ದಾವಣಗೆರೆ:
ಶಿಕ್ಷಕರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕಾದ ಅವಶ್ಯಕತೆ ಇದೆ ಎಂದು ಶಾಸ್ತ್ರಿಹಳ್ಳಿಯ ಶ್ರೀಸತ್ಯಸಾಯಿ ವಿದ್ಯಾನಿಕೇತನ ಮುಖ್ಯೋಪಾಧ್ಯಾಯ ಜಗನ್ನಾಥ್ ನಾಡಿಗೇರ್ ಅಭಿಪ್ರಾಯಪಟ್ಟರು.
ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂದಿರದಲ್ಲಿ ಶನಿವಾರ ಖಾಸಗಿ ಅನುದಾನಿತ ಪ್ರಾಥಮಿಕ ಶಾಲೆ, ಶಾಲಾ ಮುಖ್ಯ ಶಿಕ್ಷಕರ ಸಂಘ, ತಾಲ್ಲೂಕು ಘಟಕ ಉತ್ತರ ವಲಯ ಮತ್ತು ವಾಸವಿ ಕ್ಲಬ್ ದೇವನಗರಿ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಹಾಗೂ 2018ನೇ ಸಾಲಿನ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಯುತ ಹಾಗೂ ಸಂಸ್ಕಾರಯುತ ಶಿಕ್ಷಣದ ಕೊರತೆ ಇದೆ. ಆದ್ದರಿಂದ ಇಂದಿನ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿವೆ. ಆದ್ದರಿಂದ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕಾಗಿರುವುದು ಅತ್ಯವಶ್ಯವಾಗಿದೆ ಎಂದರು.
ವಿದ್ಯಾರ್ಥಿಗಳ ಯಶಸ್ಸಿಗಾಗಿ ಯೋಚನೆ ಮಾಡುವವರು ಶಿಕ್ಷಕರು ಮಾತ್ರ. ಹೀಗಾಗಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಸುಸಂಸ್ಕೃತಿಯನ್ನು ಸಹ ಕಲಿಸಬೇಕಾಗಿದೆ. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಪೂರಕವಾದ ವಾತಾವರಣ ಶಾಲೆಗಳಲ್ಲಿ ಇರಬೇಕು ಎಂದರು.
ಹಿಂದಿನ ಮೌಲ್ಯಯುತ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಇದ್ದವು. ಆದರೆ, ಇಂದು ಮೌಲ್ಯಗಳ ಅಧಃಪತನಗೊಂಡಿರುವ ಕಾರಣ ಸಮಾಜದಲ್ಲಿ ವಿಭಕ್ತ ಕುಟುಂಬಗಳು ಹೆಚ್ಚಾಗಿವೆ. ಹೀಗಾಗಿ ಮಕ್ಕಳು ಗುರು-ಹಿರಿಯರಿಗೆ ಗೌರವ ನೀಡದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ವಿಜ್ಞಾನಿ, ಕಲಾವಿದ, ಕವಿಯಾಗಬೇಕಾದರೆ ವಿದ್ಯಾರ್ಥಿಗಳು ಒಂದು ವಸ್ತುವಿನ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಯೋಚನೆ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಶಾಲೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು ಆಗ ಆಂತರಿಕ ಪರಿಸರ ಚೆನ್ನಾಗಿರುತ್ತದೆ. ವಿದ್ಯಾರ್ಥಿಗಳು ಕೌಶಲ್ಯತೆಯನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಶಾಲೆ ಸಾಧ್ಯತೆಗಳ ಪ್ರಯೋಗಶಾಲೆಯಾಗಬೇಕು ಎಂದು ಹೇಳಿದರು.
ವಾಸವಿ ಕ್ಲಬ್ ದೇವನಗರಿಯ ಅಧ್ಯಕ್ಷ ಕೆ.ಜೆ.ಪ್ರಸಾದ್ ಮಾತನಾಡಿ, ಸಮಾಜವನ್ನು ತಿದ್ದುವ ಶಕ್ತಿ ಶಿಕ್ಷಕರಲ್ಲಿದೆ. ಶಾಲೆ ಮತ್ತು ಸಮಾಜ ಮೇಲ್ದರ್ಜೆಗೆ ಏರಬೇಕೆಂದರೆ, ಶಿಕ್ಷಕರು ಅತ್ಯವಶ್ಯಕ. ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ತಮ್ಮ ಒತ್ತಡದ ಜೀವನದಲ್ಲಿ ಸಾಗಿಸುತ್ತಾರೆ. ಇಂದು ವಾಸವಿ ಕ್ಲಬ್ ದೇವನಗರಿಯಿಂದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.ಈ ವೇಳೆಯಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅನುದಾನಿಕ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಉತ್ತರ ವಲಯದ ಅಧ್ಯಕ್ಷ ಬಿ.ಎಸ್.ಕಲ್ಲಪ್ಪ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬಿ.ಕೆ.ಗೀತಕ್ಕ, ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಉಷಾಕುಮಾರಿ, ಚಂದ್ರಕುಮಾರ್ ಶೆಟ್ಟಿ,ರೇಖಾ ಅಂಜಿನಿ ಪ್ರಸಾದ್, ಬಿ.ಕೆ.ನಾಗರಾಜ್,ಎ.ಕೆ.ಮಂಜಪ್ಪ, ಬಿ.ಹನುಮಂತನಾಯ್ಕ್, ಶ್ರೀನಿವಾಸ್ ಮತ್ತಿತರರಿದ್ದರು