ತಿಪಟೂರು:
ವಿದ್ಯಾರ್ಥಿಗಳು ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸಮಾಡದೇ ಮೊದಲಿನಿಂದಲೇ ಅಂದಿನ ಪಾಠವನ್ನು ಅಂದೇ ಅಂದೇ ಅಭ್ಯಾಸ ಮಾಡುತ್ತಾ ಸತತವಾಗಿ ಪ್ರಯತ್ನ ಮಾಡಿಕೊಂಡು, ಸತತ ಪ್ರಯತ್ನೇ ಸಾಧನೆಗೆ ಸೋಪಾನವಾಗಿಸಿಕೊಂಡು ಅಭಿವೃದ್ಧಿಯನ್ನು ಹೊಂದಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಕೆ.ಎನ್.ರೇಣುಕಯ್ಯ ಅಭಿಪ್ರಾಯಪಟ್ಟರು.
ನಗರದ ಲಿಂಗಣ್ಣ ಕಾಂಪ್ಲೆಕ್ಸ್‍ನಲ್ಲಿರುವ ಯಶಸ್ ಅಕಾಡೆಮಿ ಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು ಅತೀ ವೇಗವಾಗಿ ಬೆಳೆಯುತ್ತಿರುವ ಪೈಪೋಟಿಯ ಜಗತ್ತಿನಲ್ಲಿ ಶಿಕ್ಷಣ ಉನ್ನತೀಕರಣವಾಗುತ್ತಿದೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಯೋಜನೆಗಳನ್ನು ರೂಪಿಸಿಕೊಂಡು ಅಧ್ಯಯನಶೀಲರಾಗಬೇಕಿದೆ. ಅಂಕಗಳಿಕೆಯನ್ನೇ ಗುರಿಯನ್ನಾಗಿಸದೇ ಭೌತಿಕ, ಬೌಧ್ಧಿಕ ಹಾಗೂ ವೈಜ್ಞಾನಿಕ ಚಿಂತನೆಗಳ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.
ಜ್ಞಾನದ ಜೊತೆಗೆ ಧೈರ್ಯ ಮತ್ತು ಆತ್ಮ ವಿಶ್ವಾಸಗಳನ್ನು ಬೆಳೆಸಿಕೊಳ್ಳಬೇಕು. ವೇದಿಕೆಗಳನ್ನು ಅವಶ್ಯಕತೆಗಳಿಗೆ ಅನುಗುಣವಾಗಿ ಬಳಸಿಕೊಳ್ಳುತ್ತಾ ನಾಯಕತ್ವದ ಗುಣಗಳೊಂದಿಗೆ ರಾಷ್ಟ್ರೀಯತೆ, ದೇಶಾಭಿಮಾನ, ಭಾವೈಕ್ಯತೆ ಮತ್ತು ಸೇವಾ ಮನೋಭಾವದಂತಹ ಗುಣಗಳಿಂದ ಸಂಪನ್ನರಾಗಬೇಕಿದೆ. ತಮ್ಮ ಪ್ರತಿಭೆಗಳನ್ನು ವಿಸ್ತರಿಸಿಕೊಳ್ಳುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಾ ಮಾನಸಿಕ ಸದೃಡತೆಯನ್ನು ಸಂಪಾದಿಸಿಕೊಳ್ಳಬೇಕು. ನಿತ್ಯವೂ ಆವಿಷ್ಕಾರಗೊಳ್ಳುತ್ತಿರುವ ಸಂಗತಿಗಳ ಬಗ್ಗೆ ಸಂಶೋಧನಾತ್ಮಕ ಚಿಂತನಾ ಶಕ್ತಿಯನ್ನು ಮೈಗೂಡಿಸಿಕೊಂಡು ಸಾಧನೆಯ ಹಾದಿಯಲ್ಲಿ ಸಾಗಬೇಕು.
ಈ ದಿಸೆಯಲ್ಲಿ ವಿನಯಶೀಲರಾಗಿ, ಗುಣ ಸಂಪನ್ನಾರಾಗಿ ಶಿಸ್ತಿನಿಂದ ವರ್ತಿಸುತ್ತಾ ಗುರುಗಳಿಗೆ, ತಂದೆ-ತಾಯಿಗೆ ಗೌರವ ತಂದುಕೊಡುತ್ತಾ ಸಮಾಜದಲ್ಲಿ ಕೀರ್ತಿಯನ್ನು ಸಂಪಾದಿಸಿ ಮಾನವೀಯ ಮೌಲ್ಯಗಳನ್ನು ಸಂಸ್ಕಾರಗಳನ್ನು ಸಾರುವ ಆದರ್ಶ ವ್ಯಕ್ತಿಗಳಾಗಿ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಯಶಸ್ಸ್ ಅಕಾಡೆಮಿಯ ಸಂಸ್ಥಾಪಕ ವಿಶ್ವನಾಥ್ ಮಾತನಾಡಿ ವಿದ್ಯಾರ್ಥಿಗಳು ಸದಾಕಾಲ ಅಧ್ಯಯನ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣವನ್ನು ಪಡೆಯಲು ಒಳ್ಳೆಯ ಪರಿಸರವನ್ನು ನಿರ್ಮಾಣ ಮಾಡಿಕೊಂಡು ಪಠ್ಯಶಿಕ್ಷಣದ ಜೊತೆಗೆ ಪಠ್ಯೇತರವಾದ ಚಟುವಟಿಕೆಗಳಲ್ಲೂ ತಮ್ಮ ಪ್ರತಿಭೆಗಳನ್ನು ಹೊರಹೊಮ್ಮಿಸಿಕೊಂಡು ಪ್ರತಿಭಾವಂತ ವಿದ್ಯಾರ್ಥಿಗಳೆಂಬ ಹೆಗ್ಗಳಿಕೆಗೆ ಪಾತ್ರರಾಗಬೇಕು. ಸಮಾಜದಲ್ಲಿ ಸಿಗುವ ಸಂಬಂಧಗಳ ಮೌಲ್ಯಗಳ ಜೊತೆ-ಜೊತೆಗೆ ತಮ್ಮ ಶಿಕ್ಷಣದ ಮೌಲ್ಯಗಳನ್ನು ಸೇರಿಸಿಕೊಂಡು ಬದುಕಿನಲ್ಲಿ ಯಶಸ್ಸನ್ನು ಪಡೆಯಬೇಕೆಂದು ತಿಳಿಸಿದರು.
ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಕು. ಚಂದನಾಳಿಗೆ ಪ್ರಶಸ್ತಿ ಬಹುಮಾನವನ್ನು ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಯಶಸ್ಸು ಅಕಾಡೆಮಿಯ ಶಿಕ್ಷಕರುಗಳಾದ ರಮೇಶ್, ರಾಹುಲ್, ಮಹಾಲಕ್ಷ್ಮೀ, ಸುನೀಲ್ ಕುಮಾರ್, ಮಲ್ಲಿಕಾರ್ಜುನ್ ಮತ್ತಿತರರಿದ್ದರು.