ದಾವಣಗೆರೆ:
ಶಿಕ್ಷಕರ ವ್ಯಕ್ತಿತ್ವವನ್ನು ಮಕ್ಕಳು ಅನುಕರಿಸುವುದರಿಂದ ಗುರುಗಳು ಸಚ್ಚಾರಿತ್ರ್ಯ ರೂಪಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಕರೆ ನೀಡಿದರು.
ನಗರದ ಲಯನ್ಸ್ ಭವನದಲ್ಲಿ ಬುಧವಾರ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಶಿಕ್ಷಕರಿಗಾಗಿ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಮಕ್ಕಳಿಗೆ ಹೇಳುವ ಬೋಧನೆಗಿಂತಲೂ ಅವರ ನಡವಳಿಕೆ ಮುಖ್ಯವಾಗುತ್ತದೆ. ಏಕೆಂದರೆ, ಶಿಕ್ಷಕರ ವ್ಯಕ್ತಿತ್ವವನ್ನು ಮಕ್ಕಳು ಅನುಕರಿಸುವುದರಿಂದ ಗುರುಗಳು ಸಚ್ಚಾರಿತ್ರ್ಯ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸುವ ಶಿಕ್ಷಕರನ್ನು ಮರೆಯಲು ಸಾಧ್ಯವಿಲ್ಲ. ಅಂತಹ ಶಿಕ್ಷಕರ ಸ್ಮರಣೆಯಿಂದಲೇ ಮನಸ್ಸಿನಲ್ಲಿ ಗೌರವಭಾವ ಮೂಡುತ್ತದೆ. ದೇಶದ ಭಾವಿ ಪ್ರಜೆಗಳನ್ನು ರೂಪಿಸುವ ಶಿಕ್ಷಕ ವೃತ್ತಿ ಅತ್ಯಂತ ಮಹತ್ವದ್ದಾಗಿದ್ದು, ಒಳ್ಳೆಯ ರೀತಿಯಿಂದ ಕೆಲಸ ಮಾಡುವ ಶಿಕ್ಷಕರಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ ಎಂದರು.
ಹಿಂದಿನ ಗುರುಕುಲ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ವ್ಯವಸ್ಥೆ ಇರಲಿಲ್ಲ. ಗುರುಗಳ ಕಾರ್ಯವೈಖರಿ, ನಡೆ-ನುಡಿ ನೋಡಿಯೇ ವಿದ್ಯಾರ್ಥಿಗಳು ವಿದ್ಯೆ ಕಲಿಯುತ್ತಿದ್ದರು. ಅಂತಹ ಪರಿಪೂರ್ಣ ಶಿಕ್ಷಕರಿಂದಲೇ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕನ್ನಿಕಾ ಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ ಆರ್.ಎಲ್.ಪ್ರಭಾಕರ್ ಮಾತನಾಡಿ, ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಹಾಗೂ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಶಿಕ್ಷಕರನ್ನು ಹೆಚ್ಚು ಪ್ರೋತ್ಸಾಹಿಸುವ ಕೆಲಸ ಸಮುದಾಯ ಹಾಗೂ ಸಮಾಜದಿಂದ ಆಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪ್ರೌಢಶಾಲೆ, ಪದವಿಪೂರ್ವ ಹಾಗೂ ವಿಕಲಚೇತನರ ವಿಶೇಷ ಶಿಕ್ಷಕರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್‍ನ ಎಲ್.ಜಿ.ನಾಗನೂರು, ಡಾ.ಬಿ.ಎಸ್.ನಾಗಪ್ರಕಾಶ, ನಿರ್ಮಲಾ ಶಿವಕುಮಾರ್, ಅನಂತರಾಮ್ ಶೆಟ್ಟಿ, ನಾಗಭೂಷಣ್, ಪ್ರಭಾ ರವೀಂದ್ರ, ಆರ್.ಜಿ.ಶ್ರೀನಿವಾಸ ಮೂರ್ತಿ, ವಾಸುದೇವ ರಾಯ್ಕರ್, ಪ್ರತಾಪ್, ಮಂಜುನಾಥ್ ಸ್ವಾಮಿ, ದೇವರಮನೆ ನಾಗರಾಜ್, ಎನ್.ವಿ.ಬಂಡಿವಾಡ, ಎನ್.ಸಿ.ಬಸವರಾಜ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








