ಸಮನ್ವಯ ಸಮಿತಿ ಎಂಬ ಅಗ್ನಿ ಪರೀಕ್ಷೆ

ಬೆಂಗಳೂರು
              ಹಲವು ಏಳು – ಬೀಳುಗಳ ನಡುವೆ ಶತದಿನ ಪೂರೈಸಿರುವ ಮೈತ್ರಿ ಸರ್ಕಾರಕ್ಕೆ ಶುಕ್ರವಾರ ಸಮನ್ವಯ ಸಮಿತಿ ಎಂಬ ಅಗ್ನಿ ಪರೀಕ್ಷೆ ಎದುರಾಗಲಿದೆ.

             ಬಹುದಿನಗಳಿಂದ ಸಭೆ ಸೇರದ ಸಮನ್ವಯ ಸಮಿತಿ ಸಭೆ ಇದೀಗ ನಡೆಯಲಿದ್ದು, ಮೈತ್ರಿ ಸರ್ಕಾರದ ಹತ್ತು ಹಲವು ವಿಷಯಗಳು ಚರ್ಚೆಗೆ ಬರುವ ನಿರೀಕ್ಷೆಯಿದೆ.

              ಖಾಸಗಿ ಲೇವಾದೇವಿಗಾರರಿಂದ ಪಡೆದಿರುವ ಸಾಲವನ್ನು ಮನ್ನಾ ಮಾಡುವ ನಿರ್ಧಾರ ಕೈಗೊಂಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಸಚಿವರ ಗಮನಕ್ಕೆ ತಾರದೇ, ಸಮನ್ವಯ ಸಮಿತಿಯ ಮುಂದೆ ವಿಷಯ ಪ್ರಸ್ತಾಪಿಸದೇ ಕೈಗೊಂಡಿರುವ ನಿರ್ಧಾರಕ್ಕೆ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸುವ ನಿರೀಕ್ಷೆಯಿದೆ.

                ಇದು ನೀತಿ ನಿರ್ಧಾರದ ಪ್ರಶ್ನೆ. ಹೀಗೆ ಏಕಾಏಕಿ ಸಂಪುಟ ಸಭೆಯ ಮುಂದೆ ವಿಷಯ ತಂದು ಅನುಮೋದನೆ ಪಡೆಯುವುದು ಸೂಕ್ತವಲ್ಲ. ಈ ಬಗ್ಗೆ ಸಮಗ್ರ ಚರ್ಚೆ ನಡೆಸಿದ ನಂತರ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುವುದು ಕಾಂಗ್ರೆಸ್ ನಾಯಕರ ವಾದವಾಗಿದೆ.

                 ಈ ಮಧ್ಯೆ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಮುಜುಗರ ಉಂಟು ಮಾಡಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರನ್ನು ಸಮಿತಿಗೆ ಸೇರಿಸಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಟ್ಟು ಹಿಡಿದಿದ್ದಾರೆ. ಆದರೆ ಸಿದ್ದರಾಮಯ್ಯ ಇದಕ್ಕೆ ಸಮ್ಮತಿ ಸೂಚಿಸಿಲ್ಲ. ಇದು ಕೂಡ ಮತ್ತೊಂದು ಪ್ರಮುಖ ವಿಷಯವಾಗಿದೆ.

                  ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಸಿದ್ದರಾಮಯ್ಯ ಅವರ ಹೇಳಿಕೆಯೂ ಸಹ ಜೆಡಿಎಸ್‍ಗೆ ಇರಿಸುಮುರಿಸಾಗಿತ್ತು. ಪದೆ ಪದೆ ಮೈತ್ರಿ ಸರ್ಕಾರಕ್ಕೆ ಮುಜುಗರವಾಗುವಂತಹ ಹೇಳಿಕೆಗಳು ಜೆಡಿಎಸ್ ಸಚಿವ, ಶಾಸಕರನ್ನು ಕೆರಳಿಸಿದ್ದು ಈ ಬಗ್ಗೆ ದೇವೇಗೌಡ ಹಾಗೂ ಮುಖ್ಯಮಂತ್ರಿಗಳಲ್ಲಿಯೂ ಸಹ ದೂರು ನೀಡಲಾಗಿತ್ತು. ಶುಕ್ರವಾರದ ಸಮನ್ವಯ ಸಮಿತಿ ಸಭೆಯಲ್ಲಿ ಈ ಎಲ್ಲ ವಿಷಯಗಳು ಚರ್ಚೆಗೆ ಬರುವ ನಿರೀಕ್ಷೆಯಿದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link