ಹರಿಹರ:
ತ್ಯಾಗ ಬಲಿದಾನದ ಸಂಕೇತ ಈದ್-ಉಲ್-ಅಜ್ಹಾ (ಬಕ್ರೀದ್) ಹಬ್ಬವನ್ನು ಮುಸ್ಲಿಂ ಸಮಾಜ ಬಾಂಧವರು ತಾಲ್ಲೂಕಿನಾದ್ಯಂತ ಬುಧವಾರ ಸಡಗರ, ಸಂಭ್ರಮದಿಂದ ಆಚರಿಸಿದರು.
ನಗರದಲ್ಲಿ ಅಹ್ಲೆ ಸುನ್ನತ್ ಪಂಗಡದವರು ಅಂಜುಮನ್ ಶಾಲೆ ಮುಂಭಾಗದ ಈದ್ಗಾ ಮೈದಾನದಲ್ಲಿ, ಅಹ್ಲೆ ಹದೀಸ್ ಪಂಗಡದವರು ಹೊರವಲಯದ ಜೈಭೀಮನಗರ ಸಮೀಪದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪ್ರವಚನ ನೀಡಿದ ಮೌಲಾನಾರವರು, ಅಲ್ಲಾಹನ ಇಚ್ಚೆಯಂತೆ ಪ್ರವಾದಿ ಇಬ್ರಾಹೀಮರು ತಮ್ಮ ಇಳಿವಯಸ್ಸಿನಲ್ಲಿ ಪುತ್ರ ಇಸ್ಮಾಯಿಲರನ್ನು ಬಲಿ ಕೊಡಲು ಸಿದ್ಧರಾದರು. ಆ ಘಟನೆಯ ಪ್ರತೀಕವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ.
ಪ್ರಾಣಿ ಬಲಿ ಕೊಡುವುದು ಇಲ್ಲಿ ಸಾಂಕೇತಿಕವಾಗಿದೆ. ಅಗತ್ಯ ಬಿದ್ದಾಗ ನೆರೆ,ಹೊರೆ, ನಾಡು, ದೇಶ, ಧರ್ಮ, ಮಾನವ ಕುಲಕ್ಕಾಗಿ ಧನ, ಸಮಯ, ಶಕ್ತಿ, ಸಾಮಥ್ರ್ಯ, ಸಂಪನ್ಮೂಲಗಳ ತ್ಯಾಗ ಮಾಡಬೇಕೆಂಬುದು ಹಬ್ಬದ ತಿರುಳಾಗಿದೆ.
ನಾವು ತಿಂದುಂಡು ಪಕ್ಕದ ಮನೆಯವರು ಹಸಿದಿದ್ದರೆ ಸೃಷ್ಟಿಕರ್ತ ನಮ್ಮ ಬದುಕನ್ನು ಮೆಚ್ಚನು. ಯಾವುದೆ ಜಾತಿ, ಧರ್ಮಕ್ಕೆ ಸೇರಿದ್ದರೂ ಸರಿ ಹಸಿದವರ ಹಸಿವು, ಕೊರತೆಗಳನ್ನು ಶಕ್ತಿ ಇದ್ದವರು ನೀಗಿಸಬೇಕು. ತೊಂದರೆಯಲ್ಲಿದ್ದವರು ಮುಸ್ಲಿಮೇತರರಿದ್ದರೂ ನಮ್ಮಲ್ಲಿ ಶಕ್ತಿ ಇದ್ದರೆ ಸಹಾಯ ಹಸ್ತ ಚಾಚಬೇಕು. ಅಂತಹವರ ತ್ಯಾಗ, ಬಲಿದಾನಗಳನ್ನು ದೇವರು ಮೆಚ್ಚುತ್ತಾನೆ ಎಂದು ಹೇಳಿದರು.
ಸಂತ್ರಸ್ತರಿಗೆ ಸಹಾಯ ಮಾಡಿ: ಕೇರಳ ಮತ್ತು ರಾಜ್ಯದ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರಕೃತಿ ವಿಕೋಪದಿಂದ ಲಕ್ಷಾಂತರ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಉಳ್ಳವರು ವಸ್ತು, ಧನದ ರೂಪದಲ್ಲಿ ಸಹಾಯ ಹಸ್ತ ಚಾಚಬೇಕು. ಸರಕಾರ ಮಾಡುತ್ತಿರುವ ಪುನರ್‍ವಸತಿ ಕಾರ್ಯಚರಣೆಯಲ್ಲಿ ಕೈಜೋಡಿಸಬೇಕು. ಸಮಾಜದ ಸಂಘ, ಸಂಸ್ಥೆಗಳು ಈ ದಿಸೆಯಲ್ಲಿ ಕಾರ್ಯಶೀಲವಾಗಬೇಕೆಂದರು.
ಪ್ರಾರ್ಥನೆಗೆ ಮುನ್ನ ಆಯಾ ಮಸೀದಿಗಳಿಂದ ಜನರು ಗುಂಪಾಗಿ ಧಾರ್ಮಿಕ ಕೀರ್ತನೆಗಳನ್ನು ಪಠಿಸುತ್ತಾ ಈದ್ಗಾ ಮೈದಾನಗಳತ್ತ ಸಾಗಿದರು. ಹೊಸ ಬಟ್ಟೆ ತೊಟ್ಟ ಮಕ್ಕಳು ಸಂಭ್ರಮಿಸಿದರು.
ಮಹಿಳೆಯರಿಂದಲೂ ಪ್ರಾರ್ಥನೆ:
ಅಹ್ಲೆ ಹದೀಸ್ ಪಂಗದವರು ಜೈ ಭೀಮನಗರ ಸಮೀಪದ ಈದ್ಗಾ ಮೈದಾನದಲ್ಲಿ ಆಯೋಜಿಸಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಮಹಿಳೆಯರೂ ಭಾಗವಹಿಸಿದ್ದರು. ಜಮಾಅತೆ ಇಸ್ಲಾಮಿ ಹಿಂದ್ ಹಾಗೂ ರಾಬಿತ್-ಎ-ಮಿಲ್ಲತ್ ಸಂಘಟನೆಗಳಿಂದ ಕೇರಳ, ಕೊಡಗು ಸಂತ್ರಸ್ಥರಿಗಾಗಿ ದೇಣಿಗೆ ಸಂಗ್ರಹಿಸಲಾಯಿತು.
ಈದ್ಗಾ ಮೈದಾನಗಳಿಗೆ ಆಗಮಿಸಿದ್ದ ಶಾಸಕ ಎಸ್.ರಾಮಪ್ಪ, ಬಿಜೆಪಿ, ಜೆಡಿಎಸ್ ಮುಖಂಡರು ಹಬ್ಬದ ಶುಭಾಷಯ ಕೋರಿದರು. ನಗರಸಭಾ ಸದಸ್ಯರಾದ ಬಿ.ಮೊಹ್ಮದ್ ಸಿಗ್ಬತ್ ಉಲ್ಲಾ, ಸೈಯದ್ ಏಜಾಜ್ ಅಹ್ಮದ್, ಹಬೀಬ್ ಉಲ್ಲಾ, ಅಲ್ತಾಫ್, ಹಜರತ್ ಅಲಿ, ಅಂಜುಮನ್ ಸಂಸ್ಥೆ ಅಧ್ಯಕ್ಷ ಬಿ.ಕೆ.ಸೈಯದ್ ರಹಮಾನ್, ಮುಖಂಡರಾದ ಮೊಹ್ಮದ್ ಫೈರೋಜ್, ಹಳ್ಳಳ್ಳಿ ಜಬ್ಬಾರ್ ಖಾನ್, ನಾಸಿರ್ ಪೈಲ್ವಾನ್, ನಜೀರ್ ಅಹ್ಮದ್, ಡಾ.ನಬಿ, ಎಂ.ಎಂ.ಡಿ. ಫಾರೂಖ್, ಹುರಕಡ್ಲಿ ಸೈಯದ್ ಅಬ್ಬಾಸ್ ಅಲಿ ಮತ್ತಿತರರು ಉಪಸ್ಥಿತರಿದ್ದರು.
ತಾಲ್ಲೂಕಿನ ಮಲೆಬೆನ್ನೂರು, ಭಾನುವಳ್ಳಿ, ಬೆಳ್ಳೂಡಿ, ಕರಲಹಳ್ಳಿ, ರಾಜನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಈದ್ಗಾ ಮೈದಾನ, ಮಸೀದಿಗಳಲ್ಲಿಗಳಲ್ಲೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಹೊಸ ಬಟ್ಟೆ ಧರಿಸಿದ ಮಕ್ಕಳು ಸಂಭ್ರಮಿಸಿದರು. ಜನರು ಪರಸ್ಪರ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
