ಸದಸ್ಯರು ಕಾಮಗಾರಿ ಮಾಡಿದರೆ ಸದಸ್ಯತ್ವ ರದ್ಧು ಶಾಸಕ ಜೆ.ಸಿ.ಮಾಧುಸ್ವಾಮಿ ಎಚ್ಚರಿಕೆ

ಹುಳಿಯಾರು:

      ಗ್ರಾಪಂ ಸದಸ್ಯರು ಕಾಮಗಾರಿ ಮಾಡಬಾರದೆಂದು ಪಂಚಾಯತ್ ರಾಜ್ ಕಾಯ್ದೆಯಲ್ಲಿ ಸ್ಪಷ್ಟ ಸೂಚನೆಯಿದೆ. ಆದರೂ ಬಹುತೇಕ ಗ್ರಾಪಂ ಸದಸ್ಯರು ಪಂಚಾಯ್ತಿಗೆ ಬಂದ ಗ್ರ್ಯಾಂಟ್ ಹಂಚಿಕೊಂಡು ತಾವೇ ಕಾಮಗಾರಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ. ಅಲ್ಲದೆ ಬಿಲ್ ಮಾಡಿಕೊಡುವಂತೆ ಪಿಡಿಓಗಳನ್ನು ಪೀಡಿಸುತ್ತಿರುವ ಬಗ್ಗೆ ಮಾಹಿತಿ ಸಹ ಲಭ್ಯವಿದೆ. ಈ ಬಗ್ಗೆ ಪಿಡಿಓ ಲಿಖಿತ ಮಾಹಿತಿ ನೀಡಿದರೆ ಅಂತಹವರ ಸದಸ್ಯತ್ವವನ್ನು ನಿರ್ದಾಕ್ಷ್ಯಿಣ್ಯವಾಗಿ ರದ್ದು ಮಾಡಿಸುವುದಾಗಿ ಶಾಸಕ ಜೆ.ಸಿ.ಮಾಧುಸ್ವಾಮಿ ಎಚ್ಚರಿಕೆ ನೀಡಿದರು.
ಹುಳಿಯಾರು ಸಮೀಪದ ಕೆ.ಸಿ.ಪಾಳ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

      ಶಾಸಕನಾದ ನಾನೇ ಬಂದ ಅನುದಾನದಲ್ಲಿ ಕಾಮಗಾರಿ ಮಾಡಿ ಬಿಲ್‍ಗಾಗಿ ಅಧಿಕಾರಿಗಳ ಮುಂದೆ ಕೈ ಕಟ್ಟಿ ನಿಂತರೆ ಸಾರ್ವಜನಿಕರ ಕೆಲಸಕಾರ್ಯ ಮಾಡಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲು ಸಾಧ್ಯವೆ. ಹಾಗೆ ಗ್ರಾಪಂ ಸದಸ್ಯರೂ ಸಹ ಐದತ್ತು ಸಾವಿರ ರೂ. ಬಿಲ್‍ಗಾಗಿ ಪಿಡಿಓ ಬಳಿ ಅಂಗಲಾಚುತ್ತಿರುವುದರಿಂದ ತಮ್ಮತಮ್ಮ ಬ್ಲಾಕ್‍ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಿಮ್ಮ ಬ್ಲಾಕ್‍ನ ನಿರುದ್ಯೋಗ ಯುವಕರ ಕೈಯಿಂದ ಕಾಮಗಾರಿ ಮಾಡಿಸಿ ಅಧಿಕಾರಿಗಳ ತಮ್ಮ ಬ್ಲಾಕ್‍ನ ಇತರೆ ಕೆಲಸ ಮಾಡಿಸುವ ಎದೆಗಾರಿಕೆ ಉಳಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

      ಉದ್ಯೋಗಖಾತ್ರಿ ಯೋಜನೆಯಡಿ ಒಂದೊಂದು ಊರಿಗೂ ಲಕ್ಷಾಂತರ ರೂ. ವೆಚ್ಚದ ಕಾಮಗಾರಿ ಮಾಡಬಹುದಾಗಿದೆ. ಆದರೆ ಬಂದ ಹಣವನ್ನೆಲ್ಲಾ ವೈಯಕ್ತಿಕ ಕಾಮಗಾರಿಗಳಾದ ಹಿಂಗುಗುಂಡಿ, ಕೃಷಿಹೊಂಡ, ಕುರಿಶೆಡ್‍ಗಳಿಗೆ ನೀಡುತ್ತಿದ್ದಾರೆ. ಹಾಗಾಗಿಯೇ ಗಾಂಧೀಜಿ ಕನಸು ಕಂಡಂತೆ ಹಳ್ಳಿಗಳು ಅಭಿವೃದ್ಧಿ ಕಾಣುತ್ತಿಲ್ಲ. ಇನ್ನಾದರೂ ವೈಯಕ್ತಿಕ ಕಾಮಗಾರಿ ಬಿಟ್ಟು ಸಮುದಾಯಕ್ಕೆ ನೆರವಾಗುವ ರಸ್ತೆ, ಚರಂಡಿ, ಸಾಮೂಹಿಕ ಶೌಚಾಲಯದ ಕಾಮಗಾರಿಗಳನ್ನು ಮಾಡಿ ಎಂದು ಸಲಹೆ ನೀಡಿದರು.

      ಗ್ರಾಪಂ ಅಧ್ಯಕ್ಷೆ ಆಶಾ ಉಮೇಶ್, ಮಾಜಿ ಅಧ್ಯಕ್ಷರಾದ ಜಯಮ್ಮ, ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್, ರೂರಲ್ ವಾಟರ್ ಸಪ್ಲೈನ ಎಇಇ ರಾಜೇಂದ್ರ, ಗ್ರಾಪಂ ಸದ್ಯರುಗಳಾದ ಪಂಕಜಮ್ಮ, ದೊಡ್ಡಯ್ಯ, ಬಸವರಾಜು, ಗ್ರಾಮದ ಗೌಡರಾದ ಶಿವಣ್ಣ, ಪ್ರಕಾಶ್, ಗವೀರಂಗಯ್ಯ, ರಾಮಚಂದ್ರಯ್ಯ, ರೈತ ಸಂಘದ ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap