ತುರುವೇಕೆರೆ:
ಕೋವಿಡ್-19 ನಂತ ಆರ್ಥಿಕ ಸಂಕಷ್ಟದ ನಡುವೆಯೂ ಸಹಾ ತಾಲೂಕಿನ 40ಕ್ಕೂ ಹೆಚ್ಚು ಶಾಲೆಗಳ 87 ತರಗತಿ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರ ಅನುದಾನ ಮುಂಜೂರು ಮಾಡಿರುವುದು ಶ್ಲಾಘನೀಯ ಎಂದು ಶಾಸಕ ಮಸಾಲ ಜಯರಾಂ ಹೇಳಿದರು.
ಪಟ್ಟಣದ ಜೆ.ಪಿ. ಕಾನ್ವೆಂಟ್ ಆವರಣದಲ್ಲಿ ಶನಿವಾರ ತಾಲ್ಲೂಕು ಕ್ಷೇತ್ರ ಶಿಕ್ಷಣ ಇಲಾಖೆ ಹಾಗು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಮತ್ತು ಡಾ.ಸರ್ವಪಲ್ಲಿ ರಾಧಾಕೃಷ್ಣನ್ರ ಜನ್ಮದಿನಾಚರಣೆಯ ಸರಳ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೈದ್ಯರು, ವಿಜ್ಞಾನಿಗಳು, ರಾಜಕಾರಣಿಗಳು, ತಂತ್ರಜ್ಞರು, ಕ್ರೀಡಾಪಟುಗಳು, ವಕೀಲರು ಹೀಗೆ ಸಮಾಜದ ವಿವಿಧ ಕ್ಷೇತ್ರದ ಸಾಧನೆಗೆ ಸಹಕಾರಿಗಳಾದ ವ್ಯಕ್ತಿಗಳನ್ನು ನಿರ್ಮಾಣ ಮಾಡುವ ಗುರುವಿನ ಅಥವಾ ಶಿಕ್ಷಕರ ಜ್ಞಾನ ಪರಂಪರೆಯನ್ನು ಯಾರೂ ಎಂದಿಗೂ ಮರೆಯುವಂತಿಲ್ಲ. ಸಮಾಜವನ್ನು ಹಾಗು ಯುವ ಪೀಳಿಗೆಯನ್ನು ತಿದ್ದಿ ಸರಿದಾರಿಗೆ ತರುವ ಶಿಕ್ಷಕರ ಕೆಲಸ ಅನನ್ಯ ಎಂದು ಬಣ್ಣಿಸಿದರು. ಕಳೆದ ಬಾರಿಗಿಂತ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತುರುವೇಕೆರೆ ತಾಲ್ಲೂಕು ಉತ್ತಮ ಫಲಿತಾಂಶ ಬಂದಿದ್ದು ಇದಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಜಿಲ್ಲಾ ತುಮುಲ್ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ಮಾತನಾಡಿ ಕೋವಿಡ್-19 ತಂದೊಡ್ಡಿದ್ದ ಬಾರಿ ಬಿಕ್ಕಟ್ಟಿನಿಂದ ಶೈಕ್ಷಣಿಕ ಕ್ಷೇತ್ರದ ಮೇಲೂ ಹೆಚ್ಚಿನ ಪರಿಣಾಮಗಳನ್ನು ಬೀರಿದೆ. ಶಿಕ್ಷಣ ಇಲಾಖೆ ಮಕ್ಕಳಿಗೆ ನೀಡುತ್ತಿರುವ ಆನ್ಲೈನ್ ಶಿಕ್ಷಣ ವ್ಯವಸ್ಥೆಯು ಮಕ್ಕಳ ಕಲಿಕೆಗೆ ಸಮರ್ಪಕವಾಗಿಲ್ಲ. ಮತ್ತೊಂದೆಡೆ ಕೊರೊನಾ ಭೀತಿಯಿಂದ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರು ಆತಂಕಪಡುವಂತಾಗಿದೆ ಎಂದರು.
ಈ ಸಂದರ್ಬದಲ್ಲಿ ವಿವಿಧ ಕ್ಷೇತ್ರಗಳ ಸಾಧಕ ಶಿಕ್ಷಕರುಗಳಾದ ಎ.ಆರ್.ಲತಾ, ಗಂಗಮ್ಮ ಮತ್ತು ಮಹಾಲಿಂಗಪ್ಪ ಅವರಗಳನ್ನು ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ರಂಗಧಾಮಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಸಮಾರಂಭದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ನಾಗರತ್ನರವಿಕುಮಾರ್, ಸದಸ್ಯ ನಂಜೇಗೌಡ, ಪ.ಪಂ ಸದಸ್ಯ ಚಿದಾನಂದ್, ಕಸಾಪ ತಾಲ್ಲೂಕು ಅಧ್ಯಕ್ಷ ನಂ.ರಾಜು, ಮುಖಂಡ ಕೊಂಡಜ್ಜಿವಿಶ್ವನಾಥ್, ತಾ.ಪಂ.ಮಾಜಿಸದಸ್ಯ ರಮೇಶ್ಗೌಡ, ಸೋಮಣ್ನ, ಮುದ್ದೇಗೌಡ, ಸುರೇಶ್ ಇ.ಓ.ಜಯಕುಮಾರ್, ಪ.ಪಂ.ಮುಖ್ಯಸ್ಥೆ ಮಂಜುಳಾದೇವಿ, ಬಿಆರ್.ಸಿ. ವಸಂತ್ಕುಮಾರ್, ಬೋರಪ್ಪ, ಪರಮೇಶ್, ಸಿದ್ರಾಮಯ್ಯ, ಚಂದಯ್ಯ, ಚಿದಾನಂದಮೂರ್ತಿ, ನಾಗರಾಜು ಪಾಲೊಂಡಿದ್ದರು. ವಸಂತ್ಕುಮಾರ್ ನಿರೂಪಿಸಿ, ಸಿದ್ದಯ್ಯ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ