ಸದೃಢ ವ್ಯಕ್ತಿತ್ವ ನಿರ್ಮಾಣಕ್ಕೆ ಕ್ರೀಡೆ ಸಹಕಾರಿ

ಮಿಡಿಗೇಶಿ
          ಕ್ರೀಡೆಯಿಂದ ಮನುಷ್ಯನ ದೈಹಿಕ ಮತ್ತು ಮಾನಸಿಕ ವಿಕಾಸವಾಗಲಿದೆ. ಸದೃಢ ವ್ಯಕ್ತಿತ್ವ ನಿರ್ಮಾಣದಲ್ಲಿ ಕ್ರೀಡೆಯ ಪಾತ್ರ ಮಹತ್ವದ್ದಾಗಿದೆ. ಕ್ರೀಡಾ ಕ್ಷೇತ್ರದಲ್ಲಿನ ಅಪಾರ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಲು, ಯುವಪೀಳಿಗೆ ವಿವಿಧ ಕ್ರೀಡೆಗಳಲ್ಲಿ ಸಕ್ರಿಯರಾಗಬೇಕು. ಸರ್ವರನ್ನೂ ಒಗ್ಗೂಡಿಸುವ ಕ್ರೀಡೆಗಳನ್ನು ಆಡುವ ಮೂಲಕ ಜೀವನಸ್ಫೂರ್ತಿ ಚಿಮ್ಮಲಿ , ಯುವಜನಾಂಗ ಸದೃಢ ಭಾರತ ನಿರ್ಮಿಸುವಲ್ಲಿ ಶ್ರಮಿಸಬೇಕೆಂದು ರಾಷ್ಟ್ರೀಯ ಫುಟ್ಬಾಲ್ ಮತ್ತು ಬ್ಯಾಸ್ಕೆಟ್ ಬಾಲ್ ತರಬೇತುದಾರ ಮಂಜುನಾಥ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
           ಅವರು ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಚಂದ್ರನ ಬೆಳಕಿನಲ್ಲಿ ಅಭ್ಯಾಸ ನಡೆಸಿ, ವಿಶ್ವದ ಮೊದಲ ಒಲಂಪಿಕ್ಸ್‍ನಲ್ಲಿ ಭಾರತವನ್ನು ಪ್ರತಿನಿಧಿಸಿ ಹಾಕಿ ಆಟದಲ್ಲಿ ಅಪ್ರತಿಮ ಪ್ರತಿಭೆ ತೋರಿ ಜಯಶಾಲಿಯಾದ ಮೇಜರ್ ಧ್ಯಾನ್‍ಚಂದ್ ನೆನಪಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಬಾಲ್ಯಾವಸ್ಥೆಯಿಂದಲೇ ಮಕ್ಕಳನ್ನು ಕ್ರೀಡೆಗಳತ್ತ ಆಕರ್ಷಿತರಾಗುವಂತೆ ಪ್ರೇರೇಪಿಸಬೇಕು. ವಿವಿಧ ಕ್ರೀಡೆಗಳಲ್ಲಿ ಪಳಗುವ ಮಕ್ಕಳು ಮುಂದಿನ ಭವಿಷ್ಯದಲ್ಲಿ ಉತ್ತಮ ಕ್ರೀಡಾಳುಗಳಾಗಿ ರೂಪುಗೊಳ್ಳುಬೇಕು. ಒಮ್ಮೆ ಅಖಿಲ ಭಾರತ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿದ ಸ್ಪರ್ಧೆಗಳಿಗೆ ಸರ್ಕಾರ ಮತ್ತು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ನಗದು ಬಹುಮಾನ, ಉನ್ನತ ಉದ್ಯೋಗ ಮತ್ತು ತರಬೇತಿ ನೀಡುತ್ತವೆ. ಕ್ರೀಡೆಗಳಲ್ಲಿ ವಿಜೇತರಾಗುವ ಮೂಲಕ ಉತ್ತಮ ಜೀವನ ನಡೆಸಲು ಸಾಧ್ಯ. ಆದುದರಿಂದ ಹೆಚ್ಚಿನ ಯುವಜನರು ಕ್ರೀಡೆಗಳತ್ತ ಒಲವು ತೋರಿಸಬೇಕೆಂದರು.
           ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ನರಸಿಂಹಮೂರ್ತಿ ಟಿ.ಎನ್.ಮಾತನಾಡಿ ಕ್ರೀಡೆ ಎಲ್ಲರನ್ನೂ ಸಾಮೂಹಿಕವಾಗಿ ಒಗ್ಗೂಡಿಸುವ, ಮನರಂಜಿಸುವ, ಮನೋಧೈರ್ಯ ಮೂಡಿಸುವ ಕ್ರಿಯಾತ್ಮಕ ಚಟುವಟಿಕೆಯಾಗಿದೆ. ಸ್ವಯಂ ಪ್ರತಿಭೆಯಿಂದ ಮಾತ್ರ ಕ್ರೀಡೆಯಲ್ಲಿ ಗೆಲುವು ಸಾಧ್ಯ. ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯ, ಏಕಾಗ್ರತೆ, ಸಾಧಿಸುವ ಹಂಬಲ , ಗೆಲುವಿನ ತುಡಿತ ಸೋಲನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಸದೃಢ ಮನಸ್ಸು ನಿರ್ಮಾಣಗೊಂಡು , ಸಂಪದ್ಭರಿತ ಮಾನವ ಸಂಪನ್ಮೂಲದಿಂದ ಸದೃಢ ಭಾರತ ನಿರ್ಮಿಸಲು ಸಾಧ್ಯ ಎಂದರು.
          ಕ್ರೀಡಾ ಸಂಚಾಲಕರಾದ ಸತೀಶ್‍ಕುಮಾರ್ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕರಾದ ಲಕ್ಷ್ಮೀನಾರಾಯಣ, ಮುನಿರಾಜು ಉಪಸ್ಥಿತರಿದ್ದರು. ಸುಚಿತ್ರ ಸ್ವಾಗತಿಸಿ, ಲಲಿತ ವಂದಿಸಿ, ರೂಪ ಕಾರ್ಯಕ್ರಮ ನಿರೂಪಿಸಿದರು.