ದಾವಣಗೆರೆ :
ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಲ್ಲಿನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಏನೇ ಸಮಸ್ಯೆಗಳಿದ್ದರೂ ಸರ್ಕಾರದ ಮಟ್ಟದಲ್ಲಿ, ಸಚಿವರು, ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳೊಂದಿಗೆ ನಿರಂತರ ಚರ್ಚೆಯಲ್ಲಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ನಗರದ ಸಕ್ರ್ಯೂಟ್ ಹೌಸ್‍ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯ ಅಭಾವದಿಂದ ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ. ಈ ಹಿನ್ನೆಲೆಯಲ್ಲಿ ಮೊದಲಿಗೆ 2 ತಾಲೂಕು, ನಂತರ 2 ತಾಲೂಕು ಹೀಗೆ ಜಿಲ್ಲೆಯ ಒಟ್ಟು 4 ತಾಲೂಕುಗಳನ್ನು ಬರ ಪೀಡಿತವೆಂದು ಘೋಷಣೆ ಮಾಡಿಸಿದ್ದೇನೆ. ಬರ ಪರಿಹಾರಕ್ಕೆ ಸರ್ಕಾರದಿಂದ ಅನುದಾನವೂ ಬಿಡುಗಡೆ ಮಾಡಿಸಲಾಗಿದೆ. ಅಲ್ಲದೆ, ಆರೇಳು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಸಹ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈಗಾಗಲೇ ಪರಿಹಾರ ಕಾರ್ಯ, ಕುಡಿಯುವ ನೀರು, ಬೆಳೆ ಹಾನಿ ಪರಿಹಾರ ನೀಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿಲಾಗಿದೆ. ಕೊಳವೆ ಬಾವಿ ಕೊರೆಸಲು, ಬೆಳೆ ಪರಿಹಾರ ನೀಡಲು ಜಿಲ್ಲಾಡಳಿತದ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಕೊಳವೆ ಬಾವಿಗಳಿಗೆ ತಿಂಗಳಿಗೆ 18 ಸಾವಿರ ರು. ಬಾಡಿಗೆ ನೀಡಿ, ಜನರಿಗೆ ನೀರೊದಗಿಸಲಾಗುತ್ತಿದೆ. ಅಗತ್ಯವಿದ್ದಲ್ಲಿ ಹೊಸ ಕೊಳವೆ ಬಾವಿ ಕೊರೆಸಲಾಗುವುದು ಎಂದು ಹೇಳಿದರು.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯನ್ನು ಸಂಪುಟ ಸಭೆಗೆ ತಂದು ಮಂಜೂರಾತಿ ಕೊಡಿಸಿದ್ದಲ್ಲದೇ, 482 ಕೋಟಿ ರು.ಗಳನ್ನು ಬಿಡುಗಡೆ ಮಾಡಿಸಿದ್ದೇನೆ. ಜಿಲ್ಲೆಯ ಅಭಿವೃದ್ಧಿಗೆ ನಾನೂ ಸಹ ಒತ್ತು ನೀಡಿದ್ದೇನೆ. ಇಲಾಖೆ ಕಾರ್ಯಗಳ ಜೊತೆಗೆ ದಾವಣಗೆರೆ ಉಸ್ತುವಾರಿ ಸಚಿವನಾಗಿಯೂ ನನ್ನ ಕರ್ತವ್ಯ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ ಎಂದರು.
ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೈಪಿಡಿ ತರಲು ನಿರ್ಧರಿಸಿದ್ದು, ವಿದ್ಯಾವಂತ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸೂಕ್ತ ಮಾಹಿತಿ ಒಳಗೊಂಡ ಕೈಪಿಡಿ ಸಹಕಾರಿಯಾಗಲಿದೆ. ರಾಜ್ಯದ 30 ಜಿಲ್ಲೆಗಳ ಕೈಗಾರಿಕಾ ಸಂಸ್ಥೆಗಳು, ಕೈಗಾರಿಕಾ ಅಧಿಕಾರಿಗಳ ಸಭೆ ನಡೆಸಿದ್ದು, ಕೈಪಿಡಿಯಲ್ಲಿ ಇಡೀ ಸಣ್ಣ ಕೈಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯಗಳು, ಯಾವ್ಯಾವ ಕೈಗಾರಿಕೆಗಳನ್ನು ಸ್ಥಾಪಿಸಬಹುದು ಎಂಬುದೂ ಸೇರಿದಂತೆ ಸಾಕಷ್ಟು ಅಂಶಗಳನ್ನು ಒಳಗೊಂಡಿರಲಿದೆ ಎಂದು ಹೇಳಿದರು.
ಕೈಗಾರಿಕಾ ಪ್ರದೇಶಗಳಲ್ಲಿ ಭೂಮಿ ಹಂಚಿಕೆಯಾಗಿದ್ದರೂ ಈವರೆಗೆ ಕೈಗಾರಿಕಾ ಘಟಕ, ಜವಳಿ ಘಟಕ ಸ್ಥಾಪಿಸದವರಿಗೆ ಕಾಲಮಿತಿಯಲ್ಲೇ ಕೈಗಾರಿಕೆ ಸ್ಥಾಪಿಸುವಂತೆ ಸೂಚನೆ ನೀಡಿದ್ದೇವೆ. ಕೆಐಎಡಿಬಿಯಿಂದ 800 ಜನರಿಗೆ ಸೇಲ್ ಡೀಡ್ ಮಾಡಿಕೊಟ್ಟಿದ್ದು, 2 ವರ್ಷದಲ್ಲಿ ಕೈಗಾರಿಕೆ ಸ್ಥಾಪಿಸದಿದ್ದರೆ ಅಂತಹ ಜಾಗ, ಭೂಮಿಯನ್ನು ವಾಪಾಸ್ಸು ಪಡೆಯುತ್ತೇವೆ ಎಂದರು.
ನಾರು ಉತ್ಪಾದನೆಯಲ್ಲಿ ತಮಿಳುನಾಡು ಹೊರತುಪಡಿಸಿದರೆ, ಕರ್ನಾಟಕ 2ನೇ ಸ್ಥಾನದಲ್ಲಿದೆ. ಆದರೆ, ಕೇರಳ, ತಮಿಳುನಾಡಿನಲ್ಲಿ ನಾರು ಉತ್ಪನ್ನಗಳ ಆಧಾರಿತ ಕೈಗಾರಿಕೆಗಳು ಲಕ್ಷಾಂತರ ಜನರಿಗೆ ಬದುಕನ್ನು ಕೊಟ್ಟಿವೆ. ಅಲ್ಲಿನ ಸರ್ಕಾರಗಳು ನಾರು ಉತ್ಪನ್ನಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಇಲಾಖೆ ಹೊಂದಿದ್ದು, ಕೋಟ್ಯಾಂತರ ರೂ.ಗಳ ವಹಿವಾಟನ್ನು ನಡೆಸುತ್ತಿವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ನಾರು ಉತ್ಪನ್ನಗಳ ಆಧಾರಿತ ಕೈಗಾರಿಕೆ ಸ್ಥಾಪಿಸಲು, ಪ್ರಾಯೋಗಿಕವಾಗಿ ಯಾವುದಾದರೂ ಜಿಲ್ಲೆಯಲ್ಲಿ ನಾರು ಉತ್ಪನ್ನಗಳ ಕೈಗಾರಿಕೆ ಸ್ಥಾಪಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದಲೂ ತಮಿಳುನಾಡು, ಕೇರಳ ರಾಜ್ಯಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲಿಸಿದ್ದೇವೆ. ರಾಜ್ಯದಲ್ಲಿ ಅಪಾರ ಪ್ರಮಾಣದ ನಾರು ಉರುವಲಾಗಿ ಬಳಕೆಯಾಗುತ್ತಿದ್ದು, ಅದರಿಂದ ಉತ್ಪನ್ನ ತಯಾರಿಕೆಗೆ ಉತ್ತೇಜನ ನೀಡಿ, ಉದ್ಯೋಗ ಸೃಷ್ಟಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಟ ಆರ್.ಚೇತನ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಕಾರ್ಯಾಧ್ಯಕ್ಷ ಗಣೇಶ ದಾಸಕರಿಯಪ್ಪ, ಜೆ.ಅಮಾನುಲ್ಲಾ ಖಾನ್, ಎಚ್.ಸಿ.ಗುಡ್ಡಪ್ಪ, ಅಂಜಿನಪ್ಪ ಕಡತಿ, ಆನಂದ್, ಬಾತಿ ಶಂಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
