ದಾವಣಗೆರೆ
ಇತ್ತೀಚೆಗೆ ಕೊಡಗು ಮತ್ತು ಮಡಿಕೇರಿಯಲ್ಲಿ ಸುರಿದ ಮಳೆಯಿಂದಾಗಿ ಬೀದಿಪಾಲಾಗಿರುವ ನೆರೆ ಸಂತ್ರಸ್ಥರಿಗಾಗಿ ಸಂಗ್ರಹಿಸುತ್ತಿರುವ ಸಂತ್ರಸ್ಥರ ನಿಧಿ ಹಾಗೂ ಇತರೆ ವಸ್ತುಗಳನ್ನು ಜಿಲ್ಲಾಡಳಿತಕ್ಕೆ ಅಥವಾ ನೇರವಾಗಿ ಸಂತ್ರಸ್ಥರಿಗೆ ತಲುಪಿಸಬೇಕೆಂದು ಜಿಲ್ಲಾ ಯೋಗ ಒಕ್ಕೂಟದ ಕಾರ್ಯದರ್ಶಿ ವಾಸುದೇವ ರಾಯ್ಕರ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಭಾಗಗಳಿಂದ ನೆರೆ ಸಂತ್ರಸ್ಥರಿಗೆ ವಿವಿಧ ಸಂಘ-ಸಂಸ್ಥೆ, ಸಾರ್ವಜನಿಕರಿಂದ ಪರಿಹಾರದ ಹಣ, ವಸ್ತುಗಳು ಸಾಕಷ್ಟು ಬರುತ್ತಿದ್ದು, ಇವುಗಳನ್ನು ನಾವೇ ತಲುಪಿಸುತ್ತೇವೆಂದು ಕೆಲವು ಮಧ್ಯವರ್ತಿಗಳು ಮುಂದೆ ಬರುತ್ತಿದ್ದಾರೆ. ಅವರನ್ನು ನಂಬಬೇಡಿ. ಬದಲು ನೀವೇ ಜಿಲ್ಲಾಡಳಿತ ಇಲ್ಲವೇ, ಸಂತ್ರಸ್ಥರಿಗೆ ನೇರವಾಗಿ ತಲುಪಿಸಿ ಎಂದು ಸಲಹೆ ನೀಡಿದರು.
ಮಡಿಕೇರಿ, ಕೊಡಗು ಸುತ್ತಮುತ್ತದ ಜನತೆ ಭಾರೀ ಸಂಕಷ್ಟ ಎದುರಿಸುತ್ತಿದ್ದಾರೆ. ಮಳೆಯಿಂದ ಹಲವಾರು ಮನೆಗಳು ಕೊಚ್ಚಿಕೊಂಡು ಹೋಗಿವೆ. ಹೊಟ್ಟೆಗೆ ಊಟ, ತೊಡಲು ಬಟ್ಟೆ ಇರಲು ಸ್ಥಳ ಇಲ್ಲದಂತಾಗಿದೆ. ಇನ್ನೂ ಕೆಲವು ಕಡೆ ಇಕ್ಕಟ್ಟಿನ ಪ್ರದೇಶಗಳಲ್ಲಿ ಸಂತ್ರಸ್ತರು ಸಿಲುಕಿದ್ದಾರೆ. ಅವರಿಗೆ ಅಗತ್ಯ ಸಾಮಾಗ್ರಿಗಳನ್ನು ತಲುಪಿಸುವ ಕಾರ್ಯ ನಡೆಯಬೇಕಿದೆ ಎಂದರು.
ಕುಶಾಲನಗರ, ಸುಂಟಿಕೊಪ್ಪ, ಮಾದಾಪುರ, ಗರ್‍ವಾಲಿ, ಬೆಟ್ಟದಳ್ಳಿ, ಗಾಳಿಬಿಡು ಮೂರ್‍ತೊಪ್ಲು ಸುತ್ತಮುತ್ತ ಬಾರಿ ಹಾನಿಯುಂಟಾಗಿದೆ. ಇಲ್ಲಿನ ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕಾಗಿದೆ. ಕೆಲವು ಸಂತ್ರಸ್ತರಿಗೆ ಸಾಮಾಗ್ರಿಗಳು ದೊರೆತರೆ ಇನ್ನೂ ಕೆಲವರಿಗೆ ದೊರೆಯುತ್ತಿಲ್ಲ. ಇಕ್ಕಟ್ಟಾದ ಪ್ರದೇಶಗಳಿಗೆ ತೆರಳಿ ಆಹಾರ ಸಾಮಗ್ರಿಗಳನ್ನು ತಲುಪಿಸಬೇಕು ಎಂದರು.
ನಿರಾಶ್ರಿತರಿಗೆ ಬಟ್ಟೆ ಆಹಾರ ತಲುಪಿಸುವ ಕಾರ್ಯದ ಜೊತೆಗೆ ವಿದ್ಯುತ್, ರಸ್ತೆ ಸಂಪರ್ಕಿಸುವ ಕೆಲಸ ನಡೆಯಬೇಕಿದೆ. ಮನೆಗಳ ನಿರ್ಮಾಣದ ಕೆಲಸಗಾರರ ಅಗತ್ಯ ಹೆಚ್ಚು ಇದೆ. ಅಗತ್ಯವಾಗಿ ಮನೆಗಳ, ಶೌಚಾಲಯ ನಿರ್ಮಾಣಗೊಳ್ಳಬೇಕಿವೆ. ಈ ನಿಟ್ಟಿನಲ್ಲಿ ಸೇವಾ ಸಂಸ್ಥೆಯವರು, ಸರಕಾರ ಕ್ರಮಕೈಗೊಳ್ಳಬೇಕು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಕಾಶ ಉತ್ತಂಗಿ, ಮಹಾಂತೇಶ್, ಅನಿಲ್ ರಾಯ್ಕರ್, ಜಯಣ್ಣ ಬಾದಾವಿ, ನಿರಂಜನ, ಮಾದೇಗೌಡ್ರ ಸೇರಿದಂತೆ ಮತ್ತಿತರರು ಇದ್ದರು.