ಸತ್ಯವಂಥರ ಕಗ್ಗೊಲೆ ನಡೆಯುತ್ತಿದೆ, ಸುಳ್ಳು ಸಂಭ್ರಮಿಸುತ್ತದೆ

 ದಾವಣಗೆರೆ:

      ಪ್ರಸ್ತುತ ದಿನಗಳಲ್ಲಿ ಸನಾತನ ಹೆಸರಿನಲ್ಲಿ ಸತ್ಯ ಹೇಳುವವರ ಕಗ್ಗೊಲೆಯಾಗುತ್ತಿದ್ದು, ಸುಳ್ಳು ಸಂಭ್ರಮಿಸುತ್ತಿದೆ ಎಂದು ಪ್ರಾಧ್ಯಾಪಕ ಡಾ.ಎ.ಬಿ. ರಾಮಚಂದ್ರಪ್ಪ ವಿಷಾಧಿಸಿದರು.

      ನಗರದ ಎಸ್‍ಪಿಎಸ್‍ಎಸ್ ವಿಜ್ಞಾನ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಮಾನವ ಬಂಧುತ್ವ ವೇದಿಕೆ ಮತ್ತು ದಾವಣಗೆರೆ ವಿಜ್ಞಾನ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ವೈಜ್ಞಾನಿಕ ಮನೋಭಾವದ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

      ಯಾವುದೇ ಒಂದು ವಿಷಯವನ್ನು ತರ್ಕಕ್ಕೆ ಹಚ್ಚಿ ಪ್ರಶ್ನಿಸಿ, ವಿಮರ್ಶಿಸುವ ವೈಜ್ಞಾನಿಕ ಮನೋಭಾವ ಇದ್ದಾಗ ಮಾತ್ರ ಸತ್ಯಾಸತ್ಯತೆ ಅರಿವು ಮೂಡಲಿದೆ. ವೈಜ್ಞಾನಿಕ ಮನೋಭಾವ ಹೊಂದಿದ್ದರೆ, ದೇಶ ಮತ್ತಷ್ಟು ಪ್ರಗತಿಯಾಗುತ್ತಿತ್ತು. ಅಲ್ಲದೆ, ಸತ್ಯ ಎನ್ನುವುದು ವಿಜೃಂಭಿಸುತ್ತಿತ್ತು. ಆದರೆ, ಈಗಿನ ದಿನಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಪ್ರಶ್ನಿಸುವವರನ್ನು ತಲೆ ಹರಟೆಗಳು ಎಂಬಂತೆ ಕಾಣುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

      ಪ್ರಶ್ನಿಸುವ ಮನೋಭಾವ ಇಲ್ಲದಿದ್ದರೆ, ಹೇಳಿದನ್ನೆಲ್ಲಾ ಒಪ್ಪಿಕೊಂಡು ನಂಬಬೇಕಾಗುತ್ತದೆ. ಪಸ್ತುತ ಬುದ್ಧಿವಂತರು ಮತ್ತು ಶಿಕ್ಷಕರು ಹೆಚ್ಚಾಗಿ ಸನಾತನತೆಗೆ ಒಪ್ಪಿಕೊಂಡು ಮೂಢನಂಬಿಕೆಗೆ ಸಿಲುಕಿದ್ದಾರೆ. ತರ್ಕ ಜಿಜ್ಞಾಸೆ ಇಲ್ಲದೆ ಹೋದರೆ ಮನದಲ್ಲಿ ದಾಸ್ಯ ಮೂಡಿ, ನಮ್ಮಲ್ಲಿರುವ ಕೆಟ್ಟ ಭಾವನೆಗಳ ಸೈತಾನ್ ವಾಸ ಮಾಡಲಿದ್ದಾನೆ ಎಂದ ಅವರು, ಸನಾತನತೆ, ಸುಳ್ಳು, ವಂಚನೆ, ನಿರ್ಮೂಲನೆಗೆ ಯುವ ಪೀಳಿಗೆ ಮುಂದಾಗಬೇಕಿದೆ. ಅಧಿಕಾರ ಸಂಪತ್ತಿಗೆ ಮೋಹ ಪಡುವವರು ವಂಚಕರು, ಶ್ರಮದ ಮೇಲೆ ಭರವಸೆ ನಂಬಿಕೆ ಇಟ್ಟವರು, ನಂಬಿಕಸ್ತರು ಮತ್ತು ಉತ್ತಮರು ಎಂದರು.

      ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಡಾ|| ಬಿ.ಇ. ರಂಗಸ್ವಾಮಿ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದನ್ನು ಬಿಟ್ಟು, ಪುಸ್ತಕಗಳಲ್ಲಿ ಇರುವುದನ್ನು ಉರುಹು ಹೊಡೆಸುವ ಪದ್ಧತಿ ಇರುವುದು ಅತ್ಯಂತ ಅಪಾಯಕಾರಿಯಾಗಿದೆ. ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಚಿಂತಿಸುವ, ಆಲೋಚಿಸುವ ಮನೋಭಾವವನ್ನು ಕಲಿಸಿಕೊಡುತ್ತಿಲ್ಲ. ಕೇವಲ ಪುಸ್ತಕದಲ್ಲಿರುವುದನ್ನು ಮಾತ್ರ ಕಂಠಪಾಠ ಮಾಡಿಸುತ್ತಿದ್ದಾರೆ. ಆದ್ದರಿಂದ ಇಂದು ನಾವು ವೈಜ್ಞಾನಿಕವಾಗಿ ಹಿಂದುಳಿದಿದ್ದೇವೆ ಎಂದರು.

      ವಿಶ್ವದಲ್ಲಿ ನಮ್ಮ ದೇಶದ ಸಂವಿಧಾನದಲ್ಲಿ ಮಾತ್ರ ವೈಜ್ಞಾನಿಕತೆಯನ್ನು ಸೇರಿಸಲಾಗಿದೆ. ಅಂದಿನ ಪ್ರಧಾನಿ ನೆಹರೂ ಅವರು ಸಹ ಸೈಂಟಿಫಿಕ್ ಟೆಂಪರ್ ಅನ್ವೇಷಣೆ ಮಾಡಿ ದೇಶದ ಜನ ವೈಜ್ಞಾನಿಕವಾಗಿ ಮುಂದುವರೆಯುವಂತೆ ಸಾರಿದ್ದರು. ಯಾವ ವಿಷಯವನ್ನು ವೈಜ್ಞಾನಿಕವಾಗಿ ಆಲೋಚನೆ ಮಾಡದೇ ಒಪ್ಪಿಕೊಳ್ಳಬಾರದು ಎಂಬುದನ್ನು ಸಾರಿದ್ದರು. ಪ್ರತಿ ಒಂದು ವಿಚಾರದಲ್ಲೂ ನಾವುಗಳು ಅದನ್ನು ಹೇಗಿದೆಯೋ ಹಾಗೆ ನಂಬದೇ ಅದರ ಬಗ್ಗೆ ಪ್ರಶ್ನೆ ಮಾಡಬೇಕು. ಆಗ ಮಾತ್ರ ಸರಿಯಾದ ಉತ್ತರ ನಮಗೆ ಸಿಗಲು ಸಾಧ್ಯ ಎಂದರು.

      ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ದಾನಿ ಸದಸ್ಯ ಪಿ.ಷಣ್ಮುಖಸ್ವಾಮಿ ಮಾತನಾಡಿ, ಪ್ರಸ್ತುತ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳು ಮನುಷ್ಯ ಆಲೋಚನಾ ಶಕ್ತಿಯನ್ನು ಹಾಳುಗೆಡವುತ್ತಿವೆ. ಮಾಧ್ಯಮಗಳಲ್ಲಿ ಬೆಳಬೆಳಿಗ್ಗೆಯೇ ಜ್ಯೋತಿಷಿಗಳನ್ನು ಕೂರಿಸಿಕೊಂಡು ಮೂಢನಂಬಿಕೆಗಳನ್ನು ಬಿತ್ತುತ್ತಿವೆ. ಹೀಗಾಗಿ ಅವಿದ್ಯಾವಂತರ ಜತೆಗೆ ವಿದ್ಯಾವಂತರು ಸಹ ಇಂತಹ ಮೂಡನಂಬಿಕೆಗೆ ಬಲಿಯಾಗುತ್ತಿದ್ದಾರೆ. ಮೂಢನಂಬಿಕೆಯಡಿ ಚೈತನ್ಯವಾದ ನಿಂತಿದೆ. ವಾಸ್ತವವಾದದ ಅಡಿಯಲ್ಲಿ ವಿಜ್ಞಾನ ನಿಂತಿದೆ. ಚೈತನ್ಯವಾದ ನಂಬಿದ ವ್ಯಕ್ತಿ ವಿಮರ್ಶೆ ಮಾಡುವ ಮನೋಭಾವನೆ ಕಳೆದುಕೊಳ್ಳುತ್ತಾನೆ ಎಂದು ಹೇಳಿದರು.

      ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಎಂ.ಪಿ. ರುದ್ರಪ್ಪ, ಹೆಚ್. ಚಂದ್ರಪ್ಪ ಉಪಸ್ಥಿತರಿದ್ದರು. ಚಂದ್ರನಾಯ್ಕ ಸ್ವಾಗತಿಸಿದರು, ಎಂ.ಎನ್. ಮುಷ್ಟೂರಪ್ಪ ಕಾರ್ಯಕ್ರಮ ನಿರೂಪಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap