ದಾವಣಗೆರೆ:
ಬಂಜರು ಪ್ರದೇಶ ಹಾಗೂ ಬಳಕೆಯಾಗದ ಭೂಮಿಯಲ್ಲಿ ಶ್ರೀಗಂಧ ಬೆಳೆಯುವುದು ಯೋಗ್ಯ ಎಂದು ಪೆÇನ್ನಂಪಟ್ಟಣ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ರಾಮಕೃಷ್ಣ ಹೆಗಡೆ ತಿಳಿಸಿದರು.
ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಶುಕ್ರವಾರ ಶ್ರೀಗಂಧ ಬೆಳೆ ಮತ್ತು ಇತರೆ ಅರಣ್ಯತಂತ್ರಜ್ಞಾನಗಳ ಬಗ್ಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಹಾರಧಾನ್ಯ ಬೆಳೆಯುವ ಕೃಷಿ ಭೂಮಿಯಲ್ಲಿ ಶ್ರೀಗಂಧ ಬೆಳೆಯುವುದು ಒಳ್ಳೆಯದಲ್ಲ. ಇದನ್ನು ಬಂಜರು ಭೂಮಿ ಹಾಗೂ ಬಳಕೆಯಾಗದ ಭೂಪ್ರದೇಶದಲ್ಲಿ ಬೆಳೆಯುವುದು ಒಳಿತು ಎಂದು ಹೇಳಿದರು.
ಶ್ರೀಗಂಧ ಬೆಳೆಯು ಪೋಷಕಾಂಶ ಮತ್ತು ನೀರನಾಂಶವನ್ನು ನೇರವಾಗಿ ತೆಗೆದುಕೊಳ್ಳುವುದಿಲ್ಲ. ಬೇರೆ ಗಿಡದ ಬೇರುಗಳಿಂದ ಪೋಷಕಾಂಶಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ಶ್ರೀಗಂಧ ಬೆಳೆಯಬೇಕಾದರೆ ಆಶ್ರಯ ಗಿಡಗಳ ಅವಶ್ಯಕತೆ ಇದೆ. ಮಾವು, ಹಲಸು ಬೆಳೆಗಳಿಂದ ಶ್ರೀಗಂಧದ ಬೆಳೆಯು ಕುಂಠಿತವಾಗುತ್ತದೆ. ಅಲ್ಲದೆ, ಆಹಾರಧಾನ್ಯ ಬೆಳೆಯುವ ಕೃಷಿ ಭೂಮಿಯಲ್ಲಿ ಶ್ರೀಗಂಧವನ್ನು ಬೆಳೆಯಬಾರದು. ಹೊಲದ ಬದುಗಳಲ್ಲಿ ಶ್ರೀಗಂಧದ ಬೆಳೆಗಳನ್ನು ಬೆಳೆಸಬಹುದು ಎಂದು ಸಲಹೆ ನೀಡಿದರು.
ಶ್ರೀಗಂಧವನ್ನು 15 ವರ್ಷಗಳಿಗೊಮ್ಮೆ ಕತ್ತರಿಸಬಹುದು. ಒಂದು ಮರದಿಂದ ಸುಮಾರು 15 ಕೆಜಿ ಶ್ರೀಗಂಧ ದೊರೆಯುತ್ತದೆ ಎನ್ನಲಾಗುತ್ತಿದೆ. ಆದರೆ, ಗುಣಮಟ್ಟದ ಸಸಿಗಳನ್ನು ಹಾಕಿ ಉತ್ತಮವಾಗಿ ಬೆಳೆದರೆ, ಇನ್ನೂ ಹೆಚ್ಚಿನ ತೂಕ ಸಿಗಲಿದೆ. ಮಾರುಕಟ್ಟೆಯಲ್ಲಿ ಒಂದು ಕೆಜಿ ಶ್ರೀಗಂಧಕ್ಕೆ 22 ಸಾವಿರ ರೂ ಸಿಗುತ್ತದೆ. ಇದರ ಸಾಧಕ-ಬಾಧಕಗಳ ಬಗ್ಗೆ ತಿಳಿದುಕೊಂಡು ರೈತರು ಬೆಳೆ ಬೆಳೆಯಬೇಕು. ಈ ಬೆಳೆಗೆ ಕೆಲವು ರೋಗಗಳು ಬರುತ್ತವೆ. ಹಾಗಾಗಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು. ಶ್ರೀಗಂಧ ಬೆಳೆಗೆ ಕಳ್ಳರ ಕಾಟ ಹೆಚ್ಚಾಗಿರುತ್ತದೆ. ಅದಕ್ಕಾಗಿ ಎಚ್ಚರಿಕೆ ವಹಿಸುವುದು ಅತ್ಯವಶ್ಯವಾಗಿದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಕೆ.ರಘುರಾಜ್, ಡಾ.ದೇವರಾಜ್, ಡಾ.ಶ್ರೀನಿವಾಸ್ ರೆಡ್ಡಿ ಮತ್ತಿತರರು ಹಾಜರಿದ್ದರು.
