ದಾವಣಗೆರೆ:
ದೇಶದ ಪವಿತ್ರ ಗ್ರಂಥವಾಗಿರುವ ಸಂವಿಧಾನವನ್ನು ಸುಟ್ಟ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಆ ಸಮಾಜಘಾತುಕ ಶಕ್ತಿಗಳ ಹಿಂದಿರುವ ಸಂಘಟನೆಗಳನ್ನು ನಿಷೇಧ ಮಾಡಬೇಕೆಂದು ಒತ್ತಾಯಿಸಿ, ಸಂವಿಧಾನ ಉಳಿಸಿ ಹೋರಾಟ ಸಮಿತಿಯಿಂದ ಸೆ.10ರಂದು ನಗರದಲ್ಲಿ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಹೆಚ್.ಕೆ.ರಾಮಚಂದ್ರಪ್ಪ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟು, ಜಯದೇವ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಬಹಿರಂಗ ಸಭೆ ನಡೆಸಿ ಬಳಿಕ ಎಸಿ ಕಚೇರಿಗೆ ತೆರಳಿ ಉಪ ವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು. ಆದ್ದರಿಂದ ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಹಲವರು ಸೇರಿ ರಚಿಸಿರುವ ಸಂವಿಧಾನವು ಸಮ ಸಮಾಜ ನಿರ್ಮಾಣಕ್ಕಾಗಿ ಸರ್ವರಿಗೂ ಸಮಾನ ಹಕ್ಕುಗಳನ್ನು ಹಾಗೂ ಅವಕಾಶ ನೀಡಿದೆ. ಇದು ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಧರ್ಮಿಯರ ಪವಿತ್ರ ಗ್ರಂಥವಾಗಿದೆ. ಆದರೆ, ಮನುವಾದಿ ದೇಶದ್ರೋಹಿಗಳು, ನಮಗೆ ಅಂಬೇಡ್ಕರ್ ಬರೆದ ಸಂವಿಧಾನ ಬೇಡ, ಮನುಸ್ಮøತಿಯೇ ಸಂವಿಧಾನ ಆಗಬೇಕೆಂಬುದಾಗಿ ಬಯಸಿ ಕಳೆದ ಆಗಸ್ಟ್ 10 ರಂದು ನವದೆಹಲಿಯ ಜಂತರ್ ಮಂಥರ್‍ನಲ್ಲಿ ದೇಶದ ಪವಿತ್ರ ಗ್ರಂಥವಾಗಿರುವ ಸಂವಿಧಾನವನ್ನು ಸುಟ್ಟು ಹಾಕಿ ಅಟ್ಟಹಾಸ, ಉದ್ಧಟತನ ಮೆರೆದಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಸಚಿವ ಸಂಪುಟದಲ್ಲಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ನಾವು ಸಂವಿಧಾನ ಬದಲಿಸಲಿಕ್ಕಾಗಿಯೇ ಅಧಿಕಾರಕ್ಕೆ ಬಂದಿದ್ದೇವೆ. ಗಡ್ಡ ಬಿಡುವವರು, ಬುರುಕಾ ಉಡುವವರು ನಮ್ಮ ದೇಶದಲ್ಲಿ ಇರಲು ಅವಕಾಶವಿಲ್ಲ ಎನ್ನುತ್ತಾರೆ. ಮಧ್ಯ ಪ್ರದೇಶದ ಕೇಂದ್ರ ಸಚಿವರೊಬ್ಬರು ಗೋಡ್ಸೆಗೂ ಮುಂಚೆ ನಾನು ಹುಟ್ಟಿದ್ದರೆ, ಗಾಂಧಿಯನ್ನು ನಾನೆ ಕೊಲ್ಲುತ್ತಿದೆ ಎಂದಿರುವುದಲ್ಲದೇ, ಗಾಂಧಿಗೆ ನೀಡಿರುವ ರಾಷ್ಟ್ರಪತಿ ಪದವಿಯನ್ನು ತಗೆದು ಹಾಕಬೇಕೆಂದು ಒತ್ತಾಯಿಸುತ್ತಾರೆ. ಇನ್ನೂ ಬಸವರಾಜ ಪಾಟೀಲ್ ಯತ್ನಾಳ್ ಅಂತೂ ಕೇರಳ ಕೊಚ್ಚಿ ಹೋಗಲು ಗೋಹತ್ಯೆ ಕಾರಣ ಎನ್ನುತ್ತಾರೆ. ಗುಜರಾತ್‍ನಲ್ಲಿ ಎಸ್ಸಿ ಮಹಿಳೆಯ ಬೆತ್ತಲೆ ಮೆರವಣಿಗೆ ನಡೆಸಲಾಗಿದೆ. ಇನ್ನೂ ಆರ್‍ಎಸ್‍ಎಸ್‍ಮ ಸರ ಸಂಚಾಲಕ ಮೋಹನ್ ಭಾಗವತ್ ಮೀಸಲಾತಿ ಪುನರ್ ಪರಿಶೀಲನೆ ಆಗಬೇಕೆಂದು ಅಫಿಡಿವೇಟ್ ಸಲ್ಲಿಸಿದ್ದಾರೆ. ಹೀಗೆ ಕಳೆದ ನಾಲ್ಕು ವರ್ಷ ಅವಧಿಯಲ್ಲಿ ಪ್ರಧಾನಿ ಮೋದಿಯ ಮೂಗಿನ ಅಡಿಯಲ್ಲೇ ಹಲವು ಕೃತ್ಯಗಳು ನಡೆದರೂ ಸಹ ಪ್ರಧಾನಿ ನರೇಂದ್ರ ಮೋದಿ ಚಕಾರ ಎತ್ತುವುದಿಲ್ಲ. ಆದರೆ, ಈ ಮೇಲಿನ ಎಲ್ಲರಿಗೂ ಪರೋಕ್ಷವಾಗಿ ಸಹಕಾರ ನೀಡುತ್ತಲೇ ಬಂದಿದ್ದಾರೆಂದು ಆರೋಪಿಸಿದರು.
ಇತ್ತೀಚೆಗೆ ವರವರರಾವ್, ಸುಧಾ ಭಾರದ್ವಾಜ್ ಸೇರಿದಂತೆ ಐವರನ್ನು ಅರ್ಬನ್ ನಕ್ಸಲರೆಂದು ಬಂಧಿಸುವ ಮೂಲಕ ಸಮಾನತೆಯ ಬಗ್ಗೆ ಮಾತನಾಡುವವರು ಹಾಗೂ ಹಿಂಸೆಯನ್ನು ವಿರೋಧಿಸುವವರ ಬಾಯಿ ಮುಚ್ಚಿಸುವ ಹುನ್ನಾರ ನಡೆಯಿತು. ಇದಕ್ಕೆ ಕೇಂದ್ರ ಸರ್ಕಾರದ ಕುಮ್ಮಕ್ಕು ಇದೆ ಎಂದು ಆಪಾದಿಸಿದರು.
ಹಿರಿಯ ನ್ಯಾಯವಾದಿ ರಾಮಚಂದ್ರ ಕಲಾಲ್ ಮಾತನಾಡಿ, ನಮ್ಮ ದೇಶ 1950ರ ಜನವರಿ 26ರಂದು ಸಂವಿಧಾನವನ್ನು ಅಪ್ಪಿಕೊಂಡು, ಒಪ್ಪಿಕೊಂಡ ನಂತರ ಏಳು ದಶಕಗಳ ನಂತರ ಸಂವಿಧಾನ ಉಳಿಸಿ ಎಂಬುದಾಗಿ ದನಿ ಎತ್ತುವ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ದುರ್ದೈವದ ಸಂಗತಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಎಲ್ಲಾ ಧರ್ಮಗಳ ಗ್ರಂಥಗಳಿಗೆ ರಕ್ಷಣೆ ನೀಡುವ, ಎಲ್ಲಾ ಧರ್ಮೀಯರ ಪವಿತ್ರ ಗ್ರಂಥ ಸಂವಿಧಾನವನ್ನು ದುಷ್ಕರ್ಮಿಗಳು ಸುಟ್ಟು ಹಾಕಿದ್ದಾರೆ. ಹೀಗಾಗಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿರುವ ಸಂವಿಧಾನಕ್ಕೆ ಕುತ್ತು ಬಂದಿದ್ದು, ಇದರ ರಕ್ಷಣೆಗೆ ಎಲ್ಲರೂ ಮುಂದಾಗಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಹುಸೇನ್, ಕೆ.ಎಲ್.ಭಟ್, ಆವರಗೆರೆ ಚಂದ್ರು, ಪಿ.ಷಣ್ಮುಖಸ್ವಾಮಿ, ಹೆಚ್.ಮಲ್ಲೇಶ್, ಜಯಣ್ಣ ಜಾಧವ್, ಹೆಚ್.ದುರುಗೇಶ್ ಗುಡಿಗೇರಿ, ತಿಪ್ಪೇರುದ್ರಪ್ಪ, ಆವರಗರೆ ರಂಗನಾಥ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ