ಸಚಿವರ ಮೌಲ್ಯ ಮಾಪನ ನಡೆಸುವಂತೆ ಕಾಂಗ್ರೆಸ್ ಅಧ್ಯಕ್ಷರ ಸೂಚನೆ

ಬೆಂಗಳೂರು:

ಮೈತ್ರಿ ಸರ್ಕಾರ ಶತಕ ಪೂರೈಸುತ್ತಿದ್ದಂತೆ ಕಾಂಗ್ರೆಸ್ ಸಚಿವರ ಮೌಲ್ಯ ಮಾಪನ ನಡೆಸುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಸಮರ್ಪಕವಾಗಿ ಕೆಲಸ ಮಾಡದ ಸಚಿವರನ್ನು ಕೈ ಬಿಡುವ ಇಲ್ಲವೆ ಖಾತೆಗಳಲ್ಲಿ ಬದಲಾವಣೆ ಮಾಡುವ ಉದ್ದೇಶ ಹೊಂದಿದ್ದು, ಈ ಬೆಳವಣಿಗೆಯಿಂದ ಸಚಿವರಲ್ಲಿ ನಡುಕ ಆರಂಭವಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದ ನಂತರ ಸಚಿವರ ಮೌಲ್ಯ ಮಾಪನ ನಡೆಯಲಿದ್ದು, ಸಚಿವರುಗಳಿಗೆ ಅಂಕ ನಿಗದಿ ಮಾಡಲಿದ್ದಾರೆ. ಉತ್ತೀರ್ಣರಾದರೆ ಸಚಿವರಾಗಿ ಮುಂದುವರೆಯಲಿದ್ದಾರೆ. ವಿಫಲಗೊಂಡರೆ ಮನೆಗೆ ಕಳುಹಿಸುವ ಆಲೋಚನೆ ಹೈಕಮಾಂಡ್‍ನದ್ದಾಗಿದೆ.

ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ್ ಮೌಲ್ಯ ಮಾಪನ ನಡೆಯುವುದನ್ನು ಖಚಿತಪಡಿಸಿದ್ದಾರೆ. ರಾಹುಲ್‍ಗಾಂಧಿ ಅವರ ಸೂಚನೆ ಮೇರೆಗೆ ಸಚಿವರ ಮೌಲ್ಯಮಾಪನದ ಪರಿಶೀಲನೆ ಪ್ರಗತಿಯಲ್ಲಿದ್ದು, ಅವರು ಕೇಳುವ ಮೊದಲೇ ನಾವು ವರದಿಯನ್ನು ಸಿದ್ಧಪಡಿಸುತ್ತೇವೆ ಎಂದಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ ಉಸ್ತುವಾರಿ ನೋಡಿಕೊಳ್ಳುವ ಕೆ.ಸಿ. ವೇಣುಗೋಪಾಲ್ ಅವರು, ಸೆಪ್ಟೆಂಬರ್ 1 ರಿಂದ ಎರಡು ದಿನಗಳ ಮಹತ್ವದ ಸಭೆ ನಡೆಸಲಿದ್ದಾರೆ. ಪ್ರತಿ ಮೂರು ಹಾಗೂ ಆರು ತಿಂಗಳಲ್ಲಿ ಸಚಿವರ ಮೌಲ್ಯಮಾಪನ ನಡೆಸಲು ವರಿಷ್ಠರು ಸೂಚಿಸಿದ್ದಾರೆ. ಅದರಂತೆ ಮೌಲ್ಯಮಾಪನದ ಜತೆಗೆ ಮುಂಬರುವ ಲೋಕಸಭಾ ಚುನಾವಣಾ ಸಿದ್ಧತೆಗಳ ಬಗ್ಗೆಯೂ ಈ ಸಭೆಯಲ್ಲಿ ಮಹತ್ವದ ಸಮಾಲೋಚನೆ ನಡೆಯಲಿದೆ.

ಈ ಹಿಂದೆ ಸಂಪುಟ ವಿಸ್ತರಣೆ ಸಂಬಂಧ ಅಸಮಾಧಾನದ ಭುಗಿಲೆದ್ದಾಗ ಸ್ವತಃ ರಾಹುಲ್‍ಗಾಂಧಿ ಅವರು ಮೂರು ತಿಂಗಳ ನಂತರ ಸಚಿವರ ಮೌಲ್ಯಮಾಪನ ನಡೆಸಲಾಗುವುದು. ಉತ್ತಮ ಸಾಮಥ್ರ್ಯ ತೋರದ ಸಚಿವರನ್ನು ಸ್ಥಾನದಿಂದ ಕೆಳಗೆ ಇಳಿಸಿ ನಿಮಗೆ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಮುಂದಿನ ತಿಂಗಳು ಎಲ್ಲ ಸಚಿವರ ಮೌಲ್ಯಮಾಪನದ ಪಟ್ಟಿ ಎಐಸಿಸಿ ಅಧ್ಯಕ್ಷರ ಕೈಗೆ ಸಿಗಲಿದೆ.
ಈಗಾಗಲೇ ಕಾಂಗ್ರೆಸ್ ಸಚಿವರ ಕಾರ್ಯವೈಖರಿಯ ಬಗ್ಗೆ ರಾಜ್ಯದಲ್ಲಿನ ಹಿರಿಯ ನಾಯಕರು ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಆದರೆ ಸಚಿವರ ಮೌಲ್ಯಮಾಪನಕ್ಕೆ ಕೆಲವು ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಸರ್ಕಾರ ರಚನೆಯಾಗಿ ಇದೀಗ ನೂರು ದಿನಗಳು ಕಳೆದಿವೆ. ಇಲಾಖೆಯ ನಿರ್ವಹಣೆಯ ಬಗ್ಗೆ ಈಗ ಒಂದೆರಡು ಸಭೆ ನಡೆಸಲಾಗಿದೆ. ಇನ್ನೂ ತಿಳಿದುಕೊಳ್ಳುವುದು ಬಹಳಷ್ಟು ಇದೆ. ಎಲ್ಲವನ್ನೂ ತಿಳಿದುಕೊಳ್ಳುವುದಕ್ಕೆ ಇನ್ನೂ ಕಾಲಾವಕಾಶ ಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ನೆಪಗಳಿಗೆ ಅವಕಾಶ ಕಲ್ಪಿಸದಿರಲು ವರಿಷ್ಠರು ತೀರ್ಮಾನಿಸಿದ್ದಾರೆ.

ಅನಿಶ್ಚಿತತೆಗೆ ತೆರೆ: ಸಮ್ಮಿಶ್ರ ಸರ್ಕಾರ ಭವಿಷ್ಯದ ಬಗ್ಗೆ ಚರ್ಚೆಗಳು ಆರಂಭವಾಗುತ್ತಿರುವ ಬೆನ್ನಲ್ಲೇ, ವೇಣುಗೋಪಾಲ್ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಈ ಕುರಿತ ಆತಂಕಗಳನ್ನು ದೂರ ಮಾಡುವ ಸಾಧ್ಯತೆಗಳಿವೆ.

ಸಮ್ಮಿಶ್ರ ಸರ್ಕಾರಕ್ಕೆ 100 ದಿನ ತುಂಬುತ್ತಿರುವುದರಿಂದ ಹಾಗೂ ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ವೇಣುಗೋಪಾಲ್ ಈ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಲಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಬದಲಾಗಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ
ಮುಖ್ಯಮಂತ್ರಿಯಾಗಲಿದ್ದಾರೆ. ಈ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರ ಪಡೆದು ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಕಳವಳಗಳನ್ನು ವೇಣುಗೋಪಾಲ್ ನಿವಾರಿಸಲಿದ್ದಾರೆ.

ಸಂಪುಟ ವಿಸ್ತರಣೆ ಬಗ್ಗೆಯೂ ಮಹತ್ವದ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದ್ದು, ಹಿರಿಯ ನಾಯಕರಾದ ರಾಮಲಿಂಗಾ ರೆಡ್ಡಿ, ಹೆಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್ ಅವರಿಗೆ ಸಂಪುಟದಲ್ಲಿ ಅವಕಾಶ ದೊರೆಕಿಸಿಕೊಡುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಹಿರಿಯ ಸಚಿವರ ಖಾತೆಗಳಲ್ಲೂ ಬದಲಾವಣೆ ಮಾಡುವ ಕುರಿತಂತೆಯೂ ವರಿಷ್ಠರಿಗೆ ವರದಿ ನೀಡುವ ನಿರೀಕ್ಷೆಯಿದೆ.

ಉತ್ತರ ಕರ್ನಾಟಕ ಭಾಗದ ಶಾಸಕರು ಹಾಗೂ ಮುಖಂಡರು ಸಮ್ಮಿಶ್ರ ಸರ್ಕಾರ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡಿರುವ ಹಿನ್ನೆಲೆಯಲ್ಲಿ ವೇಣುಗೋಪಾಲ್ ಅವರು ಉತ್ತರ ಕರ್ನಾಟಕ ಜಿಲ್ಲೆಗಳ ಶಾಸಕರು ಮತ್ತು ಮುಖಂಡರ ಜೊತೆಯೂ ಪ್ರತ್ಯೇಕ ಸಭೆ ನಡಸಿ ಪರಿಹಾರ ಸೂತ್ರವನ್ನು ರೂಪಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಬಾಕ್ಸ್

ಮೈತ್ರಿ ಸರ್ಕಾರ ಸುಭದ್ರವಾಗಿದ್ದು, ಯಾವುದೇ ಆತಂಕ ಬೇಡ, ಸಮ್ಮಿಶ್ರ ಸರ್ಕಾರವಿದ್ದಾಗ ಆಂತಂಕದ ಬಗ್ಗೆ ಮಾತುಗಳು ಕೇಳಿ ಬರುವುದು ಸಹಜ. ಶ್ರಾವಣ ನಂತರ ಸರ್ಕಾರ ಪತನವಾಗಲಿದೆ ಎಂಬುದು ಸರಿಯಲ್ಲ. ಶ್ರಾವಣ ಬಳಿಕ ಬಾದ್ರಪದ, ನಂತರ ಕಾರ್ತಿಕಾ ಕೂಡ ಬರುತ್ತದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap