ಶಿರಾ
ಮಕ್ಕಳ ಮನಸ್ಸು ಪರಿಶುದ್ಧವಾದುದಾಗಿದ್ದು, ಬೆಳೆಯುವ ಪೈರು ಮೊಳಕೆಯಲ್ಲಿಯೇ ಅನ್ನುವಂತೆ ಶ್ರೀ ಕೃಷ್ಣನ ತತ್ವ ಸಿದ್ಧಾಂತಗಳನ್ನು ಮಕ್ಕಳ ಬೆಳವಣಿಗೆಯ ಆರಂಭಿಕ ದಿನಗಳಲ್ಲಿಯೇ ನಮ್ಮ ಹಿರಿಯರು ತಿಳಿ ಹೇಳುವ ಅಗತ್ಯವಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಿ.ಸತ್ಯನಾರಾಯಣ್ ತಿಳಿಸಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಕೈಗೊಳ್ಳಲಾಗಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶಕ್ಕಷ್ಟೇ ಅಲ್ಲದೆ ಇಡೀ ಜಗತ್ತಿಗೆ ಭಗವದ್ಗೀತೆಯ ಸಾರ ಮಾದರಿಯಾಗಿದೆ. ಶ್ರೀಕೃಷ್ಣನ ಸಂದೇಶವನ್ನು ಮನುಷ್ಯ ತಿಳಿದರೆ ಅಧಿಕಾರದ ಲಾಲಸೆ, ತಪ್ಪು ಕಲ್ಪನೆ, ಅಹಂಕಾರ, ಭಿನ್ನಾಭಿಪ್ರಾಯಗಳನ್ನು ತೊರೆದು ಬದುಕು ಹಸನಾಗಲು ಸಾಧ್ಯವಿದೆ ಎಂದರು.
ಪ್ರತಿಯೊಬ್ಬರ ಜೀವನದ ಗುರಿ ಸನ್ಮಾರ್ಗದಲ್ಲಿ ನಡೆದು ಆನಂದ ಪಡೆಯುವುದೇ ಆಗಿದ್ದು, ಸನ್ಮಾರ್ಗಗಳು ನಮ್ಮ ಬದುಕಿಗೆ ದಾರಿದೀಪವೂ ಆಗುತ್ತವೆ. ಈ ನಿಟ್ಟಿನಲ್ಲಿ ಶ್ರೀಕೃಷ್ಣನ ಸಂದೇಶಗಳು ಎಲ್ಲರಿಗೂ ಸನ್ಮಾರ್ಗಗಳನ್ನು ಉಂಟು ಮಾಡಿ ಅನ್ಯಾಯ, ಅಸತ್ಯಗಳನ್ನು ಬದಿಗೊತ್ತಲು ಕಾರಣವಾಗುತ್ತವೆ ಎಂದು ಬಿ.ಸತ್ಯನಾರಾಯಣ್ ತಿಳಿಸಿದರು.
ತಹಸೀಲ್ದಾರ್ ರಂಗೇಗೌಡ ಮಾತನಾಡಿ ಗೀತಾ-ಭಾಗವತಗಳ ರೂಪದಲ್ಲಿ ಶ್ರೀಕೃಷ್ಣನು ಇಂದಿಗೂ ಭಗವಂತನ ರೂಪದಲ್ಲಿದ್ದು, ಭಗವದ್ಗೀತೆಯಂತೂ ನಮ್ಮ ದೇಶದಲ್ಲಿ ದೇವರಷ್ಟೇ ಪೂಜಿಸಲ್ಪಡುತ್ತಿದ್ದು, ಅದಕ್ಕೆ ಗೌರವಾದರಗಳು ಲಭ್ಯವಾಗಲು ಶ್ರೀಕೃಷ್ಣನ ಸಂದೇಶದ ಸಾರಗಳೇ ಕಾರಣ ಎಂದರು.
ಯಾದವ ಮುಖಂಡರಾದ ಸತ್ಯನಾರಾಯಣ್, ಎನ್.ಸಿ.ದೊಡ್ಡಯ್ಯ, ತಿಮ್ಮಯ್ಯ, ಶ್ರೀರಂಗ ಯಾದವ್, ಹಾರೋಗೆರೆ ಮಹೇಶ್, ಗೌಡಗೆರೆ ಚಂದ್ರಶೇಖರ್, ಮಾಗೋಡು ನಾಗರಾಜು, ಹಾರೋಗೆರೆ ಮಾರಣ್ಣ, ಮಾಗೋಡು ಶ್ರೀರಂಗಪ್ಪ, ಜೈರಾಮಯ್ಯ, ಈರಣ್ಣ, ಬಿ.ಸಿ.ಎಂ. ಅಧಿಕಾರಿ ಭಾನುಮತಿ, ಕೃಷಿ ಇಲಾಖಾಧಿಕಾರಿ ಡಾ.ನಾಗರಾಜು ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








