ಷಟ್‍ಪಥ ಕಾಮಗಾರಿ ಚುರುಕು ಗೊಳಿಸಿ

ದಾವಣಗೆರೆ:

     ದಾವಣಗೆರೆ-ಚಿತ್ರದುರ್ಗ ಮಧ್ಯೆಯ ಷಟ್‍ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಂಸದ ಜಿ.ಎಂ.ಸಿದ್ದೇಶ್ವರ, ಕಾಮಗಾರಿಯನ್ನು ಚುರುಕುಗೊಳಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

     ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಸಂಜೆ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕುರಿತು ರೈತರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಷಟ್‍ಪಥ ರಸ್ತೆ ಅಭಿವೃದ್ಧಿ ಕಾಮಗಾರಿ ವಿಳಂಬ ಆಗುತ್ತಿರುವುದು ಸರಿಯಲ್ಲ. ಅಧಿಕಾರಿಗಳು ತಕ್ಷಣವೇ ಈ ಕಾಮಗಾರಿಗೆ ಚುರುಕು ಮುಟ್ಟಿಸಿ, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು.

      ರಾಷ್ಟ್ರೀಯ ಹೆದ್ದಾರಿಯನ್ನು ಹಿಂದೆ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡೆಸಿದ ಸಂದರ್ಭದಲ್ಲಿ ಅಧಿಕಾರಿಗಳು ಕೈಗೊಂಡಿರುವ ಅವೈಜ್ಞಾನಿಕ ಕಾಮಗಾರಿಯಿಂದಾಗಿ, ಅಂಡರ್‍ಪಾಸ್‍ಗಳಲ್ಲಿ ಮಳೆ ನೀರು ನಿಂತು ರೈತರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈಗ ಇದನ್ನು ಸರಿ ಮಾಡಿ ಸಮಸ್ಯೆ ಬಗೆಹರಿಸಬೇಕೆಂದು ಸಲಹೆ ನೀಡಿದರು.

       ಈ ಅಂಡರ್‍ಪಾಸ್‍ಗಳು ಕಿರಿದಾಗಿರುವ ಕಾರಣ ಬೃಹತ್ ವಾಹನಗಳು ಸಂಚರಿಸಲು ಹಾಗೂ ಟ್ರಾಕ್ಟರ್, ಲಾರಿಗಳಲ್ಲಿ ಹುಲ್ಲು-ಕಬ್ಬು ಸಾಗಿಸಲು ಸಹ ತೊಂದರೆಯಾಗುತ್ತಿದೆ. ಆದ್ದರಿಂದ ಅಂಡರ್‍ಪಾಸ್‍ಗಳ ಎತ್ತರವನ್ನು ಹೆಚ್ಚಿಸಬೇಕು. 2018ರ ಸೆಪ್ಟೆಂಬರ್ ತಿಂಗಳಲ್ಲೇ ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಎರಡು ಬಾರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆ. ಆದರೂ, ಅಧಿಕಾರಿಗಳು ಸಬೂಬು ಹೇಳುತ್ತಾ ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

       ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವವರೆಗೆ ಚತುಷ್ಪಥದ ಟೋಲ್ ಪಡೆಯಬೇಕೇ ಹೊರತು, ಷಟ್‍ಪಥದ ಟೋಲ್ ಪಡೆಯಬಾರದು ಎಂದು ತಿಳಿಸಿದ್ದೇನೆ. ದಾವಣಗೆರೆ ನಗರಕ್ಕೆ ಚಿಂದೋಡಿ ಲೀಲಾ ಕೇಂದ್ರದ ಮೂಲಕ ಬರುವಾಗ ಒಂದು ಉತ್ತಮವಾದ ಪ್ರವೇಶ ಇರಬೇಕು ಎಂಬ ಸೂಚನೆ ನೀಡಿದ್ದೇನೆ. ಇದಕ್ಕಾಗಿ ಪ್ರತ್ಯೇಕ ಪ್ರಸ್ತಾವನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

        ಹರಿಹರದಲ್ಲಿ 47 ಎಕರೆ ಪ್ರದೇಶದಲ್ಲಿ 2ಜಿ ಎಥೆನಾಲ್ ಘಟಕ ಸ್ಥಾಪನೆಗಾಗಿ ಪಡೆಯಬೇಕಿದ್ದ ಜಮೀನಿನ ಪೈಕಿ 17 ಎಕರೆ ವಿವಾದದಲ್ಲಿದೆ. ಈ ವಿವಾದ ಬಗೆಹರಿಸಿಕೊಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಆನಗೋಡಿನ ಮೀಸಲು ಅರಣ್ಯ ಪ್ರದೇಶದ 100 ಎಕರೆ ಅಭಿವೃದ್ಧಿ ಪಡಿಸುವ ಪ್ರಸ್ತಾವನೆ ಇದೆ. ಇದಕ್ಕಾಗಿ ನಿಯಮಗಳಲ್ಲಿ ಬದಲಾವಣೆ ತರಬೇಕಿದೆ. ಮೀಸಲು ಅರಣ್ಯದಿಂದ ಕೈ ಬಿಟ್ಟಲ್ಲಿ 10 ಕೋಟಿ ರೂ. ಅನುದಾನ ತಂದು ಅಭಿವೃದ್ಧಿಪಡಿಸುತ್ತೇನೆ ಎಂದರು.

     ಸಭೆಯಲ್ಲಿ ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆದ್ದಾರಿ ಪ್ರಾಧಿಕಾರದ ವ್ಯವಸ್ಥಾಪಕ (ತಾಂತ್ರಿಕ) ಮಲ್ಲಿಕಾರ್ಜುನ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap