್ಲಿಸಿ ಬಾಗೀನ ಸಮರ್ಪಿಸುತ್ತೇನೆ. ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಮಳೆನೀರು ಉಳಿಸಿ,ಕರೆಕಟ್ಟೆ ಅಭಿವೃದ್ಧಿಪಡಿಸಿ ಜನತೆಗೆ ಪರಿಶುದ್ಧ ನೀರು ಕೊಡುವುವುದು ನನ್ನ ವಾಗ್ದಾನ. ಪಂಚರತ್ನ ಕಾರ್ಯಕ್ರಮದಲ್ಲಿ ಇದನ್ನು ಸೇರ್ಪಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.