ಬೆಂಗಳೂರು
ವಿಧಾನಸೌಧದಲ್ಲಿ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ರಾಜಿನಾಮೆ ನೀಡಲು ಮುಂದಾಗಿದ್ದಾರೆ. ಆದರೆ ಅವರನ್ನು ರಾಜಿನಾಮೆ ನೀಡದಂತೆ ಕಾಂಗ್ರೆಸ್‍ನ ಪ್ರಮುಖ ನಾಯಕರು ತಡೆಹಿಡಿದಿದ್ದಾರೆ ಎನ್ನಲಾಗಿದೆ.
ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕಾಂಗ್ರೆಸ್‍ಗೆ ತೀವ್ರ ಮುಜುಗರವಾಗಿದ್ದು, ಸಮರ್ಥಿಸಿಕೊಳ್ಳಲು ಪರದಾಡುವಂತಾಗಿದೆ. ಹಾಗಾಗಿ ಕೆಲವು ನಾಯಕರ ಕಟು ಮಾತುಗಳಿಂದ ಬೇಸತ್ತ ಪುಟ್ಟರಂಗಶೆಟ್ಟಿ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದರು ಎನ್ನಲಾಗಿದೆ.
ಅದನ್ನು ತಡೆ ಹಿಡಿದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಸುಮ್ಮನಿರಲು ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಯುತ್ತಿದೆ. ಮೊದಲು ವಿಚಾರಣೆ ನಡೆಯಲಿ. ಅದರ ವರದಿ ಬಂದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳೋಣ. ಸದ್ಯಕ್ಕೆ ಎಲ್ಲವೂ ಯಥಾಸ್ಥಿತಿಯಲ್ಲಿ ಮುಂದುವರೆಯಲಿ ಎಂದು ಸಲಹೆ ನೀಡಿದ್ದಾರೆ.
ದುಡುಕಿ ನಿರ್ಧಾರ ತೆಗೆದುಕೊಳ್ಳುವುದು ಬೇಡ. ರಾಜಿನಾಮೆಯಿಂದ ಎಲ್ಲವೂ ಪರಿಹಾರ ಆಗುವುದಿಲ್ಲ ಎಂದು ಬುದ್ದಿ ಮಾತು ಹೇಳಿದ ಹಿನ್ನೆಲೆಯಲ್ಲಿ ಪುಟ್ಟರಂಗಶೆಟ್ಟಿ ಅವರು ರಾಜಿನಾಮೆ ನಿಲುವಿನಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.ಸಚಿವರ ಕಚೇರಿಯ ಸಿಬ್ಬಂದಿ ಮೋಹನ್ ಎಂಬುವರು 25.76 ಲಕ್ಷ ಹಣವನ್ನು ವಿಧಾನಸೌಧದಿಂದ ಹೊರಗೆ ತೆಗೆದುಕೊಂಡು ಹೋಗುವಾಗ ಸಿಕ್ಕಿಬಿದ್ದಿದ್ದರು. ಅದು ಪೆÇಲೀಸ್ ಠಾಣೆ ಮೆಟ್ಟಿಲೇರಿದ್ದು, ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಪುಟ್ಟರಂಗಶೆಟ್ಟಿ ರಾಜಿನಾಮೆ ನೀಡಲೆಬೇಕೆಂದು ಬಿಜೆಪಿ ಪಟ್ಟು ಹಿಡಿದು ರಾಜ್ಯಾದ್ಯಂತ ಪ್ರತಿಭಟನೆಗೆ ಮುಂದಾಗಿದೆ.
ಕಾಂಗ್ರೆಸ್‍ನ ಕೆಲವು ನಾಯಕರು ಕೂಡ ಪುಟ್ಟರಂಗಶೆಟ್ಟಿ ರಾಜಿನಾಮೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೇರಿದಂತೆ ಇತರೆ ಬಣದವರು ಪುಟ್ಟರಂಗಶೆಟ್ಟಿ ಅವರ ರಾಜಿನಾಮೆಯನ್ನು ತಳ್ಳಿ ಹಾಕಿದ್ದಾರೆ. ಹೈಕಮಾಂಡ್ ಕೂಡ ಪ್ರಕರಣದ ಬಗ್ಗೆ ಮಾಹಿತಿ ನೀಡುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ.
ಪುಟ್ಟರಂಗಶೆಟ್ಟಿ ಆರಂಭದಿಂದಲೂ ತಾವು ಅಮಾಯಕರೆಂದು ವಾದಿಸುತ್ತಿದ್ದು, ದುರುದ್ದೇಶ ಪೂರ್ವಕವಾಗಿ ನಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಿರುವುದಾಗಿ ಆರೋಪಿಸುತ್ತಿದ್ದಾರೆ. ಒಟ್ಟಾರೆ ಸತ್ಯಾಸತ್ಯತೆ ಏನೆ ಇದ್ದರೂ ಪುಟ್ಟರಂಗ ಶೆಟ್ಟಿ ಅವರು ಮೊದಲು ರಾಜಿನಾಮೆ ನೀಡಬೇಕು. ತನಿಖೆ ಎದುರಿಸಿ ನಿರ್ದೋಷಿ ಎಂದು ಸಾಬೀತಾದರೆ ನಂತರ ಬೇಕಾದರೆ ಸಂಪುಟಕ್ಕೆ ಮರು ಸೇರ್ಪಡೆಗೊಳ್ಳಲಿ ಎಂದು ವಿರೋಧ ಪಕ್ಷ ಬಿಜೆಪಿ ಪಟ್ಟು ಹಿಡಿದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ