ಸಚಿವ ಪ್ರಿಯಾಂಕ್‌ ಖರ್ಗೆಗೆ ಬೆದರಿಕೆ ಕರೆ, ಆಡಿಯೋ ರೆಕಾರ್ಡ್‌ ರಿಲೀಸ್‌ ಮಾಡಿದ ಖರ್ಗೆ

ಬೆಂಗಳೂರು:

     ರಾಜ್ಯದಲ್ಲಿ ಆರ್‌ಎಸ್‌ಎಸ್‌  ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಸಚಿವ ಪ್ರಿಯಾಂಕ ಖರ್ಗೆ  ಅವರು ಸಿಎಂ ಸಿದ್ದರಾಮಯ್ಯ  ಅವರಿಗೆ ಪತ್ರ ಬರೆದಿದ್ದರು. ಆ ಬಳಿಕ ತಮಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ಇತ್ತೀಚಿಗೆ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದರು. ಇದೀಗ ತಮಗೆ ಬಂದಿರುವ ಬೆದರಿಕೆ ಕರೆಯೊಂದನ್ನು ರೆಕಾರ್ಡ್‌ ಮಾಡಿಕೊಂಡಿರುವ ಸಚಿವ ಪ್ರಿಯಾಂಕ ಖರ್ಗೆ, ಅದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ರಿಲೀಸ್ ಮಾಡಿದ್ದಾರೆ. ಜೊತೆಗೆ ಅದಕ್ಕೆ ತಮ್ಮ ಪ್ರತಿಕ್ರಿಯೆಯನ್ನು ಕೂಡ ವಿಡಿಯೋ ಮಾಡಿದ್ದಾರೆ.

   ಹಿಂದಿಯಲ್ಲಿ ಕರೆ ಮಾಡಿ ಅಶ್ಲೀಲವಾಗಿ ನಿಂದನೆ ಮಾಡಿದ ಆಡಿಯೋ ರೆಕಾರ್ಡ್‌ ಅನ್ನು ಸಚಿವರು ರಿಲೀಸ್‌ ಮಾಡಿದ್ದಾರೆ. ಆರ್‌ಎಸ್‌ಎಸ್ ಶಾಖೆಯಲ್ಲಿ ಇದನ್ನೇ ಕಲಿಸುತ್ತಾರಾ? ಮೋಹನ್ ಭಾಗವತ್ ನಿಮಗೆ ಇದನ್ನೇ ಕಲಿಸುತ್ತಾರಾ? ಎಂದು ಕರೆ ಮಾಡಿದ ವ್ಯಕ್ತಿಗೆ ಪ್ರಿಯಾಂಕ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಆರ್‌ಎಸ್‌ಎಸ್ ಯುವಜನತೆಯ ಮನಸ್ಸಿನಲ್ಲಿ ಕಲ್ಮಶ ತುಂಬುತ್ತದೆ ಅಂತ ಹೇಳಿದ್ದೆ. ಆ ಕಲ್ಮಶ ಹೇಗಿರುತ್ತದೆ ಎಂಬುದಕ್ಕೆ ಇದು ಸಣ್ಣ ಉದಾಹರಣೆಯಾಗಿದೆ. ನಿರಂತರ ಕರೆಗಳ ಬಗ್ಗೆ ಇದೊಂದು ಸ್ಯಾಂಪಲ್ ಎಂದು ಅವರು ಎಕ್ಸ್‌ ಪೋಸ್ಟ್‌ ಮಾಡಿದ್ದಾರೆ.

   ಕೆಲವು ದಿನಗಳಿಂದ ನನಗೆ ನಿರಂತರವಾಗಿ ಬರುತ್ತಿರುವ ಬೆದರಿಕೆ ಮತ್ತು ನಿಂದನೆಯ ಕರೆಗಳಲ್ಲಿ ಇದೊಂದು ಸ್ಯಾಂಪಲ್ ಅಷ್ಟೇ. ತಾಯಿ, ಸಹೋದರಿಯರ ಹೆಸರು ಹಿಡಿದು ಅತ್ಯಂತ ತುಚ್ಚವಾಗಿ ನಿಂದಿಸುವುದೇ ಶಾಖೆಗಳಲ್ಲಿ ನೀಡುವ ಸಂಸ್ಕಾರವೇ? ಮೋದಿ ಹಾಗೂ ಮೋಹನ್ ಭಾಗವತ್ ಅವರ ತಾಯಿಯಂದಿರಿಗೆ ಇದೇ ಬಗೆಯಲ್ಲಿ ನಿಂದಿಸುವುದನ್ನು @BYVijayendra @RAshokaBJP @CTRavi_BJP @karkalasunil @mepratap @NswamyChalavadi ಮುಂತಾದ ಬಿಜೆಪಿ ನಾಯಕರು ಒಪ್ಪುತ್ತಾರೆಯೇ? 

   ಬಿಜೆಪಿ ನಾಯಕರ ಮಕ್ಕಳು ತಮ್ಮ ಭವ್ಯ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ, ಬಡವರ ಮಕ್ಕಳನ್ನು ಹೀಗೆ ನಿಂದಿಸುವುದಕ್ಕೆ, ಬೆದರಿಸುವುದಕ್ಕೆ ಮತ್ತು ಬಲಿಯಾಗುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನಾನು ದೂರು ನೀಡಿದರೆ ಆ ವ್ಯಕ್ತಿಯ ಬದುಕಿನಲ್ಲಿ ಹಾನಿಯಾಗುತ್ತದೆಯೇ ಹೊರತು ಆತನನ್ನು ಇಂತಹ ಮನಸ್ಥಿತಿಗೆ ತಳ್ಳಿದವರಿಗೆ ಯಾವ ಹಾನಿಯೂ ಆಗುವುದಿಲ್ಲ. ನಮ್ಮದು ವ್ಯಕ್ತಿಗಳ ವಿರುದ್ಧದ ಹೋರಾಟವಲ್ಲ, RSS ಪಸರಿಸುತ್ತಿರುವ ಈ ಕೊಳಕು ಮನಸ್ಥಿತಿಯ ವಿರುದ್ಧದ ಹೋರಾಟ. ಮುಗ್ದರನ್ನು ಬ್ರೈನ್ ವಾಶ್ ಮಾಡಿ ಅವರ ಚಿಂತನೆಗಳನ್ನು ಕಲುಷಿತಗೊಳಿಸುತ್ತಿರುವ ಕ್ಷುದ್ರ ಶಕ್ತಿಗಳ ವಿರುದ್ಧದ ಹೋರಾಟ.

   RSSನ ಕಾಲಾಳುಗಳಾಗಿರುವ ಜನರನ್ನು ವಿಕಾರಧಾರೆಯಿಂದ ವಿಚಾರಧಾರೆಯೆಡೆಗೆ ಕರೆತರಬೇಕಿದೆ. ಬುದ್ಧ, ಬಸವ, ಅಂಬೇಡ್ಕರ್ ಅವರ ಮೌಲ್ಯಯುತ ಚಿಂತನೆಗಳನ್ನು ಪರಿಚಯಿಸಬೇಕಿದೆ. ಮುಗ್ದ ಮಕ್ಕಳು, ಯುವ ಸಮುದಾಯವನ್ನು ಇಂತಹ ಕಲುಷಿತ ವ್ಯವಸ್ಥೆಗೆ ಬಲಿಯಾಗದಂತೆ ತಡೆಯುವ ಸಲುವಾಗಿಯೇ ನಾನು ಹೋರಾಡುತ್ತೇನೆ ಮತ್ತು ದೃಢವಾದ ಹೆಜ್ಜೆಗಳನ್ನು ಇಡುತ್ತೇನೆ. ಈ ಬೆದರಿಕೆಗಳು, ಬೈಗುಳಗಳಿಂದ ನಾನು ವಿಚಲಿತನಾಗುತ್ತೇನೆ ಎಂದು ಭಾವಿಸಿದ್ದರೆ ಅದು ಅವರ ಭ್ರಮೆಯಷ್ಟೇ. ನನ್ನದು ಕೇವಲ ಅಧಿಕಾರ ಕೇಂದ್ರಿತ ರಾಜಕಾರಣವಲ್ಲ, ಸೈದ್ದಾಂತಿಕ ರಾಜಕಾರಣ, ಮುಗ್ದ ಯುವ ಸಮುದಾಯವನ್ನು ವಿಷವರ್ತುಲದಿಂದ ಹೊರತರುವ ಜನಕೇಂದ್ರಿತ ರಾಜಕಾರಣ ಎಂದು ಖರ್ಗೆ ಬರೆದಿದ್ದಾರೆ.

Recent Articles

spot_img

Related Stories

Share via
Copy link