ದಾವಣಗೆರೆ:
ತ್ಯಾಗ ಹಾಗೂ ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಬುಧವಾರ ನಗರದಲ್ಲಿ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿ ಹಾಗೂ ಸಡಗರ ಸಂಭ್ರಮದಿಂದ ಆಚರಿಸಿದರು.
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ನಗರದ ಪಿ.ಬಿ.ರಸ್ತೆಯಲ್ಲಿರುವ ಹಳೇ ಈದ್ಗಾ ಮೈದಾನ, ರಜ್ಹಾವುಲ್ ಮುಸ್ತಫಾ ನಗರದ ಹೊಸ ಈದ್ಗಾ ಮೈದಾನ ಹಾಗೂ ಎಸ್‍ಓಜಿ ಕಾಲೋನಿಯ ಈದ್ಗಾ ಮೈದಾನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಅಲ್ಲದೆ, ಪರಸ್ಪರ ಹಬ್ಬದ ಶುಭಾಶಯ ಕೋರಿದರು.
ಹಬ್ಬದ ಹಿನ್ನೆಲೆಯಲ್ಲಿ ಮಕ್ಕಳಾದಿಯಾಗಿ ಪುರುಷರು, ಮಹಿಳೆಯರು ಹೊಸ ಬಟ್ಟೆ ತೊಟ್ಟು, ಹಬ್ಬದ ಅಡುಗೆ ತಯಾರಿಸಿ ಸವೆದು ಸಂಭ್ರಮಿಸಿದರು.
ಸಂತ್ರಸ್ಥರಿಗೆ ನೆರವು:
ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಮನೆ-ಮಠ ಕೆಳೆದುಕೊಂಡು ಬೀದಿ ಪಾಲಾಗಿರುವ ಸಂತ್ರಸ್ಥರಿಗೆ ನೆರವು ನೀಡುವ ಉದ್ದೇಶದಿಂದ ಮುಸ್ಲಿಂ ಬಾಂಧವರು ಹಬ್ಬವನ್ನು ಸರಳವಾಗಿ ಆಚರಿಸಿದರೆ, ಇನ್ನೂ ಕೆಲವರು ಹಬ್ಬಕ್ಕೆಂದು ಖರ್ಚು ಮಾಡಬೇಕಾದ ಹಣವನ್ನು ಸಂತ್ರಸ್ಥರ ಪರಿಹಾರ ನಿಧಿಗೆ ನೀಡಿ, ಮಾನವೀಯತೆ ಮೆರೆದರು. ಕೊಡಗು ಜಿಲ್ಲೆ ಹಾಗೂ ಕೇರಳ ರಾಜ್ಯದಲ್ಲಿ ಮಹಾ ಪ್ರಳಯಕ್ಕೆ ತುತ್ತಾಗಿ ಸಂತ್ರಸ್ಥರಾದ ನೆರವಿಗಾಗಿ ಯುವಕರು ಪರಿಹಾರ ನಿಧಿಯನ್ನು ಸಂಗ್ರಹಿಸಿದರು. ಅಲ್ಲದೆ, ಸಾಮೂಹಿಕ ಪ್ರಾರ್ಥನೆಯಲ್ಲಿ ನೆರೆ ಸಂತ್ರಸ್ಥರಿಗೆ ಒಳಿತು ಮಾಡುವಂತೆ ಅಲ್ಲಾಹುವಿನಲ್ಲಿ ಮೊರೆ ಇಟ್ಟರು.
ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಮಾಧ್ಯಮ ಸಂಚಾಲಕ ಹೆಚ್.ಜೆ.ಮೈನುದ್ದಿನ್ ಹಾಗೂ ಸ್ನೇಹಿತರ ತಂಡ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಸಮಾಜದ ಬಾಂಧವರಲ್ಲಿ ನೆರವಿನ ಹಸ್ತ ಚಾಚುವಂತೆ ಮನವಿ ಮಾಡಿದರು. ಯೂತ್ ಕಾಂಗ್ರೆಸ್, ತಂಜಿಮುಲ್ ಮುಸ್ಲಿಂ ಫಂಡ್ ಅಸೋಸಿಯೇಷನ್, ಅಜಾದ್ ಫ್ರೆಂಡ್ಸ್, ಕೆ.ಹೆಚ್.ಜಿ.ಎನ್. ಫ್ರೆಂಡ್ಸ್ ಗ್ರೂಪ್, ಅಕ್ತಾರ್ ರಜಾಸರ್ಕಲ್ ಫ್ರೆಂಡ್ ಗ್ರೂಪ್ಸ್ ಹೀಗೆ ಸುಮಾರು 10 ತಂಡದೊಂದಿಗೆ ದೇಣಿಗೆ ಸಂಗ್ರಹಿಸಿದರು. ಹೀಗೆ ಸಂಗ್ರಹಿಸಿದ ಹಣವನ್ನು ಡಿಡಿಯ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲುಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ